ರಂಗಭೂಮಿ ಕಲೆ ರಕ್ಷಣೆಗೆ ಯುವಕರು ಶ್ರಮಿಸಬೇಕು
ಗಜೇಂದ್ರಗಡ: ಸಿನಿಮಾ ಅಬ್ಬರದಲ್ಲಿ ರಂಗಭೂಮಿ ಕಲೆ ಕಣ್ಮರೆಯಾಗುತ್ತಿದೆ. ಇದನ್ನು ಉಳಿಸಲು ಯುವ ಪಡೆ ಶ್ರಮಿಸಬೇಕು ಎಂದು ಹಾವೇರಿ ಲೋಕಸಭಾ ವ್ಯಾಪ್ತಿಯ ಕ್ರಾಂಗ್ರೆಸ್ ಕಮಿಟಿ ಉಪಾಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.
ಅವರು ಈಚೆಗೆ ಸಮೀಪದ ಮ್ಯಾಕಲಝರಿ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ಜರುಗಿದ 'ಗರ್ಜಿಸಿದ ಗ್ರಾಮೀಣ ಹುಲಿ' ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನಾಟಕಗಳು ಇಂದಿನ ದಿನಮಾನದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಉಳಿದು ಜನರಿಗೆ ಮನರಂಜನೆಯನ್ನು ಒದಗಿಸುತ್ತವೆ. ಜಾಗತೀಕರಣದ ಭರಾಟೆಯಲ್ಲಿ ರಂಗಕಲೆಗಳು ನಶಿಸುತ್ತಿರುವ ಸಂದರ್ಭದಲ್ಲಿ ತಮ್ಮ ಗ್ರಾಮದವರೇ ರಚಿಸಿದ ಈ ನಾಟಕ ಹೆಚ್ಚು ಪ್ರದರ್ಶನವಾಗಲಿ ಎಂದರು.
ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ ಮಾತನಾಡಿ, ನಾಟಕ ಎಂದರೆ ಒಂದು ಸಾಹಿತ್ಯ ಕೃತಿ, ಇನ್ನೂಂದು ಅಭಿನಯ. ಈ ಎರಡು ಆಯಾಮ ಹೊಂದಿರುವ ಕಲೆ ಜನರಿಗೆ ಶ್ರವ್ಯ ಮತ್ತು ದೃಶ್ಯ ಎಂಬ ಮಾಧ್ಯಮಗಳ ಮುಖಾಂತರ ಮನರಂಜನೆಯನ್ನು ಒದಗಿಸುತ್ತವೆ ಎಂದರು. ಶಿಕ್ಷಕ ಕಾರಡಗಿಮಠ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಮುದಿಯಪ್ಪ ಕರಡಿ, ಶಶಿಧರ ಹೂಗಾರ, ಮಲ್ಲಿಕಾರ್ಜುನ ಅವಾರಿ, ಕುಮಾರ ರಾಠೋಡ, ತಾ.ಪಂ. ಸದಸ್ಯ ಶರಣಪ್ಪ ಡೊಣ್ಣೆಗುಡ್ಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಕಳಕಪ್ಪ ಡೊಳ್ಳಿನ, ಅರ್ಜುನ ರಾಠೋಡ, ಸಂಗಮೇಶ ನವಲಗುಂದ ಸೇರಿ ಇತರರು ಇದ್ದರು.