ರೋಣ: ಬಂಪರ್ ಕಡಲೆ ಫಸಲು ನಿರೀಕ್ಷೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 29
ಉತ್ತಮ ಗುಣಮಟ್ಟದ ಕಡಲೆ ಬೆಳೆ ಕಣಜ ಎಂದೇ ಪ್ರಸಿದ್ಧಿ ಪಡೆದಿರುವ ರೋಣ ತಾಲೂಕಿನ ಸೂಡಿ, ಸವಡಿ, ನಿಡಗುಂದಿ, ಹಾಲಕೇರಿ, ಕೊಪ್ಪ, ನರೇಗಲ್ ಭಾಗಗಳಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಒಣ ಬೇಸಾಯ ಭೂಮಿಯಲ್ಲಿ ಬಿತ್ತನೆ ಮಾಡಿರುವ ಕಡ್ಲಿ ಬೆಳೆ ಈಗ ಹುಲುಸಾಗಿ ಬೆಳೆದು ಬಂಪರ್ ಫಸಲು ಬರುವ ನಿರೀಕ್ಷೆಯಲ್ಲಿದೆ. ಕೀಟ ಬಾಧೆ ತಪ್ಪಿಸಲು ಹಗಲು ರಾತ್ರಿ ಎನ್ನದೇ ಕ್ರಿಮಿನಾಶಕ ಸಿಂಪರಣೆ ಮಾಡಿರುವ ನೇಗಿಲ ಯೋಗಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮಳೆ ಆಶ್ರಿತ ಯರಿ (ಕಪ್ಪು) ಭೂಮಿಯಲ್ಲಿ ರೈತರು ಅಣ್ಣಿಗೇರಿ ತಳಿಯ ಕಡಲೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಬೆಳೆ ಈಗ ಭೂತಾಯಿಗೆ ಹಸಿರು ಸೀರೆ ಉಡಿಸಿದಂತೆ ಲವಲವಿಕೆಯಿಂದ ನಳನಳಿಸುತ್ತಿದೆ. ಉತ್ತಮ ಹವಾಮಾನ ಜತೆಗೆ ಉತ್ತಮ ತೇವಾಂಶ ಇದೆ. ರಸ ಹೀರುವ ಕೀಟಗಳು, ಸಾಂಕ್ರಾಮಿಕ ರೋಗ ತಡೆಗಟ್ಟಲು ರೈತ ಸಮೂಹ ಕ್ರಿಮಿನಾಶಕ ಸಿಂಪಡಿಸಿ ಹತೋಟಿಗೆ ತಂದಿದ್ದಾರೆ.
ವಿದೇಶದಲ್ಲೂ ಭಾರಿ ಬೇಡಿಕೆ
ನಿಡಗುಂದಿ, ನಿಡಗುಂದಿಕೊಪ್ಪ, ಹಾಳಕೇರಿ ಜಕ್ಕಲಿ, ನರೇಗಲ್, ರೋಣ, ಇಟಗಿ, ಸೂಡಿ, ಕಳಕಾಪುರ, ದಿಂಡೂರ ಇನ್ನಿತರ ಗ್ರಾಮಗಳ ಮಳೆಯಾಶ್ರಿತ ಬೆಣ್ಣೆಯಂತಹ ಸಾವಿರಾರು ಎಕರೆ ಕಪ್ಪು ಮಣ್ಣಿನ ಯರಿಭೂಮಿಯಲ್ಲಿ ಬೆಳೆದ ಅಣ್ಣಿಗೇರಿ ತಳಿಯ ಕಡಲೆ ಕಾಳುಗಳಿಗೆ ವಿದೇಶದಲ್ಲೂ ಭಾರಿ ಬೇಡಿಕೆ ಇದೆ. ಕಡಲೆ ಆಹಾರ ಧಾನ್ಯವಾಗಿ ಹೆಚ್ಚಿನ ಮಹತ್ವ ಪಡೆದಿದೆ. ಗದುಗಿನ ಕೃಷಿ ಮಾರುಕಟ್ಟೆ ವಹಿವಾಟು ಮೇಲೆ ಭಾಗಶಃ ಅವಲಂಬಿತವಾಗಿರುವ ಈ ಕಡಲೆ ವಿದೇಶಕ್ಕೂ ರವಾನೆಯಾಗುತ್ತಿದೆ.
ಕಡಲೆ ಬೆಳೆಗೆ ಕ್ರಿಮಿಕೀಟಗಳು ಬರುವುದು ಸಾಮಾನ್ಯವಾಗಿದೆ. ಕ್ರಿಮಿನಾಶಕ ಸಿಂಪಡಿಸಿದಾಗ ಹತೋಟಿಗೆ ಬಂದಿದೆ. ಕಡಲೆ ಬೆಳೆಯ ಕೀಡೆಗಳನ್ನು ಕ್ರಿಮಿನಾಶಕ ಔಷಧಿಗಳ ಸಿಂಪರಣೆ ಮೂಲಕ ನಿಯಂತ್ರಿಸುವುದು ಅಸಾಧ್ಯವೇನಲ್ಲ. ಆದರೆ ಕೃಷಿ ತಜ್ಞರ ಸೂಕ್ತ ಮಾರ್ಗದರ್ಶನ ಪಡೆದು ಸಿಂಪರಣೆ ಮಾಡಿದ ಪ್ರಯುಕ್ತ ಬೆಳೆ ಉತ್ತಮವಾಗಿದೆ ಎಂದು ರೈತರು ತಿಳಿಸಿದರು.
ಬೆಳೆಗೆ ಪೂರಕವಾದ ಚಳಿ
ಮುಂಗಾರು ಮಳೆ ಮುನಿಸಿನಿಂದ ಬಿತ್ತನೆ ಮಾಡಲಾಗದೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ ಅನ್ನದಾತನಿಗೆ ಹಿಂಗಾರು ಬೆಳೆಯ ನಿರೀಕ್ಷೆ ಕೈಗೂಡಿದೆ. ಹುಲುಸಾಗಿ ಬೆಳೆದ ಕಡಲೆ ಬೆಳೆ ಅನ್ನದಾತರಿಗೆ ಭಾರಿ ಆಸೆ ಮೂಡಿಸಿದೆ. ಸದಾ ಸಾಲ, ಸೂಲ ಮಾಡಿಕೊಂಡು ನೂರಾರು ಕನಸು ಕಟ್ಟಿಕೊಂಡ ರೈತಾಪಿ ವರ್ಗಕ್ಕೆ ಕಡಲೆ ಉತ್ತಮ ಫಸಲು ಬರುವ ನಿರೀಕ್ಷೆ ಮೂಡಿಸಿದೆ. ರೈತನೊಂದಿಗೆ ಚೆಲ್ಲಾಟವಾಡುತ್ತಿರುವ ಮಳೆಯಿಂದ ಹಿಂಗಾರು ಬೆಳೆಗೆ ತೇವಾಂಶ ಅನುಕೂಲವಾಗಿದೆ. ಬೆಳೆದು ನಿಂತ ಪೈರು ಕೀಟಬಾಧೆ ತಡೆದು ಬಾನಿನ ಕಡೆಗೆ ಮುಖಮಾಡಿದೆ. ಕಡಲೆ ಬೆಳೆ ಪ್ರಸಕ್ತವರ್ಷ ರೈತರ ಕೈ ಹಿಡಿಯುವುದು ಗ್ಯಾರಂಟಿ.
ನಿಯಂತ್ರಣಕ್ಕೆ ಹೆಣಗಾಟ
ಮುಂಗಾರು ಹಂಗಾಮಿನಲ್ಲಿ ಬರದ ಹೊಡೆತಕ್ಕೆ ಸಿಲುಕಿದ ರೈತ ಹಿಂಗಾರಿನಲ್ಲಿ ಮೂಗಿಗೆ ತುಪ್ಪ ಸವರಿದ ಮಳೆರಾಯನನ್ನು ನಂಬಿದ್ದ. ಮುಂಗಾರಿನ ನಷ್ಟ ಹಾಗೂ ಮಾಡಿದ ಸಾಲ ಚುಕ್ತಾ ಮಾಡಬೇಕಾಯಿತು. ವಾಣಿಜ್ಯ (ಕಡಲೆ) ಬೆಳೆ ಬೆಳೆಯಲು ನಿರ್ಧರಿಸಿ ಬಿತ್ತನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾನೆ ಅನ್ನದಾತ. ಆದರೆ ಇಂದು ಬೆಳೆದುನಿಂತ ಕಡಲೆ ಬೆಳೆ ಫಸಲು ಇನ್ನೂ ಕೆಲ ದಿನದಲ್ಲಿ ರೈತರ ಕೈಸೇರಲಿದೆ.
ಮುಂಗಾರು ಕೈಕೊಟ್ಟು ಸಂಸಾರ ನಡೆಸುವುದು ಕಷ್ಟವಾಗಿದೆ. ಈಗ ಹಿಂಗಾರಿ ಕಡಲೆ ಬೆಳೆ ಪಡೆಯಲು ಸಾಲ ಮಾಡಿ ಬೀಜ, ಗೊಬ್ಬರ ತಂದು ಬಿತ್ತೀವಿ. ಭೂ ತಾಯಿ ವರ ಕೊಡುತ್ತಿದ್ದಾಳೆ. ತನ್ನ ಮಕ್ಕಳಾದ ರೈತರನ್ನು ತಾಯಿ ಎಂದೆಂದಿಗೂ ಕೈಬಿಡುವುದಿಲ್ಲ. ನಮ್ಮ ಬದುಕು ಅರಳಿಸುತ್ತಾಳೆ ನೋಡ್ರಿ.
- ಬಸಪ್ಪ ಸೋಮಗೊಂಡ, ನಿಡಗುಂದಿ ಗ್ರಾಮ ರೈತ
ರೋಣ ತಾಲೂಕಿನಲ್ಲಿ 49 ಸಾವಿರ 66 ಹೆಕ್ಟೇರ್ ಕಡಲೆ ಬೆಳೆ ಬಿತ್ತನೆಯಾಗಿದೆ. ವಾಡಿಕೆಗಿಂತ ಕಡಿಮೆ ಮಳೆ ಬಿದ್ದರೂ ಸಹಿತ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ವಾಯುಭಾರ ಕುಸಿತದ ಪ್ರಭಾವದಿಂದ ಆದ ಮಳೆ ಕಡಲೆ ಫಸಲಿಗೆ ಬೇಕಾದ ತೇವಾಂಶ ಕಾಯ್ದುಕೊಂಡಿದೆ. ಇದರಿಂದ ಎಕರೆಗೆ ಕನಿಷ್ಠ 4ರಿಂದ 5 ಕ್ಷಿಂಟಲ್ ಇಳುವರಿ ಬರುವ ನಿರೀಕ್ಷೆಯಿದೆ.
- ಎಸ್.ಎ. ಸೂಡಿಶೆಟ್ಟರ, ರೋಣ ತಾಲೂಕು ಸಹಾಯಕ ಕೃಷಿ ನಿರ್ದೇಶಕ
-ಡಿ.ಜಿ. ಮೋಮಿನ್