ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿಕ್ಷಕರು ಪ್ರತಿಭಾವಂತರ ಪ್ರೋತ್ಸಾಹಿಸಬೇಕು: ಗುಡಿ

Vishwanath S
Updated On : 30 Dec 2013, 12:28 pm

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಡಿ. 29
ಪ್ರತಿಯೊಂದು ಮಗುವಿನಲ್ಲಿ ವಿಶೇಷವಾದ ಪ್ರತಿಭೆ ಇರುತ್ತದೆ. ಆ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದನ್ನು ಪೋಷಿಸುವ ಹಾಗೂ ಉತ್ತೇಜನ ನೀಡುವ ಕಾರ್ಯವನ್ನು ಶಿಕ್ಷಕರು ಮತ್ತು ಪಾಲಕರು ಮಾಡಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಜೆ.ಬಿ. ಗುಡಿ ಹೇಳಿದರು.
ಅವರು ಶಿಗ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ಜರುಗಿದ ಕಲಿಕೋತ್ಸವ ಹಾಗೂ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ನಮ್ಮ ಮಕ್ಕಳು ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರಿದ್ದಾರೆ ಎಂಬುದನ್ನು ಗುರುತಿಸುವ ಕಾರ್ಯ ಮಾಡಬೇಕು, ನಂತರ ಆ ಮಕ್ಕಳ ಪ್ರತಿಭೆಗೆ ಸೂಕ್ತ ತರಬೇತಿ ನೀಡಿದಲ್ಲಿ ಖಂಡಿತವಾಗಿಯೂ ಆ ಕ್ಷೇತ್ರದಲ್ಲಿ ನಮ್ಮ ಮಕ್ಕಳು ಉತ್ತಮ ಸಾಧನೆ ಮಾಡಬಲ್ಲರು. ಅದಕ್ಕಾಗಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಪಾಲಕರು ಮಾಡಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಸ್. ಶಿರಹಟ್ಟಿ ಮಾತನಾಡಿ, ಶಿಕ್ಷಕರು ಮಕ್ಕಳ ಮನಸ್ಸು ಹಾಗೂ ಭಾವನೆಯನ್ನು ಅರಿತು ಅವರಲ್ಲಿನ ಪ್ರತಿಭೆಗೆ ನೀರೆರೆಯುವ ಕಾರ್ಯ ಮಾಡಬೇಕು. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು. ವಿ.ಬಿ. ಸವಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನಿರ್ಮಲಾ ಬರದೂರ ನೆರವೇರಿಸಿದರು. ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಗ್ರಾಪಂ ಅಧ್ಯಕ್ಷ ಡಿ.ವೈ. ಹುನಗುಂದ, ಬಿ.ಎಸ್. ಈಳಗೇರ, ಪಿಡಿಓ ಬಿ.ಟಿ. ಅಮ್ಮನವರ ಸೇರಿದಂತೆ ಗ್ರಾಪಂ ಸದಸ್ಯರು ಹಾಜರಿದ್ದರು. ನಿರ್ಣಾಯಕರಾಗಿ ಬಿ.ಎಂ. ಕುಂಬಾರ, ಎ.ಎಸ್. ಗುಡಿಸಾಗರ, ಆರ್.ಬಿ. ಪೂಜಾರ, ಎಸ್.ಎಂ. ಮಲ್ಲಣ್ಣವರ ಕಾರ್ಯ ನಿರ್ವಹಿಸಿದರು. ಶಿಕ್ಷಕಿ ಎಲ್.ಎ. ನಡುವಿನಮನಿ ಸ್ವಾಗತಿಸಿದರು. ಎ.ಎಂ. ಗುತ್ತಲ ನಿರೂಪಿಸಿದರು. ಎಂ.ಎಸ್.ಚಾಕಲಬ್ಬಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement