ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸರ್ಕಾರಿ ಕಾಲೇಜು ಸಮಸ್ಯೆ ಸಾವಿರ

Vishwanath S
Updated On : 30 Dec 2013, 12:26 pm

ರಾಣಿಬೆನ್ನೂರು: ತಾಲೂಕಿನ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕು ನೀಡುತ್ತಿರುವ ಮಾರುತಿ ನಗರದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ನೂರಾರು ಸಮಸ್ಯೆಗಳಿಂದ ನರಳುತ್ತಿದೆ.
ಒಂದು ಎಕರೆ 14 ಗುಂಟೆ ಜಾಗೆಯಲ್ಲಿರುವ ಎರಡು ಅಂತಸ್ತುಗಳ ಕಟ್ಟಡ ನೋಡಲು ಸುಂದರವಾಗಿದೆ. ಆದರೆ, ಅದಕ್ಕೆ ಆವರಣ ಗೋಡೆಯೇ ಇಲ್ಲ. ಕಾಲೇಜಿನ ಕಾವಲಿಗೆ ಸಿಪಾಯಿಗಳನ್ನು ನೇಮಿಸಿಲ್ಲ. ರಾತ್ರಿ ವೇಳೆ ಹಾಗೂ ರಜೆ ದಿನಗಳಲ್ಲಿ ಈ ತಾಣ ಅನೈತಿಕ ಚಟುವಟಿಕೆಗೆ ಬಳಕೆಯಾಗುತ್ತಿದೆ. ಕಿಡಿಗೇಡಿಗಳ ಕೃತ್ಯಗಳಿಗೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ಆಗಾಗ ಎಸೆದಿರುವ ಕಲ್ಲುಗಳಿಗೆ ಕಿಟಕಿ ಗಾಜುಗಳು ಒಡೆದು ಹೋಗಿವೆ,
ಬಸ್ ನಿಲ್ದಾಣದಿಂದ ಮೂರು ಕಿ.ಮೀ. ದೂರದಲ್ಲಿರುವ ಈ ಕಾಲೇಜಿನಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳ ಅಧ್ಯಯನಕ್ಕೆ ಅವಕಾಶವಿದೆ. ಪ್ರಸಕ್ತ ಸಾಲಿನಲ್ಲಿ ಈ ಮೂರು ವಿಭಾಗಗಳಲ್ಲಿ ಕ್ರಮವಾಗಿ 206, 246 ಹಾಗೂ 128 ವಿದ್ಯಾರ್ಥಿಗಳಿದ್ದಾರೆ. ಒಟ್ಟು ಸಂಖ್ಯೆ 580. ಈ ಪೈಕಿ ವಿದ್ಯಾರ್ಥಿನಿಯರೇ ಹೆಚ್ಚು. ಗ್ರಾಮಾಂತರ ಪ್ರದೇಶಗಳಿಂದ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
ಆವರಣ ಗೋಡೆಯಿಲ್ಲದ ಕಾರಣ, ಮಳೆಗಾಲದಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ನೆಟ್ಟು ಬೆಳೆಸಿದ ಗಿಡಗಳು ರಕ್ಷಣೆಯಿಲ್ಲದೆ ಸಾಯುತ್ತವೆ. ಕ್ಯಾಂಪಸ್‌ನ ಸುತ್ತ ಕಸದ ರಾಶಿಯೇ ಇದೆ. ಒಡೆದ ಗಾಜಿನ ತುಂಡುಗಳು, ಕುಡುಕರು ಎಸೆದಿರುವ ಖಾಲಿ ಬಾಟಲಿಗಳು ಎಲ್ಲೆಡೆ ಗೋಚರಿಸುತ್ತಿವೆ.
ಕಾಲೇಜಿನ ಸುತ್ತ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ರಸ್ತೆಗಳಿದ್ದು, ತರಗತಿಯಲ್ಲಿ ಕುಳಿತು ಪಾಠ ಕೇಳಲು ವಾಹನಗಳ ಕರ್ಕಶ ಶಬ್ದ ಹಾಗೂ ಹಾರನ್‌ಗಳು ಅಡ್ಡಿ ಮಾಡುತ್ತಿವೆ. ವಿದ್ಯಾರ್ಥಿನಿಯರಿಗಂತೂ ಪೋಲಿಗಳ ಕಾಟ ಹೇಳತೀರದು. ಇದನ್ನು ತಪ್ಪಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ.
ಕೊಠಡಿ ಹೆಚ್ಚಿಸಿ: 2001-02ರಲ್ಲಿ ನಗರದ ಮುನ್ಸಿಪಲ್ ಹೈಸ್ಕೂಲ್ ಕಟ್ಟಡದಲ್ಲಿ ಕಲಾ ವಿಭಾಗದೊಂದಿಗೆ ಆರಂಭವಾದ ಕಾಲೇಜಿಗೆ ವಿದ್ಯಾರ್ಥಿಗಳು ಹಾಗೂ ಪಾಲಕರ ಅಪೇಕ್ಷೆಯಂತೆ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳನ್ನು ಅಳವಡಿಸಲಾಯಿತು. ಸ್ವಂತ ಕಟ್ಟಡವಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರಿಂದ ಕೊಠಡಿಗಳ ಕೊರತೆ ಎದುರಾಗಿದೆ. ಪ್ರತಿ ವರ್ಷ ಶೇ. 100 ಫಲಿತಾಂಶ ಪಡೆಯುವ ಕಾಲೇಜೆಂಬ ಖ್ಯಾತಿ ಇದ್ದರೂ ಸೌಲಭ್ಯ ಒದಗಿಸಲು ಅಧಿಕಾರಿಗಳು, ಜನ ಪ್ರತಿನಿಧಿಗಳು ನಿರಾಸಕ್ತಿ ತೋರುತ್ತಿದ್ದಾರೆ. ಸ್ಥಳೀಯ ಶಾಸಕ ಕೆ.ಬಿ. ಕೋಳಿವಾಡ ಅವರಿಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದು, ಸರ್ಕಾರದ ಜತೆಗೂ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ.
ಕಾಲೇಜಿನಲ್ಲಿರುವ ವಿಜ್ಞಾನ ವಿಭಾಗಕ್ಕೆ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ಪ್ರಯೋಗಾಲಯಗಳ ಅಗತ್ಯವಿದೆ. ಮೂರು ವಿಭಾಗಗಳಿಗೆ ಪ್ರತ್ಯೇಕ ಬೋಧಕರ ಕೊಠಡಿಗಳು, ಪ್ರಾಚಾರ್ಯರ ಕೊಠಡಿ, ವಿದ್ಯಾರ್ಥಿಗಳ ಅಧ್ಯಯನ ಕೊಠಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಬಯಲು ರಂಗಮಂದಿರ ಬೇಕಾಗಿದ್ದು, ಶಾಸಕರಿಗೆ ಪತ್ರ ಬರೆದಿರುವುದಾಗಿ ಪ್ರಾಚಾರ್ಯೆ ಲೀಲಾವತಿ ಬುಕ್ಕಶೆಟ್ರ ತಿಳಿಸಿದರು.
ಕಾಲೇಜಿನ ಕಾಂಪೌಂಡ್ ನಿರ್ಮಿಸಿಕೊಟ್ಟಲ್ಲಿ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಶ್ರಮದಾನದ ಮುಖಾಂತರ ವಿವಿಧ ಸಸಿಗಳನ್ನು ನೆಟ್ಟು, ಹಸಿರು ವನ ನಿರ್ಮಿಸಲು ಸಾಧ್ಯವಾಗುತ್ತದೆ. ಆವರಣವನ್ನು ಸ್ವಚ್ಛಗೊಳಿಸಿ, ಒಡೆದು ಹೋಗಿರುವ ಗಾಜುಗಳನ್ನು ಮತ್ತೆ ಜೋಡಿಸಬೇಕಿದೆ. ಇಲ್ಲದಿದ್ದರೆ ಗಾಳಿ-ಮಳೆ-ಧೂಳಿನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ನಗರಸಭೆ ಅಧ್ಯಕ್ಷರು, ಶಾಸಕರು ಗಮನ ಹರಿಸಿ, ಸೌಲಭ್ಯ ಕಲ್ಪಿಸಲು ಮುಂದಾಗಬೇಕೆಂದು ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಚ್.ಎಂ. ದೊಡ್ಡಬಿಲ್ಲ ಮನವಿ ಮಾಡಿಕೊಂಡರು.



-ಸಾಬ್ಜನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement