ಅಪಾಯ ಆಹ್ವಾನಿಸುವ ವಿದ್ಯುತ್ ತಂತಿಗಳು
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 30
ಸಮೀಪದ ಗೋಗೇರಿ ಗ್ರಾಮದ ತುಳಜಾ ಭವಾನಿ ದೇವಸ್ಥಾನ ಮುಂದಿರುವ ರಸ್ತೆ ಬದಿಯಲ್ಲಿ ನಿವಾಸಿಗಳ ಬದುಕಿಗೆ ಬೆಳಕು ನೀಡಬೇಕಾದ ವಿದ್ಯುತ್ ತಂತಿಗಳು ಪ್ರಾಣಕ್ಕೆ ಎರವಾಗಿದೆ.
ಗ್ರಾಮ ರಸ್ತೆ ಬದಿ ನಿರ್ಮಿಸುತ್ತಿರುವ ಮನೆ ಮೇಲ್ಗಡೆ ಹೈಟೆನ್ಷನ್ ವಿದ್ಯುತ್ ತಂತಿಗಳು ಜನತೆಗೆ ಭಯ ಹೆಚ್ಚಿಸಿದೆ. ರಸ್ತೆ ಮೇಲ್ಗಡೆ ಹೈ ವೋಲ್ಟೇಜ್ ವಿದ್ಯುತ್ ತಂತಿಗಳು ತೀರಾ ಕೆಳಮಟ್ಟದಲ್ಲಿ ಇರುವುದರಿಂದ ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಜನರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಸಂಚಾರಿಗಳು ಹಾಗೂ ನಿವಾಸಿಗಳು ಜೀವಭಯಕ್ಕೆ ಒಳಗಾಗಿ ಪರದಾಡುತ್ತಿದ್ದಾರೆ.
ಈ ರಸ್ತೆಯ ಮೂಲಕ ಗ್ರಾಮದ ನಿವಾಸಿಗಳು ಹಾಗೂ ಸಾರ್ವಜನಿಕರು ಗ್ರಾಪಂ ಕಾರ್ಯಾಲಯಕ್ಕೆ ಸಂಚರಿಸುತ್ತಾರೆ. ಇಂತಹ ಮುಖ್ಯ ರಸ್ತೆ ಮಧ್ಯೆದಲ್ಲಿ ಕೆಳಗಿರುವ ಹೈಪವರ್ ವಿದ್ಯುತ್ ತಂತಿಗಳು ಸಂಚಾರಿಗಳಿಗೆ ಹೆದರಿಕೆ ಹುಟ್ಟಿಸಿವೆ. ಕಂಬದಿಂದ ಮತ್ತೊಂದು ಕಂಬಕ್ಕೆ ಉದ್ದ ಹೆಚ್ಚಿಗೆ ಇರುವುದರಿಂದ ವಿದ್ಯತ್ ತಂತಿಗಳು ಕೆಳಮಟ್ಟದಲ್ಲಿವೆ. ಮಧ್ಯದಲ್ಲಿ ಮತ್ತೊಂದು ಕಂಬ ಹಾಕಿದರೆ ಸಮಸ್ಯೆ ಶಾಶ್ವತವಾಗಿ ಬಗೆ ಹರಿಯಲಿದೆ. ಹೊಸದೊಂದು ಕಂಬ ಹಾಕಲು ಹೆಸ್ಕಾಂ ಆಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಳಗಡೆ ಇರುವ ವಿದ್ಯುತ್ ತಂತಿಗಳಿಂದ ನಿವಾಸಿಗಳು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಲವಾರು ವರ್ಷಗಳ ಈ ಸಮಸ್ಯೆ ಬಗೆಹರಿಸಲು ಹೆಸ್ಕಾಂ ಇಲಾಖೆ ಸೂಕ್ತ ಕ್ರಮಕೈಗೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನೀಗಿಸಲು ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಿದೆ.