ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೌರವಕ್ಕಾಗಿ ಶೌಚಾಲಯ ನಿರ್ಮಿಸಿಕೊಳ್ಳಿ

Lingaraj Badiger
Updated On : 31 Dec 2013, 1:34 am

ಕನ್ನಡಪ್ರಭ ವಾರ್ತೆ, ಗದಗ, ಡಿ. 30
ಕುಟುಂಬದ ಗೌರವಕ್ಕಾಗಿ ಶೌಚಾಲಯ ನಿರ್ಮಿಸಿಕೊಂಡು, ಗ್ರಾಮವನ್ನು ಸ್ವಚ್ಛವಾಗಿಡಲು ಸಹಕಾರ ನೀಡುವಂತೆ ತಾಪಂ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.
ಅವರು ಈಚೆಗೆ ತಾಲೂಕಿನ ಅಡವಿಸೋಮಾಪುರ ಗ್ರಾಮದ ಮನೆ ಮನೆಗೆ ತೆರಳಿ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಮನೆಯಲ್ಲಿರುವ ವೃದ್ಧರಿಗೆ, ಹೆಣ್ಣು ಮಕ್ಕಳಿಗೆ, ಮಹಿಳೆಯರ ಮಾನ ಕಾಪಾಡುವುದು ಮಹತ್ವದ ಕಾರ್ಯವಾಗಿದೆ. ಇದನ್ನು ಕುಟುಂಬದ ಗೌರವಕ್ಕಾಗಿ ಹಿರಿಯರು, ಪ್ರಜ್ಞಾವಂತ ನಾಗರಿಕರು, ಯುವಕರು ಯೋಚಿಸಬೇಕು. ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸುವುದರಿಂದ ಪರಿಸರ ಹಾಗೂ ಜನರ ಆರೋಗ್ಯ ಕಾಪಾಡಬೇಕು. ಶೌಚಾಲಯ ನಿರ್ಮಿಸಿಕೊಂಡರೆ ಸರ್ಕಾರ ಹಣ ನೀಡಲಿ ಅಥವಾ ಬಿಡಲಿ ನಮಗೋಸ್ಕರವಾಗಿ ಮನೆಯಲ್ಲಿ ದೇವರ ಕೊಣೆ, ಅಡುಗೆ ಮನೆ, ಸ್ನಾನ ಗೃಹ ವಿವಿಧ ಕೋಣೆ ಹೇಗೆ ನಿರ್ಮಿಸಿಕೊಳ್ಳುತ್ತೇವೆ ಹಾಗೆ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು. ಮನೆಯಲ್ಲಿ ಎಲ್ಲ ಸೌಲಭ್ಯ ಪಡೆಯಬೇಕು ಎಂದರು. ಮನೆಯಲ್ಲಿ ಮಹಿಳೆಯರು ಶೌಚಾಲಯ ಬೇಕು ಎಂದು ಮನಸ್ಸು ಮಾಡಿದರೆ ಮನೆಯ ಹಿರಿಯರು ತಾವಾಗಿಯೇ ಶೌಚಾಲಯ ನಿರ್ಮಿಸುತ್ತಾರೆ. ಅದಕ್ಕೆ ಮಹಿಳೆಯರು ಘಟ್ಟಿಯಾಗಿ ನಿಲ್ಲಬೇಕೆಂದು ಹೇಳಿದರು. ಶೌಚಾಲಯ ನಿರ್ಮಿಸಿಕೊಂಡರೆ ಎಷ್ಟು ಹಣ ಕೊಡುತ್ತೀರಿ ನೀವು, ಕೊಟ್ಟ ಹಣ ಸಾಲದು ಎಂಬ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಅವರು, ನಿಮ್ಮ ಸ್ವಂತಕ್ಕೆಂದು ಮನೆ ನಿರ್ಮಿಸಿಕೊಳ್ಳುತ್ತೀರಿ ಹಾಗೆಯೇ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸುವುದು ನಿಮ್ಮ ಕರ್ತವ್ಯವಾಗಿದೆ ಎಂದರು. ಸರ್ಕಾರ ನಿರ್ಮಲ ಭಾರತ ಅಭಿಯಾನ ಯೋಜನೆ ಅಡಿ ರು. 4,700 ಪ್ರೋತ್ಸಾಹಧನ ಜತೆಗೆ ಕೇಂದ್ರ ಸರ್ಕಾರದ ಮಹತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರು. 4,500 ನೀಡಲಾಗುವುದು. ಇನ್ನು ಪರಿಶಿಷ್ಟ ಜಾತಿ ಜನಾಂಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ರು. 5 ಸಾವಿರ ನೀಡಲಾಗುವುದು ಎಂದರು. ಗ್ರಾಪಂ ಉಪಾಧ್ಯಕ್ಷೆ ನಾಗವ್ವ ಹುಡೇದ, ಸದಸ್ಯ ಚನ್ನಪ್ಪ ಅಂಗಡಿ, ಮಲ್ಲಪ್ಪ ಹೊಸಳ್ಳಿ, ಮಾಬುಸಾಬ್ ಹರಿವಾಣ, ಮಾಲಾ ಮೇವುಂಡಿ, ಕಲ್ಲವ್ವ ತಳವಾರ, ಗಂಗವ್ವ ದೊಡ್ಡಮನಿ, ತುಕಾರಾಮ ಹುಲಗಣ್ಣವರ, ಹನುಮಂತ ಹೊಂಬಳ ಸೇರಿದಂತೆ ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಊರಿನ ನಾಗರಿಕರು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement