ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪಹಣಿ ಪತ್ರಕ್ಕಾಗಿ ಪರದಾಟ

Lingaraj Badiger
Updated On : 31 Dec 2013, 1:34 am

ಕನ್ನಡಪ್ರಭ ವಾರ್ತೆ, ನರಗುಂದ, ಡಿ. 30
ಹಿಂಗಾರು ಹಂಗಾಮಿನ ಬೆಳೆಗಳಾದ ಗೋದಿ, ಕಡಲೆ, ಸೂರ್ಯಕಾಂತಿ, ಕುಸುಬಿ, ಅಗಸಿ, ಮುಸಕಿನ ಜೋಳ, ಸೇರಿದಂತೆ ವಿವಿಧ ಬೆಳಗಳಿಗೆ ಬೆಳೆ ವಿಮೆ ತುಂಬಲು ಡಿ. 31 ಕೊನೆಯ ದಿನವಾಗಿದ್ದು, ರೈತರು ನಗರದ ಹಳೆ ತಹಸೀಲ್ದಾರ್ ಕಚೇರಿ ಸೇರಿದಂತೆ ಪಹಣಿ ಪತ್ರಗಳು ಲಭ್ಯವಾಗುವ ಕಚೇರಿಯ ಮುಂಭಾಗದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಸಾಲುಗಟ್ಟಿ ನಿಂತರೂ ಸರಿಯಾದ ಸಮಯಕ್ಕೆ ಪಹಣಿ ಪತ್ರಗಳು ಸಿಗದೇ ಪರದಾಡುತ್ತಿದ್ದಾರೆ.
ರೈತರಿಗೆ ಕಂದಾಯ ಇಲಾಖೆ ಅಥವಾ ಕೃಷಿ ಇಲಾಖೆಯವರು ಮುಂಚಿತವಾಗಿ ಬೆಳೆ ವಿಮೆ ತುಂಬಲ ಇಂತಹ ದಾಖಲೆಗಳು ಬೇಕು ಎಂದು ತಿಳಿಸಿದ್ದರೆ ಮೊದಲೇ ಅವುಗಳನ್ನು ಸಿದ್ಧಪಡಿಸಿಕೊಂಡು ಇಡುತ್ತಾರೆ. ಆದರೆ, ರೈತರಿಗೆ ಮುಂಚಿತವಾಗಿ ಯಾವುದೇ ಮಾಹಿತಿ ನೀಡದೇ ಇರುವ ಹಿನ್ನೆಲೆಯಲ್ಲಿ ರೈತರು ಬೆಳೆ ವಿಮೆ ತುಂಬುವ ಕಡೆ ಎರಡು ದಿನ ಇದ್ದಾಗ ಗೊತ್ತಾಗಿ ಒಮ್ಮೆಲೆ ಎಲ್ಲರೂ ಪಹಣಿ ಪತ್ರ ಪಡೆಯಲು ಧಾವಿಸಿರುವುದರಿಂದ ಪಹಣಿ ಪತ್ರ ದೊರೆಯದೇ ಗೋಳಾಡುತ್ತಿದ್ದಾರೆ. ಈ ಸಮಸ್ಯೆ ಹಿಂದಿನಿಂದಲೂ ಹೀಗೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಲಕ್ಷ ವಹಿಸದೇ ತಮ್ಮ ಬೇಜವಾಬ್ದಾರಿತನದಿಂದ ರೈತರು ಕಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಅವಧಿ ಮುಂದೂಡಿ: ಬೆಳೆ ವಿಮೆ ತುಂಬುವ ಅವಧಿಯನ್ನು 2014ನೇ ಜನವರಿ 15 ರವರೆಗೆ ವಿಸ್ತರಿಸಿದರೆ ಮಾತ್ರ ಎಲ್ಲ ರೈತರು ಈ ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ. ಆದರೆ, ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ.
ಕೇವಲ ಕಾಟಾಚಾರಕ್ಕೆ ಎನ್ನುವ ರೀತಿಯಲ್ಲಿ ಈ ಯೋಜನೆಯ ಅನುಷ್ಠಾನದ ಬಗ್ಗೆ ಚಿಂತಿಸುತ್ತಿದ್ದಾರೆ. ಈ ಬಾರಿ ತೇವಾಂಶದ ಕೊರತೆಯಿಂದ ರೈತರಿಗೆ ಸಾಕಷ್ಟು ಬೆಳೆ ನಷ್ಟವಾಗಲಿದ್ದು, ವಿಮೆ ಸೌಲಭ್ಯ ಪಡೆಯುವುದು ರೈತರಿಗೆ ಅತಿ ಅವಶ್ಯವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ರೈತರ ಕೈ ತಪ್ಪುವ ಸಾಧ್ಯತೆ ಇದೆ.

ಪಹಣಿ ಪತ್ರ ವಿತರಣಾ ಕೇಂದ್ರಗಳನ್ನು ಹೆಚ್ಚು ತೆರೆಯಿರಿ: ರೈತರ ಆಗ್ರಹ

ಪಟ್ಟಣದ ಹಳೆ ತಹಸೀಲ್ದಾರ್ ಕಾರ್ಯಾಲದಲ್ಲಿ ಮತ್ತು ಕೊಣ್ಣೂರ ನಾಡ ಕಚೇರಿಯಲ್ಲಿ ಮಾತ್ರ ಪಹಣಿ ಪತ್ರ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಪಹಣಿ ಪತ್ರ ಪಡೆದುಕೊಳ್ಳಲು ಪರದಾಡಬೇಕಾದ ಸ್ಥಿತಿ ಇದೆ. ರೈತರು ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ತುಂಬುವ ಸಮಯದಲ್ಲಿ ಹೆಚ್ಚು ಪಹಣಿ ಪತ್ರಗಳ ಕೇಂದ್ರಗಳನ್ನು ತೆರೆದರೆ ತಾಲೂಕಿನ ಎಲ್ಲ ರೈತರಿಗೆ ಅನುಕೂಲವಾಗುತ್ತದೆ. ನಮಗೆ ಈ ಯೋಜನೆ ಬಗ್ಗೆ ತಿಳಿಸಿದ್ದರೂ ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳ ಬಗ್ಗೆ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡಿಲ್ಲ. ಹಾಗಾಗಿ ಕೊನೆಯ ಕ್ಷಣದಲ್ಲಿ ತಿಳಿದ ಹಿನ್ನೆಲೆಯಲ್ಲಿ ಪಹಣಿ ಪತ್ರಗಳನ್ನು ಪಡೆಯಲು ಬಂದಿದ್ದೇವೆ. ಆದರೆ ಇಲ್ಲಿ ಸಾಕಷ್ಟು ಗದ್ದಲವಿದ್ದು, ಕೊನೆಯ ದಿನಾಂಕದೊಳಗಾಗಿ ನಮಗೆ ಎಲ್ಲ ದಾಖಲೆಗಳನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ತಕ್ಷಣವೇ ಸರ್ಕಾರ ಬೆಳೆ ವಿಮೆ ಭರ್ತಿ ಮಾಡುವ ದಿನಾಂಕವನ್ನು ವಿಸ್ತರಿಸಬೇಕು.
- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement