ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮರ್ಪಕ ವಿದ್ಯುತ್, ಟಿಸಿ ನೀಡಲು ಆಗ್ರಹ

Lingaraj Badiger
Updated On : 31 Dec 2013, 1:34 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಡಿ. 30
ಗ್ರಾಮಾಂತರ ಪ್ರದೇಶಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಪರಿವರ್ತಕಗಳನ್ನು ಒದಗಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರು ಸೋಮವಾರ ಹೆಸ್ಕಾಂ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಪ್ರಶಾಂತ ಕಲಾಲ ಮಾತನಾಡಿ, ಗಜೇಂದ್ರಗಡ ವ್ಯಾಪ್ತಿಯ ಸುತ್ತಲಿನ 42 ಗ್ರಾಮಗಳಲ್ಲಿ ಹೆಸ್ಕಾಂ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದೆ. ಜತೆಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ನಿಲುಗಡೆಗೊಳಿಸುವುದರಿಂದ ಗ್ರಾಮೀಣ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅನಿಯಮಿತ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳಿಗೆ ಓದಲು ತೊಂದರೆಯಾಗುತ್ತಿದೆ. ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಹೇಳುವ ಸರ್ಕಾರ ಮೇಲಿಂದ ಮೇಲೆ ವಿದ್ಯುತ್ ಸ್ಥಗಿತಗೊಳಿಸಿ ಗ್ರಾಮೀಣ ಭಾಗದ ರೈತರ, ವಿದ್ಯಾರ್ಥಿಗಳ ಮತ್ತು ಕೂಲಿ ಕಾರ್ಮಿಕರ ಬದುಕಿನ ಜತೆ ಚಲ್ಲಾಟವಾಡುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅನಿಯಮಿತ ವಿದ್ಯುತ್ ಕಡಿತದಿಂದಾಗಿ ಹಳ್ಳಿಗಳಲ್ಲಿ ರಾತ್ರಿ ವೇಳೆ ಕಳ್ಳತನದಂತಹ ಪ್ರಕರಣಗಳು ನಡೆಯುತ್ತವೆ ಹಾಗೂ ಕೊಳವೆ ಬಾವಿ ಆಶ್ರಿತ ನೀರಾವರಿ ಕೃಷಿಕರು ತೀವ್ರ ತೊಂದರೆಗೀಡಾಗಿದ್ದಾರೆ. ಇನ್ನೊಂದೆಡೆ ರೈತರ ಜಮೀನುಗಳಲ್ಲಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು ದುರಸ್ತಿಯಲ್ಲಿದ್ದರೆ ಅವುಗಳನ್ನು ದುರಸ್ತಿಗೊಳಿಸಲು ಟಿಸಿ ದುರಸ್ತಿ ಗುತ್ತಿಗೆದಾರರು ಕೃಷಿಕರಿಂದ ರು. 1 ಸಾವಿರದಂತೆ ಟಿಸಿವೊಂದಕ್ಕೆ ರು. 20 ಸಾವಿರವರೆಗೆ ಹಣ ಪಡೆಯುತ್ತಾರೆ. ಆದರೂ ಸಮಯಕ್ಕೆ ಸರಿಯಾಗಿ ಪರಿವರ್ತಕಗಳನ್ನು ದುರಸ್ತಿ ಮಾಡುವುದಿಲ್ಲ ಎಂದು ದೂರಿದ ಅವರು, ಕೂಡಲೇ ಗ್ರಾಮಾಂತರ ಪ್ರದೇಶಕ್ಕೆ ನಿತ್ಯ ಕನಿಷ್ಠ 6 ಗಂಟೆ ಸತತ ವಿದ್ಯುತ್ ಪೂರೈಕೆ ಮಾಡಬೇಕು ಮತ್ತು ಗುಣಮಟ್ಟದ ವಿದ್ಯುತ್ ಟಿಸಿಗಳನ್ನು ಅಳವಡಿಸಲು ಮುಂದಾಗದಿದ್ದಲ್ಲಿ ರೈತರೊಂದಿಗೆ ಸಂಘಟನೆ ವತಿಯಿಂದ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದರು.
ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ರಾಜೂರ ಹಾಗೂ ಹೆಸ್ಕಾಂ ಅಧಿಕಾರಿ ಎಸ್.ಬಿ. ಮಹಾಮನಿ ಸಂಘಟಿಕರಿಂದ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ನಗರ ಘಟಕ ಅಧ್ಯಕ್ಷ ರವಿ ಭಜಂತ್ರಿ, ಉಪಾಧ್ಯಕ್ಷ ರಾಕೇಶ ಮಾರನಬಸರಿ, ಶಂಕರ ಚನ್ನಿ, ಕುಮಾರ ಜುಂಜಾ, ರಂಜಾನಸಾಬ ಸಂಕನೂರ, ಮಂಜು ಅಜಮೀರ, ಇಜಾಜ್ ನದ್ದಿಮುಲ್ಲಾ, ಮಹಾಂತೇಶ ಪವಾರ, ಅಲಿ ಅದಿಲ್‌ಶಾ ಮುಧೋಳ, ವಿನಾಯಕ ಪಾಟೀಲ, ನವೀನ ದೇಸಾಯಿ, ಸಚಿನ ಬೂದಿಹಾಳ, ಬಸವರಾಜ ರೇವಡಿ, ಪ್ರವೀಣ ಹಿರೇಮಠ, ಅಬ್ದುಲ್ ಮುಚ್ಚಾಲಿ, ಅಕ್ಷಯ ವನ್ನಾಲ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement