ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ಜಿಲ್ಲೆಯ ಪಾಲಿಗೆ 2013ರ ಬೇವು-ಬೆಲ್ಲ

Vishwanath S
Updated On : 1 Jan 2014, 12:54 pm

ಗದಗ: 2013ನೇ ವರ್ಷ ಜಿಲ್ಲೆಯ ಜನತೆಯ ಪಾಲಿಗೆ ಸಿಹಿ-ಕಹಿ ಎರಡನ್ನೂ ನೀಡಿದೆ. ಹಲವು ರೀತಿಯ ದುರಂತ ಘಟನೆಗಳು, ರೈತರ ಪ್ರತಿಭಟನೆ, ಉತ್ತರಾಖಂಡದ ಕಾಪ್ಟರ್ ದುರಂತದಲ್ಲಿ ಜಿಲ್ಲೆಯ ಯೋಧ ಸಾವು, ಜಿಲ್ಲೆಗೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಭೇಟಿ, ಜಿಲ್ಲೆಯ ರಾಜಕೀಯದಲ್ಲಿ ಹೊಸ ಗಾಳಿ, ಹೀಗೆ ಹಲವಾರು ಘಟನೆಗಳು ನಡೆದು ರಾಜ್ಯದ ಗಮನ ಸೆಳೆದಿವೆ.
ಇದು ಜಿಲ್ಲೆಯ ಪಾಲಿಗೆ ಯಾವುದೇ ವಿಶೇಷ ಅಭಿವೃದ್ಧಿ ಯೋಜನೆಗಳಿಲ್ಲದೆಯೇ ಮುಗಿದು ಹೋದ ವರ್ಷವಾಗಿದೆ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಬಿಜೆಪಿಗೆ ದೊಡ್ಡ ಪಾಠವನ್ನೇ ಜಿಲ್ಲೆಯ ಜನತೆ ಕಲಿಸಿದ್ದು 2013ರ ಪ್ರಮುಖ ವಿದ್ಯಮಾನಗಳಲ್ಲೊಂದಾಗಿದೆ. ಹಲವಾರು ವರ್ಷಗಳಿಂದ ಗದಗ, ಬೆಟಗೇರಿ ಅವಳಿ ನಗರದ ಜನತೆ ಎದುರಿಸುತ್ತಿರುವ ಕುಡಿವ ನೀರಿನ ಸಮಸ್ಯೆ ಮಾತ್ರ ಹಾಗೆಯೇ ಮುಂದಿನ ವರ್ಷಕ್ಕೆ ಮುಂದುವರಿದಿದೆ.
ರಾಜಕೀಯ ಬಿರುಗಾಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಯಶಸ್ಸು ಸಾಧಿಸುವ ಮೂಲಕ ಜಿಲ್ಲೆಯಲ್ಲಿ ಹೊಸ ರಾಜಕೀಯ ಗಾಳಿಗೆ ಕಾರಣವಾಯಿತು. ಸತತ ಸೋಲಿನಿಂದ ಕಂಗಾಲಾಗಿದ್ದ ಎಚ್.ಕೆ.ಪಾಟೀಲ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಮತ್ತೆ ಅಧಿಕಾರದ ಗದ್ದುಗೆ ಹಿಡಿಯುತ್ತೇವೆ ಎನ್ನುವ ಕನಸಿನಲ್ಲಿದ್ದ ಕಳಕಪ್ಪ ಬಂಡಿ, ಸಿ.ಸಿ.ಪಾಟೀಲ, ರಾಮಣ್ಣ ಲಮಾಣಿ ಸೋಲು ಅನುಭವಿಸಿದರು.
ಗುಂಡೇಟು: ಸಿ.ಸಿ. ಪಾಟೀಲ ಅವರ ಅಂಗರಕ್ಷಕನ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ಅವರಿಗೆ ತಗುಲಿ, 8 ತಿಂಗಳ ಚಿಕಿತ್ಸೆಯ ನಂತರ ಅವರು ಗುಣಮುಖರಾದರು.
ಮೂರು ಜಿಲ್ಲಾಧಿಕಾರಿಗಳು: 2013ರಲ್ಲಿ ಗದಗ ಜಿಲ್ಲೆ 3 ಜಿಲ್ಲಾಧಿಕಾರಿಗಳನ್ನು ಕಾಣಬೇಕಾಯಿತು. ಜಿಲ್ಲಾಧಿಕಾರಿಯಾಗಿದ್ದ ಪಾಂಡುರಂಗ ನಾಯಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡರು. ನಂತರ ಅವರ ಸ್ಥಾನಕ್ಕೆ ಬಂದ ಎಸ್.ಟಿ.ಅಂಜನ್‌ಕುಮಾರ ವಿಧಾನಸಭಾ ಚುನಾವಣೆಯ ನಂತರ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದಿದರು. ಅವರ ನಂತರ ಬಂದ ಎನ್.ಎಸ್. ಪ್ರಸನ್ನಕುಮಾರ ಸದ್ಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಜಿಪಂ ಸಿಇಒ ವೀರಣ್ಣ ತುರಮರಿ ಅವರಿಗೂ ವರ್ಗಾವಣೆಯಾದರೂ ಕೊನೆ ಕ್ಷಣದಲ್ಲಿ ಅವರು ಗದಗ ಜಿಲ್ಲೆಯಲ್ಲಿಯೇ ಉಳಿದಿದ್ದು ಗಮನಾರ್ಹ.
ಜಿಲ್ಲೆಗೆ ಪ್ರಮುಖರ ಭೇಟಿ: ಮಾರ್ಚ್ 12 ರಂದು ಅಣ್ಣಾ ಹಜಾರೆ ಗದುಗಿಗೆ ಆಗಮಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ರಾಜಸ್ಥಾನ ರಾಜ್ಯಪಾಲ ಮಾರ್ಗರೇಟ್ ಆಳ್ವಾ ಅವಳಿ ನಗರದಲ್ಲಿನ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿದರು. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ಎಚ್.ಕೆ. ಪಾಟೀಲರ ಶುದ್ಧ ಕುಡಿವ ನೀರಿನ ಘಟಕಗಳ ಅಧ್ಯಯನಕ್ಕಾಗಿ ಶಿರಹಟ್ಟಿ ಹಾಗೂ ಗದಗ ತಾಲೂಕಿಗೆ ಆಗಮಿಸಿ ಅಧ್ಯಯನ ನಡೆಸಿತು.
ಮುಗಿಯದ ಗೊಂದಲ: ಈ ಹಿಂದಿನ ಬಿಜೆಪಿ ಸರ್ಕಾರ ಕೊನೆ ಅವಧಿಯಲ್ಲಿ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಪಟ್ಟಣಗಳನ್ನು ತಾಲೂಕು ಕೇಂದ್ರಗಳನ್ನಾಗಿ ಘೋಷಣೆ ಮಾಡುವ ಮೂಲಕ ಜಿಲ್ಲೆಗೆ ಮಹತ್ತರ ಕೊಡುಗೆ ನೀಡಿದ್ದರು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರ ಮಾತ್ರ ನೂತನ ತಾಲೂಕುಗಳ ರಚನೆಯ ವಿಷಯವನ್ನು ಹಾಗೆಯೇ ನಿಲ್ಲಿಸಿದ್ದು, ಇಲ್ಲಿನ ಜನರಲ್ಲಿ ಬೇಸರ ತಂದಿದೆ.
ಯೋಧ ಸಾವು: ಉತ್ತರಾಖಂಡ್ ಪ್ರವಾಹದಲ್ಲಿ ಸಿಲುಕಿದ್ದ ಯಾತ್ರಾರ್ಥಿಗಳನ್ನು ರಕ್ಷಿಸಲು ತೆರಳಿದ್ದು ಹೆಲಿಕಾಪ್ಟರ್ ದುರಂತದಲ್ಲಿ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಬಸವರಾಜ ಯರಗಟ್ಟಿ ಮೃತಪಟ್ಟರು. ಬೇರೆ, ಬೇರೆ ಘಟನೆಗಳು ಸೇರಿದಂತೆ 3 ಯೋಧರು ಪ್ರಾಣತ್ಯಾಗ ಮಾಡಿದ್ದಾರೆ.
ಹತ್ತಾರು ಸಮಸ್ಯೆಗಳ ಮಧ್ಯದಲ್ಲಿಯೇ ಕೆಲವಾರು ಉತ್ತಮ ಘಟನೆಗಳು ನಡೆದಿದ್ದು, ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾತಿಯ ನಂತರ ಪ್ರಕ್ರಿಯೆಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದು. ಕಳಸಾ ಬಂಡೂರಿ ನಾಲಾ ಜೋಡಣೆಯ ವಿಷಯದಲ್ಲಿ ನರಗುಂದದಲ್ಲಿ ದೊಡ್ಡ ಮಟ್ಟದ ಹೋರಾಟ ರೂಪಿತವಾದದ್ದು, ಹಮ್ಮಗಿ ಏತ ನೀರಾವರಿ ಯೋಜನೆಯ  ಮೊದಲ ಹಂತ ಲೋಕಾರ್ಪಣೆಯಾಗಿರುವುದು ಕೊಂಚ ನೆಮ್ಮದಿ ತಂದಿವೆ. ಇನ್ನು ಜಿಲ್ಲೆಯಲ್ಲಿ ಕೊಲೆ, ಆತ್ಮಹತ್ಯೆ, ಕಳ್ಳತನ, ಜಾತಿ ಸಂಘರ್ಷ ಹೀಗೆ ನಿತ್ಯವೂ ಸಮಸ್ಯೆಗಳು ಕಾಣುತ್ತಲೇ ಇದ್ದವು. ಅಪಘಾತದಲ್ಲಿ 254ಕ್ಕೂ ಹೆಚ್ಚು ಜನ, 42ಕ್ಕೂ ಹೆಚ್ಚು ಜನ ಕೊಲೆಯಾಗಿ, 371ಕ್ಕೂ ಹೆಚ್ಚು ಜನ ಆತ್ಮಹತ್ಯೆ ಹೀಗೆ 500ಕ್ಕೂ ಹೆಚ್ಚು ಜನ ಅಹಸಜವಾದ ರೀತಿಯಲ್ಲಿ 2013 ರಲ್ಲಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಗಳು ಮಾತ್ರ ಕಣ್ಣೀರಲ್ಲಿ ಕೈ ತೊಳೆಯುತ್ತಿರುವುದು ನೋವಿನ ಸಂಗತಿ.
2013-ಹಲವು ಘಟನೆಗಳ ಹಿನ್ನೋಟ
ಜನೇವರಿ: ಜ. 25 ರಂದು ಜಿಲ್ಲೆಯ ನರಗುಂದದಲ್ಲಿ ಕೋಮುಗಲಭೆ ಉಂಟಾಗಿ ಹತೋಟಿಗೆ ತರಲು ಪೊಲೀಸರಿಂದ ಪ್ರತಿಭಟನಾಕಾರರ ಮೇಲೆ ಲಘು ಲಾಠಿಪ್ರಹಾರ ನಡೆಯಿತು. 27ರಂದು ಗದಗನ ಭೀಷ್ಮಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು.
ಫೆಬ್ರವರಿ: 4ರಂದು ಗದಗ ಹಬ್ಬಕ್ಕೆ ಚಾಲನೆ. 8 ರಂದು ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗಜೇಂದ್ರಗಡ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳನ್ನು ತಾಲೂಕುಗಳನ್ನಾಗಿ ಘೋಷಣೆ. ಜಿಲ್ಲೆಯಾದ್ಯಂತ ಸಂಭ್ರಮಾಚರಣೆ.  8 ರಂದು ನಗರಸಭೆಯ 54 ವಕಾರಸಾಲ ಮಾರುವ ನಗರಸಭೆಯ ನಿರ್ಣಯ ರದ್ದುಪಡಿಸುವಂತೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ.
13ರಂದು ಗದಗ-ಬೆಟಗೇರಿ ನಗರಸಭೆಯ ಆಡಳಿತಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ನೇಮಕ. 20 ರಂದು ಭಾರತ್ ಬಂದ್‌ಗೆ ಗದಗನಲ್ಲಿ ಮಿಶ್ರ ಪ್ರತಿಕ್ರಿಯೆ. 20 ರಂದು ಸಿಂಗಟಾಲೂರ ಏತ ನೀರಾವರಿ ಯೋಜನೆಯ ಮೊದಲ ಹಂತದ ಹಮ್ಮಿಗಿ-ಮುಂಡವಾಡ ಏತ ನೀರಾವರಿ ಯೋಜನೆ ಲೋಕಾರ್ಪಣೆ
ಮಾರ್ಚ್: 7ರಂದು ಯಶಸ್ವಿಯಾಗಿ ಜರುಗಿದ ಜಿಲ್ಲೆಯ ಎಲ್ಲ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ. 11ರಂದು ಮತಗಳ ಎಣಿಕೆ ಜರುಗಿ ಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್ ಬಹುಮತ, ನರಗುಂದ ಮತ್ತು ಗಜೇಂದ್ರಗಡದಲ್ಲಿ ಬಿಜೆಪಿಗೆ ಬೆಂಬಲಿಸಿದ ಜನತೆ. ಉಳಿದಲ್ಲಿ ಅತಂತ್ರ ಸ್ಥಿತಿಯುಂಟಾಯಿತು. 12 ರಂದು ಗದಗನ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಪಾಲ್ಗೊಂಡು ಭಾಷಣ. 17ರಂದು ನರಗುಂದ ತಾಲೂಕಿನ ಮೆಣಸಗಿಯಲ್ಲಿ ಅಂದು ಶಾಸಕರಾಗಿದ್ದ ಸಿ.ಸಿ.ಪಾಟೀಲರಿಗೆ ಅಂಗರಕ್ಷಕನಿಂದ ಆಕಸ್ಮಿಕ ಗುಂಡು ತಗುಲಿ ಆಸ್ಪತ್ರೆಗೆ ದಾಖಲು.
ಎಪ್ರಿಲ್: 5ರಂದು ಗದಗನ ಜೆ.ಟಿ. ಕಾಲೇಜಿನಲ್ಲಿ ನ್ಯಾನೋ ಅವಶ್ಯಕತೆಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
ಮೇ: 8ರಂದು ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಚಿತ್ರಣ ಬದಲಿಸಿದ ಮತದಾರ. ಜಿಲ್ಲೆಯ 4 ವಿಧಾನಸಭಾ ಮತಕ್ಷೇತ್ರಗಳಲ್ಲಿ  ಬಿಜೆಪಿಗೆ ಸೋಲು. ಗದಗನಲ್ಲಿ ಎಚ್.ಕೆ. ಪಾಟೀಲ, ರೋಣದಲ್ಲಿ ಜಿ.ಎಸ್. ಪಾಟೀಲ, ನರಗುಂದದಲ್ಲಿ ಬಿ.ಆರ್. ಯಾವಗಲ್, ಶಿರಹಟ್ಟಿ ಮತಕ್ಷೇತ್ರಕ್ಕೆ ರಾಮಕೃಷ್ಣ ದೊಡ್ಡಮನಿ ಆಯ್ಕೆ. 16ರಂದು ದುಂದೂರು-ಅಣ್ಣಿಗೇರಿ ಮಧ್ಯೆ ಜರುಗಿದ ರಸ್ತೆ ಅಪಘಾತದಲ್ಲಿ ಒಂದು ಕುಟುಂಬದ ಐವರ ದುರ್ಮರಣ.
ಜೂನ್: 15, 16ರಂದು ಮುಂಡರಗಿಯಲ್ಲಿ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. 21ರಂದು ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಬಳಿಯ ರಸ್ತೆಯಲ್ಲಿ ಮಧ್ಯರಾತ್ರಿ ಕಾರಿನಲ್ಲಿ ತೆರಳುತ್ತಿದ್ದ ತಂದೆ-ಮಗನ ಕೊಲೆ. 25ರಂದು ಉತ್ತರಾಖಂಡದಲ್ಲಿ ಜರುಗಿದ ಜಲಪ್ರಳಯದಲ್ಲಿ ಸಿಲುಕಿರುವ ಸಂತ್ರಸ್ಥರನ್ನು ರಕ್ಷಿಸಲು ತೆರಳಿದ್ದ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಯೋಧ ಬಸವರಾಜ ಯರಗಟ್ಟಿ ಭಾರತೀಯ ಸೇನಾಪಡೆಯ ಕಾಪ್ಟರ್ ದುರಂತದಲ್ಲಿ ಮರಣ.
ಜುಲೈ: 3ರಂದು ಉತ್ತರಾಖಂಡದ ದುರಂತದಲ್ಲಿ ಸಾವನ್ನಪ್ಪಿದ ಜಿಲ್ಲೆಯ ನರಗುಂದ ತಾಲೂಕಿನ ಜಗಾಪುರದ ವೀರಯೋಧ ಬಸವರಾಜ ಯರಗಟ್ಟಿಯ ಮೃತದೇಹ ಸ್ವಗ್ರಾಮಕ್ಕೆ ಆಗಮನ. ಸಾವಿರಾರು ಜನರ ಮಧ್ಯೆ ಸರ್ಕಾರಿ ಗೌರವಗಳೊಂದಿಗೆ ಮೃತಯೋಧನ ಅಂತ್ಯಕ್ರಿಯೆ.
ಆಗಸ್ಟ್: 2ರಂದು ಗದಗ ತಾಲೂಕಿನ ಅಡವಿಸೋಮಾಪುರದಲ್ಲಿನ ಗಾಂಧಿಪ್ರತಿಮೆ ಕಿಡಿಗೇಡಿಗಳಿಂದ ಭಗ್ನ. ಸ್ಥಳೀಯರಿಂದ ಪ್ರತಿಭಟನೆ
ಸೆಪ್ಟೆಂಬರ್: 17ರಂದು ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಚರಂಡಿ ನೀರಿಗೆ ಕೊಚ್ಚಿಹೋಗಿ 8 ವರ್ಷದ ಬಾಲಕನೋರ್ವನ ದುರ್ಮರಣ. 29ರಂದು ಗದಗ ನಗರದ ವೀರನಾರಾಯಣ ದೇವಸ್ಥಾನದ ಬಳಿಯಿರುವ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ಮೂವರ ಸಾವು.
ಅಕ್ಟೋಬರ್: 11ರಿಂದ 14ರ ವರೆಗೆ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಜಿಲ್ಲೆಯ ಅಂತರಾಷ್ಟ್ರೀಯ ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಬಸೀರಾ ವಕಾರದ, ಶಾಹೀದಾಬಾನು ಮತ್ತು ಪ್ರಶಾಂತಗೌಡಗೆ ಕುಸ್ತಿಯಲ್ಲಿ ಚಿನ್ನದ ಪದಕ. 28ರಂದು ಗದಗ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ. ಹಲವು ಕಾಮಗಾರಿಗಳ ಉದ್ಘಾಟನೆ. 29ರಂದು ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ. ಗದಗನ ರಂಗಕಲಾವಿದೆ ಪ್ಲೋರಿನಾಬಾಯಿ ಹಾಗೂ ಬೆಟಗೇರಿಯ ಬಿ.ಬಿ. ಬಣ್ಣದ ಕಲಾಮೇಳಕ್ಕೆ ರಾಜ್ಯೋತ್ಸವ ಪ್ರಶಸ್ತಿಯ ಗರಿ.
ನವೆಂಬರ್: 4ರಂದು ಜಿಲ್ಲೆಗೆ ರೇಲ್ವೆ ಸೌಲಭ್ಯಕ್ಕೆ ಒತ್ತಾಯಿಸಿ ರೇಲ್ವೆ ಅಭಿವೃದ್ಧಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ಗದಗನ ರೇಲ್ವೆ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ಜರುಗಿಸಿ ಪತ್ರ ಚಳುವಳಿ ಕಾರ್ಯಕ್ರಮಕ್ಕೆ ಚಾಲನೆ. ಕನ್ನಡಪ್ರಭ ವರದಿ ಪರಿಣಾಮದಿಂದಾಗಿ 24 ರಂದು ಗದಗ ತಾಲೂಕಿನ ಬಿಂಕದಕಟ್ಟಿಯ ಮೃಗಾಲಯಕ್ಕೆ 2 ಹೊಸ ಅತಿಥಿಗಳ ಆಗಮನ.
ಡಿಸೆಂಬರ್: 4ರಂದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪರಸಾಪುರದಲ್ಲಿ 3 ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ. 20ರಂದು ಜಿಪಂನ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಕಮಲವ್ವ ಸಜ್ಜನರ ಅವಿರೋಧ ಆಯ್ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement