ಪರೀಕ್ಷೆ: ತರಬೇತಿ
ಮುಂಡರಗಿ: ಸ್ಥಳೀಯ ಜ.ಅ. ವಿದ್ಯಾ ಸಮಿತಿಯ ಕೆ.ಆರ್. ಬೆಲ್ಲದ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ ಇವರ ಆಶ್ರಯದಲ್ಲಿ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ವಭಾವಿ ತರಬೇತಿಯನ್ನು ಜನವರಿ ಮೂರನೇ ವಾರದಲ್ಲಿ ನಡೆಸಲಾಗುವುದು. ತರಬೇತಿಯು 10 ದಿನಗಳವರೆಗೆ ನಡೆಯಲಿದ್ದು ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಹಾಗೂ ಈಗಾಗಲೇ ಪದವಿ ಪಡೆದ ವಿದ್ಯಾರ್ಥಿಗಳು ತರಬೇತಿಗೆ ಅರ್ಹರಾಗಿರುತ್ತಾರೆ. ತರಬೇತಿ ಅವಧಿಯಲ್ಲಿ ಹಾಜರಾತಿ ಕಡ್ಡಾಯವಿದ್ದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವುರಲ್ಲದೇ ಅವಶ್ಯವಿರುವ ಓದುವ ಟಿಪ್ಪಣಿಗಳನ್ನು ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ರು. 100 ಆರ್.ಕೆ. ರಾಯನಗೌಡರ ಇವರ ಹತ್ತಿರ ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಮೊ. 9986612815 ಇಲ್ಲಿಗೆ ಸಂಪರ್ಕಿಸುವಂತೆ ಬ್ಯಾಂಕಿನ ಪ್ರಬಂಧಕ ಆರ್.ಕೆ. ಬಸವರಾಜ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಂ.ಬಿ. ಬೆಳವಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಪ್ರತಿಭಟನೆ
ಮುಂಡರಗಿ: ಜ. 2ರಂದು ಬಿಜೆಪಿ ಯುವ ಮೋರ್ಚಾದಿಂದ ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬೆಳಗ್ಗೆ 11 ಗಂಟೆಗೆ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಮನವಿ ನೀಡಲಾಗುತ್ತಿದೆ. ಅಂದು ಬೆಳಗ್ಗೆ ಪಟ್ಟಣದ ಕೋಟೆಭಾಗದ ಹನುಮಂತ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಜಾರ, ಬೃಂದಾವನ ವೃತ್ತ, ಕೊಪ್ಪಳ ವೃತ್ತದ ಮಾರ್ಗವಾಗಿ ಬಂದು ತಹಸೀಲ್ದಾರ್‌ಗೆ ಪ್ರತಿಭಟನೆ ಮೂಲಕ ಮನವಿ ನೀಡಲಾಗುವುದೆಂದು ಶಿರಹಟ್ಟಿ ಮತಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೇವಪ್ಪ ಇಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 7ರಂದು ಸಮಿತಿ ಸಭೆ
ಗದಗ: ಜಿಲ್ಲಾ ಮಟ್ಟದ ಜಾಗ್ರತ ಮತ್ತು ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿಯವರ ಅಧ್ಯಕ್ಷತೆಯಲ್ಲಿ ಜ. 7 ರಂದು ಮಧ್ಯಾಹ್ನ 12.30 ಗಂಟೆಗೆ ಗದಗ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಜಾಗ್ರತ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜಿಪಂ ಸಿಇಒ ತಿಳಿಸಿದ್ದಾರೆ.
ನಮ್ಮೂರ ಶಾಲೆಗೆ ನಮ್ಮ ಯುವಜನರು
ಗದಗ: ಕರ್ನಾಟಕ ಯುವ ನೀತಿಗೆ ಸರ್ಕಾರವು ಅನುಮೋದನೆಯನ್ನು ನೀಡಿದ್ದು, ಯುವ ನೀತಿಯ ಅಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ. ಆದ್ದರಿಂದ ಗದಗ ಜಿಲ್ಲೆಯಲ್ಲಿ ಕಳೆದ 1 ವರ್ಷದ ಅವಧಿಯಲ್ಲಿ ಶಾಲಾ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿ ಮತ್ತು ಯಶಸ್ವಿಯಾಗಿ ತೊಡಗಿಸಿಕೊಂಡಿರುವ ಯುವ ಸಂಘಗಳು ತಾವು ಆಯ್ದುಕೊಂಡಿರುವ ಶಾಲೆಗಳ ವಿವರಗಳೊಂದಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.