ವಕಾರ ಸಾಲು ಮಾರಾಟ: ಕಾನೂನು ಹೋರಾಟ
ಕನ್ನಡಪ್ರಭ ವಾರ್ತೆ, ಗದಗ, ಫೆ. 1
ಸಾವಿರಾರು ಕೋಟಿ ಬೆಲೆಬಾಳುವ ನಗರಸಭೆ ಮಾಲ್ಕಿ 54 ವಕಾರ ಸಾಲು ಕುರಿತು ನಗರಸಭೆ ತೆಗೆದುಕೊಂಡ ನಿರ್ಧಾರ ತಪ್ಪಾಗಿದ್ದು, ಈ ಕುರಿತು ಕಾನೂನು ಹೋರಾಟ ಮಾಡಲಾಗುವುದು, ಸರ್ಕಾರ ಕೂಡಲೇ ಇದನ್ನು ಸಿಬಿಐ ತನಿಖೆ ನಡೆಸಬೇಕು ಎಂದು ದಲಿತ ಯುವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಮುಳಗುಂದ ಹಾಗೂ ಗದಗ ಜಿಲ್ಲಾ ರೇಲ್ವೆ ಹೋರಾಟ ಸಮಿತಿ ಅಧ್ಯಕ್ಷ ನಿಸ್ಸಾರ ಅಹ್ಮದ್ ಖಾಜಿ ಆಗ್ರಹಿಸಿದ್ದಾರೆ.
ಅವರು ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರಸಭೆ ಮಾಲ್ಕಿ 54 ವಕಾರಸಾಲುಗಳ ಭೂಬಾಡಿಗೆ ಅವಧಿ 1992ರಲ್ಲಿಯೇ ಮುಗಿದ ನಂತರ ವಕಾರಸಾಲುಗಳನ್ನು ವಶಪಡಿಸಿಕೊಳ್ಳಲು ನಗರಾಡಳಿತ ಪ್ರಯತ್ನ ನಡೆಸಿಯೇ ಇದೆ. ಇಂತಹ ಪ್ರಸಂಗದಲ್ಲಿ ತಮ್ಮ ಅಧಿಕಾರವಧಿ ಇದೆ ಫೆ. 13ರಂದು ಮುಗಿಯಲಿರುವ ನಗರಸಭೆ ಅಧ್ಯಕ್ಷರಾದ ಶಿವಣ್ಣ ಮುಳಗುಂದ ಅವರು, ವಕಾರಸಾಲು ಭೂಬಾಡಿಗೆದಾರರೊಂದಿಗೆ ಶಾಮೀಲಾಗಿ ಅಮೂಲ್ಯ ಆಸ್ತಿಯನ್ನು ಮಾರಾಟ ಮಾಡಲು ಸದ್ದಿಲ್ಲದೆ ಜ. 24ರಂದು ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದ್ದು, ಅವಳಿ ನಗರದ ಜನತೆಗೆ ವಿಶ್ವಾಸದ್ರೋಹ ಮಾಡಿದ್ದಾರೆ.
ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು. ಜನಹಿತ ಪರಿಗಣಿಸಿ ವಕಾರಸಾಲು ಮಾರಾಟದ ಠರಾವು ರದ್ದುಪಡಿಸಬೇಕು. ವಕಾರಸಾಲು ಜಾಗೆಯಲ್ಲಿ ಹಿಂದುಳಿದ ವರ್ಗದ ಜನತೆಗೆ ಬಡ ವ್ಯಾಪಾರಿಗಳಿಗೆ ಕಡಿಮೆ ಬಾಡಿಗೆ ದರದಲ್ಲಿ ಮಳಿಗೆ ನಿರ್ಮಿಸಬಹುದು.
ಮಾರುಕಟ್ಟೆ, ಸ್ವಿಮಿಂಗ್ ಫೂಲ್, ಅಲ್ಲದೆ ಜನತೆಗೆ ಉಪಯುಕ್ತವಾಗುವ ಅನೇಕ ಕೆಲಸ ಕಾರ್ಯಗಳು, ಸರ್ಕಾರಿ ಕಚೇರಿಗಳ ಸ್ಥಾಪನೆ ಮಾಡಬಹುದು. ಅದನ್ನೆಲ್ಲ ಬಿಟ್ಟು ಇವರು ಉಳ್ಳವರಿಗೆ ವಕಾರಸಾಲು ಮಾರಲು ನಿಂತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ತಾವು ಮನವಿ ಅರ್ಪಿಸಿದರೂ ನ್ಯಾಯಯುತ ಬೇಡಿಕೆ ಈಡೇರಿಸದೆ ಇರುವುದು ಜಿಲ್ಲಾಡಳಿತದ ಜನವಿರೋಧಿ ನೀತಿಯಾಗಿದೆ.
ಈಗಾಗಲೇ ನಗರಸಭೆ ಮಾಜಿ ಸದಸ್ಯರಾದ ವೀರನಗೌಡ ಪಾಟೀಲ, ವಿಜಯಕುಮಾರ ಶೆಟ್ಟರ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪ್ರಜ್ಞಾವಂತ ಜನತೆ ಆಕ್ರೋಶ ವ್ಯಕ್ತಪಡಿಸಿದರೂ ಅದಕ್ಕೆ ಕ್ಯಾರೆ ಎನ್ನದೆ ಠರಾವು ಪಾಸು ಮಾಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಸರ್ಕಾರ ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿ ನಗರಸಭೆಯ ಅಮೂಲ್ಯ ಆಸ್ತಿ ಪರಭಾರೆ ಆಗದಂತೆ ಕ್ರಮ ಕೈಗೊಳ್ಳಬೇಕು. 15 ದಿನದೊಳಗಾಗಿ ತಮ್ಮ ಬೇಡಿಕೆಗೆ ಸ್ಪಂದನೆ ಸಿಗದೆ ಇದ್ದರೆ ಧರಣಿ ಹೋರಾಟ ಅನಿವಾರ್ಯ ಎಂದು ವಿಜಯ ಮುಳಗುಂದ ಹಾಗೂ ನಿಸ್ಸಾರ ಅಹ್ಮದ ಖಾಜಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ದೇವಪ್ಪ ಲಿಂಗದಾಳ, ಮಾದೇಶ ಮರಾಠೆ, ಎನ್.ಕೆ. ಕೊರ್ಲಹಳ್ಳಿ ಹಾಜರಿದ್ದರು.