ಹಿಂದುಳಿದವರ ಅಭಿವೃದ್ಧಿಗೆ ಆದ್ಯತೆ ನೀಡಿದೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ ಫೆ. 1
ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗಂಗಾಮತಸ್ಥ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವಾರು ಯೋಜನೆ ಜಾರಿಗೊಳಿಸುವ ಮೂಲಕ ಸಮುದಾಯವನ್ನು ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಶುಕ್ರವಾರ ಸಮೀಪದ ರಾಜೂರ ಗ್ರಾಮದ ಗಂಗಾಮತಸ್ಥ ಸಮುದಾಯ ವತಿಯಿಂದ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರಾಜ್ಯವನ್ನಾಳಿದ ಸರ್ಕಾರಗಳು ಗಂಗಾಮತಸ್ಥ ಸೇರಿದಂತೆ ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಶ್ರಮಿಸದೇ ಕೇವಲ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡ ಪರಿಣಾಮ ಈ ಸಮುದಾಯಗಳಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದ ಅವರು, ಇಂತಹ ಹಲವಾರು ಹಿಂದುಳಿದ ಸಮಾಜಗಳ ಉನ್ನತಿಗಾಗಿ ರಾಜ್ಯ ಸರ್ಕಾರ ವಿವಿಧ ಯೋಜನೆ ಅಡಿಯಲ್ಲಿ ಅನುದಾನ ಒದಗಿಸಿದೆ. ಗಂಗಾಮತಸ್ಥರು ಸರ್ಕಾರದ ಸೌಲತ್ತು ಪಡೆದು ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಸಂಘಟಿತರಾಗಿ ಎಂದರು. ಸಮಾಜದ ಅಧ್ಯಕ್ಷ ವಿ.ಜಿ. ಬಾರಕೇರ ಅಧ್ಯಕ್ಷತೆ ವಹಿಸಿದ್ದರು. ಸಹಜಾನಂದ ಸರಸ್ವತಿ ಸ್ವಾಮೀಜಿ, ಮತ್ತು ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಬಿ.ಎನ್. ಯರನಾಳ, ಬಸವರಾಜ ಕಟ್ಟಿಮನಿ, ಪರಸಪ್ಪ ಕಟ್ಟಿಮನಿ, ಕಲ್ಲಪ್ಪ ಕುದರಿಮನಿ, ಫಕೀರಪ್ಪ ಕಳ್ಳಿ, ವಿಜಯಕುಮಾರ ಮಳಗಿ, ಮುದಕಪ್ಪ ಹೂಗಾರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶ್ರೀ ಚೌಡಯ್ಯ ಹಾಗೂ ಗಂಗಾಪರಮೇಶ್ವರಿ ಭಾವಚಿತ್ರ ಹಾಗೂ ಕುಂಭಮೇಳ ಮೆರವಣಿಗೆ ನಡೆಯಿತು.