ನಾಳೆ ಪೂರ್ವಭಾವಿ ಸಭೆ
ಗದಗ: ಫೆ. 12ರಿಂದ ಮಾರ್ಚ್ 11ರ ವರೆಗೆ ನಗರದ ವಿದ್ಯಾದಾನ ಸಮಿತಿ ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 6.30 ರಿಂದ 7.30 ಗಂಟೆಯವರೆಗೆ, ಬಿಜಾಪುರದ ಜ್ಞಾನ ಯೋಗಾಶ್ರವುದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರವಚನ ಆಯೋಜಿಸಲಾಗಿದ್ದು, ಈ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಫೆ. 5ರಂದು ಸಂಜೆ 5.30 ಗಂಟೆಗೆ ಎಪಿಎಂಸಿ ಯಾರ್ಡ್ನಲ್ಲಿರುವ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರೆಯಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಆಧ್ಯಾತ್ಮಿಕ ವೇದಿಕೆಯ ಅಧ್ಯಕ್ಷ ಡಿ.ಆರ್. ಪಾಟೀಲರು ವಹಿಸುವರು. ಆಧ್ಯಾತ್ಮಿಕ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಧ್ಯಾತ್ಮಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ದತ್ತಿ ಕಾರ್ಯಕ್ರಮ
ಗದಗ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಕ್ಲಬ್ ಗದಗ-ಬೆಟಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ. 5ರಂದು ಸಂಜೆ 6.30ಕ್ಕೆ ಕೆ.ಎಚ್.ಪಾಟೀಲ ಕ್ರೀಡಾಂಗಣದ ಹತ್ತಿರವಿರುವ ರೋಟರಿ ಐ ಕೇರ್ ಸೆಂಟರ್ದಲ್ಲಿ ಪಾರ್ವತಮ್ಮ ಗೌಡರ ಇವರ ಸ್ಮರಣಾರ್ಥ ದತ್ತಿ ಕಾಯಕ್ರಮ ನಡೆಯಲಿದೆ. ದತ್ತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಗರದ ಖ್ಯಾತ ಹಿಂದುಸ್ಥಾನಿ ಗಾಯಕಿ ಪಾರ್ವತಿದೇವಿ ಮಾಳೆಕೊಪ್ಪಮಠ ಹಾಗೂ ಎಸ್.ಎಸ್. ಗೌಡರ್ ಆಗಮಿಸುವರು. ಕಾರ್ಯಕ್ರಮದಲ್ಲಿ ಭಾವಗೀತೆ, ಭಕ್ತಿಗೀತೆ ಹಾಗೂ ವಚನ ಗಾಯನ ನಡೆಯಲಿದೆ. ರೋಟರಿ ಕ್ಲಬ್ ಅಧ್ಯಕ್ಷ ಬಿ.ಪಿ. ಕಾಮತ, ದತ್ತಿ ದಾನಿಗಳಾದ ಅಂದಾನಪ್ಪ ಗೌಡರ ಹಾಗೂ ಶಾಂತಾದೇವಿ ಗೌಡರ ಉಪಸ್ಥಿತರಿರುವರು. ಅಧ್ಯಕ್ಷತೆಯನ್ನು ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಇಂದಿನಿಂದ ಸಂವಾದ
ಗದಗ: ಜಿಲ್ಲಾ ಮಟ್ಟದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮವನ್ನು ಫೆ. 4 ಮತ್ತು 5ರಂದು ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಬೆಳಗ್ಗೆ 12.30ಕ್ಕೆ ಏರ್ಪಡಿಸಲಾಗಿದೆ. ಉದ್ಘಾಟಕರಾಗಿ ಹಾವೇರಿ ಸಂಸದ ಶಿವಕುಮಾರ ಉದಾಸಿಯವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.