ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ವೈಚಾರಿಕತೆಗೆ ವಿಜ್ಞಾನ ಮೇಳ

Lingaraj Badiger
Updated On : 4 Feb 2013, 12:13 pm

ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.3
ವೈಜ್ಞಾನಿಕ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ವಿಜ್ಞಾನ ಮೇಳಗಳು ಪೂರಕವಾಗಿವೆ. ಅಲ್ಲದೇ ಮೂಢನಂಬಿಕೆಯಿಂದ ಮಕ್ಕಳನ್ನು ಹೊರತಂದು ವಿಜ್ಞಾನದ ವಿಶ್ಲೇಷಣೆಗಳಲ್ಲಿ ತೊಡಗಿಸುವಲ್ಲಿ ವಿಜ್ಞಾನ ಮೇಳ ಮಹತ್ವದ ಪಾತ್ರ ನಿಭಾಯಿಸುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಹುಕ್ಕೇರಿಮಠದ ಪ್ರೌಢಶಾಲಾ ಆವರಣದಲ್ಲಿ ಭಾನುವಾರದಿಂದ ಆರಂಭವಾದ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆವಿಷ್ಕಾರದಿಂದ ಪರಿಹಾರ: ಮಾಹಿತಿ, ತಂತ್ರಜ್ಞಾನ, ಗಣಿತ ಮಾದರಿಗಳು, ಕೈಗಾರಿಕೆಗಳಲ್ಲಿನ ಆದ್ಯತೆಗಳ ಕುರಿತಂತೆ ವಿಜ್ಞಾನ ಮೇಳಗಳು ಬೆಳಕು ಚೆಲ್ಲಲಿವೆ. ಯುವ ಸಮುದಾಯಕ್ಕೆ ಜವಾಬ್ದಾರಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಷ್ಟ್ರದ ಅನೇಕ ಸಮಷ್ಠಿ ಸವಾಲುಗಳನ್ನು ನೂತನ ವಿಜ್ಞಾನದ ಆವಿಷ್ಕಾರಗಳ ಮೂಲಕ ಪರಿಹರಿಸಬಹುದಾಗಿದೆ.
ಪರಿಹಾರಕ್ಕೆ ಕೈಜೋಡಿಸಿ: ದೇಶದ ಪ್ರತಿ ಕ್ಷೇತ್ರಗಳಲ್ಲಿಯೂ ಸಮಸ್ಯೆಗಳ ಆಗರವಿದೆ. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಚಿಂತಿಸಿ ತಮ್ಮಲ್ಲಿರುವ ಸೂಕ್ತ ಪ್ರತಿಭೆ ಆನಾವರಣಗೊಳಿಸುವ ಮೂಲಕ ದೇಶದ ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸುವಂತೆ ತಿಳಿಸಿದರು.
ವಿಶ್ಲೇಷಣೆ ಗುಣ ಹೊಂದಿ: ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ಪರಿಪೂರ್ಣಗೊಳಿಸಿಕೊಳ್ಳಲು ಹೊಸ ವಿಚಾರವನ್ನು ಯತಾವತ್ತಾಗಿ ಒಪ್ಪಿಕೊಳ್ಳದೇ ಅದನ್ನು ವೈಜ್ಞಾನಿಕ ದೃಷ್ಠಿಕೋನದ ಮೂಲಕ ಪ್ರಶ್ನಿಸುವುದರೊಂದಿಗೆ ವಿಶ್ಲೇಷಿಸುವ ಮನೋಭಾವ ಮೈಗೂಡಿಸಿಕೊಳ್ಳಿ. ಇದರಿಂದ ವ್ಯಕ್ತಿತ್ವ ಪರಿಪೂರ್ಣಗೊಳ್ಳಲಿದೆ. ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಗುಣ ಭಿತ್ತಬೇಕೆಂದು ಸೂಚಿಸಿದರು.
ವಿಜ್ಞಾನ ಕೇಂದ್ರ ಸ್ಥಾಪನೆ: ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜ್ಞಾನ ಕ್ಷೇತ್ರದ ಬಲವರ್ಧನೆಗೊಸ್ಕರ ರಾಜ್ಯದ ನಾಲ್ಕು ಕಡೆ ರು. 15 ಕೋಟಿ ವೆಚ್ಚದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಜಗತ್ತಿನಲ್ಲಿನ ಒಳ್ಳೆಯ ವಿಜ್ಞಾನ ಸಂಶೋಧನೆಗಳನ್ನು ಗುಣಾತ್ಮಕವಾಗಿ ಸ್ವೀಕರಿಸೋಣ. ಅದೇ ರೀತಿ ನಾವೂ ಸಹ ಯಾವುದೇ ರಾಷ್ಟ್ರಕ್ಕೂ ಕಡಿಮೆ ಇಲ್ಲ ಎಂಬುದನ್ನು ಹೆಮ್ಮೆಯಿಂದ ಸಾರಿ ಹೇಳೋಣ ಎಂದರು.
15ರ ಬಳಿಕ ರಾಷ್ಟ್ರೀಯ ಮೇಳ: ಪ್ರಸಕ್ತ ವಿಜ್ಞಾನ ಮೇಳದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಹಾಗೂ ಪಾಂಡಿಚೆರಿ ರಾಜ್ಯಗಳ 153 ಮಾದರಿ, 190 ವಿದ್ಯಾರ್ಥಿಗಳು ಹಾಗೂ 190 ಶಿಕ್ಷಕರು ಪಾಲ್ಗೊಂಡಿದ್ದಾರೆ. ಫೆ. 15ರ ನಂತರ ರಾಷ್ಟ್ರಮಟ್ಟದ ವಿಜ್ಞಾನ ಮೇಳ ಜರುಗಲಿದೆ ಎಂದರು. ಈ ಸಂದರ್ಭ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವಿಪ ಸದಸ್ಯರಾದ ಸೋಮಣ್ಣ ಬೇವಿನಮರದ, ಶಿವರಾಜ ಸಜ್ಜವರ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement