ರೈತರ ದಿವಾಳಿಗೆ ಸರ್ಕಾರವೇ ಕಾರಣ: ಕುನ್ನೂರ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 3
ರೈತರ ಹೆಸರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಿ ನಡೆಸುತ್ತಿರುವ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ರೈತರು ಬೆಳೆದ ಯಾವುದೇ ಬೆಳೆಗೂ ಯೋಗ್ಯ ಬೆಂಬಲ ಬೆಲೆ ನೀಡುತ್ತಿಲ್ಲ. ನಿತ್ಯ ಕೃಷಿಕರ ಶೋಷಣೆ ತಪ್ಪಿಲ್ಲ. ಇದಕ್ಕೆ ಸರ್ಕಾರವೇ ಕಾರಣ ಎಂದು ಕೃಷಿಕ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕುನ್ನೂರ ಆರೋಪಿಸಿದರು.
ಭಾನುವಾರ ಪಟ್ಟಣದ ಬೇಂದ್ರ ಭವನದಲ್ಲಿ ನಡೆದ ತಾಲೂಕು ರೈತ ಹಾಗೂ ಕೃಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಂತ್ರಿಗಳು ಮತ್ತು ಶಾಸಕರು ಬೇನಾಮಿ ಆಸ್ತಿ ಮಾಡುವ, ಕುರ್ಚಿ ಬಗ್ಗೆ ಕಚ್ಚಾಡುವ ಕಾರ್ಯದಲ್ಲಿಯೇ ಮುಂದುವರೆದಿದ್ದು, ಸಮಯಕ್ಕೆ ಸರಿಯಾಗಿ ರೈತರಿಗೆ ಬೀಜ-ಗೊಬ್ಬರ ಪೂರೈಸುವಲ್ಲಿಯೂ ಸಂಪೂರ್ಣ ವಿಫಲವಾಗಿದ್ದಾರೆ. ಬಂದ ಬೆಳೆಗೆ ಯೋಗ್ಯ ಬೆಲೆಯೂ ಸಿಗದೇ ರೈತರು ಮೋಸಕ್ಕೊಳಗಾಗುತ್ತಿದ್ದಾರೆ. ಸರ್ಕಾರ ಇನ್ನಾದರೂ ಗಮನಹರಿಸಬೇಕು ಎಂದರು.
ಕೃಷಿಕ ಸಮಾಜದ ರಾಜ್ಯ ಉಪಾಧ್ಯಕ್ಷ ಎನ್.ಡಿ. ಮರಿಗೌಡರ ಮಾತನಾಡಿ, ದೇಶದಲ್ಲಿ ಶೇ. 75ರಷ್ಟು ಕೃಷಿಕರಿದ್ದರೂ ಸಂಘಟನೆ ಕೊರತೆಯಿಂದ ಸರ್ಕಾರದ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದೇವೆ. ರೈತರ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯವನ್ನು ಸರ್ಕಾರ ನೀಡಿಲ್ಲ. ಉತ್ತರ ಕರ್ನಾಟಕದ ಮುಖ್ಯಮಂತ್ರಿಗಳೇ ಬಜೆಟ್ ಮಂಡನೆ ಮಾಡುವುದಾಗಿ ಹೇಳುತ್ತಿದ್ದು, ರೈತರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಕೃಷಿಕ ಸಮಾಜದ ರಾಜ್ಯ ಸಂಘಟನಾ ಸಂಚಾಲಕ ಪರಶುರಾಮ ಪುಟ್ಟಪ್ಪ ಭಜಂತ್ರಿ, ಮುಖಂಡ ಸಣ್ಣವೀರಪ್ಪ ಹಳ್ಳೆಪ್ಪನವರ, ಬಸವರಾಜ ನಾವಿ, ಗೌರಮ್ಮ ದಾವಣಗೇರಿ, ಯಲ್ಲಮ್ಮ ಬಾರಕೇರ, ಗೀತಾ ಅಂಬಿಗೇರ, ತಾರಾಮತಿ ಬಡಿಗೇರ, ಸುನಿತಾ ಮದರಕಲ್ಲ ಮತ್ತಿತರರು ಮಾತನಾಡಿದರು.
ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಶರಣಪ್ಪ ಹೂಗಾರ, ತಿಪ್ಪಣ್ಣ ಕೊಂಚಿಗೇರಿ, ಬಿ.ಎಚ್. ಹ್ಯಾಟಿ, ಬಸವರಾಜ ಉಪನಾಳ, ಸೋಮಶೇಖರ ಪಾಟೀಲ, ಮೈಲಾರಪ್ಪ ಮಾಳಮ್ಮನವರ ಮತ್ತಿತರರು ಇದ್ದರು.
ಬಸವರಾಜ ಸಂಗಪ್ಪ ಶೆಟ್ಟರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.