ವ್ಯಾಯಾಮದಿಂದ ಉತ್ತಮ ಆರೋಗ್ಯ: ನೀರಲೋಟಿ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 3
ವ್ಯಾಯಾಮ ಹಾಗೂ ಕ್ರೀಡೆಯಿಂದ ಮಕ್ಕಳು ಉತ್ತಮ ಆರೋಗ್ಯ ಪಡೆಯಲು ಸಾಧ್ಯವೆಂದು ಗದಗ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಾಬು ನೀರಲೋಟಿ ತಿಳಿಸಿದರು.
ಅವರು ಶನಿವಾರ ಪಟ್ಟಣದ ಓಂ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಆಟವಾಡುವುದರಿಂದ ಮಕ್ಕಳ ದೇಹಕ್ಕೂ ಹಾಗೂ ಮನಸ್ಸಿಗೂ ಉತ್ಸಾಹ ಬರುವುದಲ್ಲದೇ ಅಂಗಾಂಗಳು ಸದೃಢವಾಗಿರುತ್ತವೆ ಎಂದರು. ಇನ್ನೋರ್ವ ಅತಿಥಿ ಸ್ಥಳಿಯ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಮಲ್ಲೇಶಗೌಡ ಸಂಕನಗೌಡರ ಮಾತನಾಡಿ, ಮಕ್ಕಳಲ್ಲಿ ಆಟವಾಡುವ ಕಲೆಯನ್ನು ಈಗಿನಿಂದಲೇ ಬೆಳೆಸಬೇಕು. ಅಂದಾಗ ಅವರು ದೇಶದ ಶಕ್ತಿಯಾಗಿ ರೂಪುಗೊಳ್ಳುತ್ತಾರೆ ಎಂದರು.
ಎಸ್.ಎಫ್. ನವಲಗುಂದ ಮಾತನಾಡಿ, ಮಕ್ಕಳಲ್ಲಿ ಆಟವಾಡುವ ಆಸಕ್ತಿ ಬಹಳವಾಗಿರುತ್ತದೆ. ಅವರಿಗೆ ಇಚ್ಛೆ ಇರುವ ಆಟವಾಡುವುದರಿಂದ ಅವರಲ್ಲಿ ದೈಹಿಕ ಶಕ್ತಿ ಹೆಚ್ಚುವುದಲ್ಲದೆ ಕಲಿಕೆಯ ಆಸಕ್ತಿಯು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪ್ರಭು ಬೇವಿನಕಟ್ಟಿ ವಹಿಸಿದ್ದರು. ನಮ್ರತಾ ಬಡಿಗಣ್ಣವರ, ಈರಮ್ಮ ಶಿಳ್ಳನ, ವಿಜಯಲಕ್ಷ್ಮೀ ನಿಟಾಲಿ, ಲಕ್ಷ್ಮೀ ಬಾರಕೇರ, ಜಯಶ್ರೀ ಕೆರಿಯವರ, ಶ್ವೇತಾ ಶಿರಸಂಗಿ, ಸಂಸ್ಥೆಯ ಕಾರ್ಯದರ್ಶಿ ಅಶೋಕ ಬೇವಿನಕಟ್ಟಿ ಉಪಸ್ಥಿತರಿದ್ದರು. ರೇಣುಕಾ ಕೀರ್ತಿಗೌಡರ ನಿರೂಪಿಸಿದರು. ಪಾರ್ವತಿಮಠ ಸ್ವಾಗತಿಸಿದರು. ಚಂದ್ರಕಲಾ ನರಗುಂದ ವಂದಿಸಿದರು.