ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾವೇರಿ ಐತೀರ್ಪು ರಾಜ್ಯದ ಪಾಲಿಗೆ ಮರಣಶಾಸನ: ಎಚ್ಕೆ

Lingaraj Badiger
Updated On : 5 Feb 2013, 11:34 am

ಕನ್ನಡಪ್ರಭ ವಾರ್ತೆ, ಗದಗ, ಫೆ. 4
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಕಾವೇರಿ ಐತೀರ್ಪು ಹೊರಡಿಸಿದಲ್ಲಿ ಅದು ರಾಜ್ಯದ ಪಾಲಿಗೆ ಮರಣ ಶಾಸನವಾಗಲಿದೆ. ಈ ಕುರಿತು ಗೆಜೆಟ್ ಹೊರಡಿಸಿದಲ್ಲಿ ರಾಜ್ಯದ ಜನತೆಗೆ ತೀವ್ರ ಅನ್ಯಾಯವಾಗಲಿದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಸೋಮವಾರ ನಗರದ ಕಾಟನ್ ಸೇಲ್ ಸೊಸೈಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ಅಧಿಸೂಚನೆ ಹೊರಡಿಸಿದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ. ರಾಜ್ಯಕ್ಕೆ ಮುಖ್ಯವಾಗಿ ಕಬಿನಿಯಿಂದ 57.2 ಟಿಎಂಸಿ ನೀರು 12 ಟಿಎಂಸಿಗೆ ಕುಸಿಯಲಿದೆ. ಹಾರಂಗಿ ಯೋಜನೆಯಲ್ಲಿನ 16.6 ಟಿಎಂಸಿ ನೀರಿನಲ್ಲಿ 8.7 ಟಿಎಂಸಿ ನೀರು ಲಭ್ಯವಾಗಲಿದೆ. ವರುಣಾ ಯೋಜನೆಯಲ್ಲಿ 10.5 ಟಿಎಂಸಿಯ ಬದಲಾಗಿ 5.9 ಟಿಎಂಸಿ ನೀರು ಲಭ್ಯವಾಗಲಿದೆ.
ಸದ್ಯ ಬೆಂಗಳೂರು ಮಹಾನಗರಕ್ಕೆ 17 ಟಿಎಂಸಿ ನೀರು ಕುಡಿಯಲು ಅವಶ್ಯ. ಆದರೆ, ಈ ತೀರ್ಪಿನ ಅನ್ವಯ ಬೆಂಗಳೂರು ಮಹಾನಗರಕ್ಕೆ ಕೇವಲ 0.5 (ಅರ್ಧ) ಟಿಎಂಸಿ ನೀರು ಲಭ್ಯವಾಗಲಿದೆ.
ಈಗಾಗಲೇ ಸರ್ಕಾರ ಹಲವಾರು ಯೋಜನೆಗಳಿಗೆ, ಕೈಗಾರಿಕೆಗಳಿಗೆ ನೀರು ಕೊಡುವುದಾಗಿ ತಿಳಿಸಿದ್ದು, ಇದರಿಂದ ರಾಜ್ಯಕ್ಕೆ ತೀವ್ರ ಹಿನ್ನಡೆಯಾಗಲಿದೆ. ಈ ಕುರಿತು ರಾಜ್ಯ ಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕು. ಕೂಡಲೇ ಈ ಕುರಿತು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಬೇಕು.
ನ್ಯಾಯಾಲಯ ನಿರ್ದೇಶನದಂತೆ ಫೆ. 20 ರೊಳಗೆ ಸರ್ಕಾರ ತನ್ನ ವಾದವನ್ನು ಸಮರ್ಥವಾಗಿ ಮಂಡಿಸದೇ ಇದ್ದಲ್ಲಿ ರಾಜ್ಯದ ಜನತೆಗೆ ಶಾಶ್ವತವಾಗಿ ಅನ್ಯಾಯವಾಗಲಿದೆ.
ಮುಖ್ಯಮಂತ್ರಿಗಳು ಈ ವಿಷಯದಲ್ಲಿ ತೆಪ್ಪಗೇ ಕುಳಿತರೆ ಸಾಲದು. ತಕ್ಷಣವೇ ನೀರಾವರಿ ತಜ್ಞರು, ಮಾಜಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕೂಡಲೇ ಮರು ಪರಿಶೀಲಿಸಬೇಕು. ಸದ್ಯ ಸರ್ಕಾರ ಎಚ್ಚೆತ್ತುಕೊಂಡು ಕೆಲಸ ಮಾಡದೇ ಇದ್ದಲ್ಲಿ ಈ ಸರ್ಕಾರ ರಾಜ್ಯಕ್ಕೆ ದೊಡ್ಡ ದ್ರೋಹ ಮಾಡಿದಂತಾಗುತ್ತದೆ.
ಕಾವೇರಿ ಐತೀರ್ಪುನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಈ ತೀರ್ಪು ನ್ಯಾಯಾಧೀಶರುಗಳ ಜಗಳದಲ್ಲಿ ಮಾಡಿಕೊಂಡ ರಾಜಿ ಸೂತ್ರ ಎನ್ನುವ ರೀತಿಯಲ್ಲಿದ್ದು, ಇದರಿಂದ ರಾಜ್ಯಕ್ಕೆ ಸಾಕಷ್ಟು ತೊಂದರೆಯಾಗಲಿದೆ. ಈ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು.
ಈ ವಿಷಯ ಕುರಿತು ಮರುಪರಿಶೀಲನೆ ನಡೆಸಬೇಕು. ಅದಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರ ಕೂಡಲೇ ರಾಷ್ಟ್ರಪತಿಗಳಿಗೆ ಮನವಿ ಮಾಡಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷಗಳು ರಾಜಕಾರಣ ಮಾಡುವ ಗೋಜಿಗೆ ಹೋಗದೇ ರಾಜ್ಯದ ಹಿತವನ್ನು ಕಾಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement