ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕೃಷಿ ಸವಾಲಾಗಿ ಸ್ವೀಕರಿಸಿ

Lingaraj Badiger
Updated On : 5 Feb 2013, 11:34 am

ಮುಂಡರಗಿ: ಬಹುತೇಕ ಯುವಕರು ಇಂದು ಕೃಷಿ ಚಟುವಟಿಕೆಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಲಾಭದಾಯಕ ಉದ್ಯೋಗವಲ್ಲ ಎಂದು ತಿಳಿದು ದೂರ ಸರಿಯುತ್ತಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಕೃಷಿಯನ್ನು ಸವಾಲಾಗಿ ಸ್ವೀಕರಿಸಲು ಇಂದಿನ ಯುವಕರು ಮುಂದೆ ಬರಬೇಕು ಎಂದು ಡೋಣಿ ನಂದಿವೇರಿಮಠದ ಶಿವಕುಮಾರ ಶ್ರೀಗಳು ಅಭಿಪ್ರಾಯ ಪಟ್ಟರು.
ಅವರು ಭಾನುವಾರ ಪಟ್ಟಣದ ರೈತ ಹೇಮಗಿರೀಶ ಹಾವಿನಾಳ ಅವರ ಜಮೀನಿನಲ್ಲಿಯ ಬೀಜೋತ್ಪಾದನೆ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾತನಾಡಿದರು. ಹೇಮಗಿರೀಶ ಕಡಿಮೆ ನೀರು ಬಳಸಿ ಹೆಚ್ಚು ಆದಾಯ ತರಬಲ್ಲ ಬೀಜೋತ್ಪಾದನೆ ಕೃಷಿಯಲ್ಲಿ ತೊಡಗಿಸಿಕೊಂಡು ಈ ಭಾಗದ ರೈತರಿಗೆ ಮಾದರಿಯಾಗಿದ್ದಾರೆ. ಇಲ್ಲಿ ಅವರು ಹಲವಾರು ವರ್ಷಗಳಿಂದ ಕೃಷಿಯಲ್ಲಿ ಹೆಚ್ಚು ತಾಂತ್ರಿಕತೆ ಬಳಸಿಕೊಂಡು ಸಾಧನೆ ಮಾಡಿದ್ದಾರೆ. ಕೃಷಿಯಲ್ಲಿ ಆಸಕ್ತಿಯುಳ್ಳವರಿಗೆ ಇಲ್ಲಿಯ ಅನುಭವದ ಪಾಠ ದೊರೆಯಲಿದೆ. ಕೃಷಿ ಬಗ್ಗೆ ಸಕಾರಾತ್ಮಕವಾಗಿರುವ ಕೃಷಿಕರಿಗೆ ಪ್ರೋತ್ಸಾಹ ದೊರೆಯುತ್ತದೆ. ಇಲ್ಲಿ ವಿದೇಶ ಕೃಷಿ ವಿಜ್ಞಾನಿಗಳು ಕೂಡಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಹೇಮಗಿರೀಶ ಹಾವಿನಾಳ ಮಾತನಾಡಿ, ಕೃಷಿಗೆ ಸಂಬಂಧ ಪಟ್ಟ ಇಲಾಖೆಯಲ್ಲಿ ಅರ್ಹ ರೈತರಿಗೆ ಪ್ರಾಧಾನ್ಯತೆ ಸಿಗುತ್ತಿಲ್ಲ. ಕೃಷಿ ಪ್ರಶಸ್ತಿಯಲ್ಲಿಯೂ ಲಾಬಿ ನಡೆಯುತ್ತಿದೆ. ಕೃಷಿ ಇಲಾಖೆಯ ಸಹಾಯ ಧನ, ಬೀಜ ವಿತರಿಸುವ ನೆಪದಲ್ಲಿ ಟೆಂಡರ್ ಕರೆದು ಅದರಲ್ಲಿಯೂ ಸರ್ಕಾರ ಗೋಲ್ ಮಾಲ್ ಮಾಡುತ್ತಿದೆ. ಹೀಗಾಗಿ ಕೃಷಿ ಸಹಾಯಧನದ ಕೃಷಿ ಪರಿಕರಗಳು ಮಾರುಕಟ್ಟೆ ದರದಲ್ಲಿರುವಷ್ಟೆ ಕೃಷಿ ಇಲಾಖೆಯಲ್ಲಿ ಸಿಗುತ್ತಿವೆ. ಸಹಾಯಧನ ಎಂಬುದು ಮೋಸ. ರೈತರು ಸ್ವಯಂ ಪ್ರೇರಣೆಯಿಂದ ಶ್ರಮ ಪಟ್ಟು ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ಕೃಷಿಯಲ್ಲಿ ನಿರಾಸಕ್ತಿ ತೋರಬಾರದು ಎಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಗುರುಪಾದಪ್ಪ ಹಾವಿನಾಳ, ರವಿ ಹಾವಿನಾಳ, ದೇವಪ್ಪ ಕಂಬಳಿ, ಡಿ.ಎಂ. ಕಾತರಕಿ, ಅಂಗಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement