ಬಿಜೆಪಿ ಬಜೆಟ್ ಮಂಡಿಸುತ್ತಿರುವುದು ಸರಿಯಲ್ಲ: ರಾಠೋಡ
ಮುಂಡರಗಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಹುಮತ ಇಲ್ಲದೇ ಇದ್ದರೂ ಸಹ ಬಜೆಟ್ ಮಂಡನೆಯ ಸಾಹಸಕ್ಕೆ ಕೈಹಾಕಿರುವುದು ಸರಿಯಲ್ಲ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮಸಿಂಗ್ ರಾಠೋಡ ಆರೋಪಿಸಿದರು. ಅವರು ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರಕ್ಕೆ ಬರುವಾಗ ಬಿಜೆಪಿ ನೀಡಿದ ಭರವಸೆ ಹಾಗೂ ಪ್ರಣಾಳಿಕೆಯನ್ನು ಮರೆತು ರೆಸಾರ್ಟ್ ರಾಜಕಾರಣ, ಆಪರೇಷನ್ ಕಮಲ ಮಾಡುವ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೊರತು ಪಡಿಸಿದರೆ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ಅವಧಿ ಮುಗಿಯುವಷ್ಟರಲ್ಲಿ ಎರಡು ಗುಂಪಾಗಿ ಒಡೆಯುತ್ತವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ತಾವೂ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಕಾರ್ಯಕರ್ತರ ಬೆಂಬಲವಿರುವುದರಿಂದ ವರಿಷ್ಠರು ತಮಗೆ ಟಿಕೆಟ್ ನೀಡುವ ಭರವಸೆಯಿದೆ ಎಂದರು. ರುದ್ರಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಪ್ರಹ್ಲಾದ ಹೊಸಮನಿ, ಶಂಕರಗುರು ಬಿಳಿಮಗ್ಗದ, ನಾಗೇಶ ಹುಬ್ಬಳ್ಳಿ, ಸಿ.ಎಂ. ಹಿರೇಮಠ, ಯಲ್ಲಪ್ಪ ಗಣಾಚಾರಿ, ಕೊಟ್ರಪ್ಪ ಮಲ್ಲಾಪೂರ, ಹನಮಪ್ಪ ಚೌಟ್ನವರ, ಮಹಾಂತೇಶ ಲಮಾಣಿ ಉಪಸ್ಥಿತರಿದ್ದರು.