ವಿಜ್ಞಾನ ಸದ್ಬಳಕೆಯಿಂದ ಅಭಿವೃದ್ಧಿ ಸಾಧ್ಯ
ಕನ್ನಡಪ್ರಭ ವಾರ್ತೆ, ಗದಗ, ಫೆ. 4
ವಿಜ್ಞಾನ ಎನ್ನುವುದು ಹೊಸ ಕ್ರಾಂತಿಗೆ ನಾಂದಿಯಾಗುವ ವಿಷಯವಾಗಿದ್ದು, ಅದರ ಸದ್ಬಳಕೆಯಾದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ಅವರು ಸೋಮವಾರ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರು, ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ವಿಜ್ಞಾನ ವಿದ್ಯಾ ಜಾಗೃತಿ 2012-13 ಜಿಲ್ಲಾ ಮಟ್ಟದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
19ನೇ ಶತಮಾನದಲ್ಲಿ ಯುರೋಪ್ ಒಕ್ಕೂಟಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳಿಂದ ಆ ಭಾಗದಲ್ಲಿ ಸಾಕಷ್ಟು ಹಣ ಸಂಗ್ರಹವಾಗಿ ಹಲವಾರು ಯುದ್ಧಗಳೇ ನಡೆದು ಹೋದವು ಎನ್ನುವುದು ಇತಿಹಾಸದಿಂದ ತಿಳಿಯುತ್ತದೆ. ವಿಜ್ಞಾನ ಈ ರೀತಿಯಲ್ಲಿ ಬಳಕೆಯಾಗದೇ, ಅದರ ಉತ್ತಮ ಬಳಕೆಯಾದಾಗ ಮಾತ್ರ ಅದಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಥೈವಾನ್ ಎನ್ನುವ ಸಣ್ಣ ದೇಶ ಇಂದು ಶಿಕ್ಷಣ ಕ್ಷೇತ್ರದಲ್ಲಿ ಏಷ್ಯಾಖಂಡದಲ್ಲೇ ಮೊದಲ ಸ್ಥಾನದಲ್ಲಿರುವುದನ್ನು ಗಮನಿಸಿದಾಗ, ನಾವೆಲ್ಲಾ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ನೀಡುತ್ತಿರುವ ಆದ್ಯತೆ ಕಡಿಮೆ ಎನ್ನುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಇದಕ್ಕಾಗಿ ಇನ್ನು ಹೆಚ್ಚಿನ ಅನುದಾನ, ಹಣಕಾಸಿನ ನೆರವು ದೊರೆಯಬೇಕಾಗಿದೆ ಎಂದ ಅವರು, ಪ್ರತಿಯೊಬ್ಬ ತಂದೆ, ತಾಯಿ ತಮ್ಮ ಮಕ್ಕಳನ್ನು ಮೂಲ ವಿಜ್ಞಾನದ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡುತ್ತಿಲ್ಲ. ಇದರಿಂದಾಗಿ ಮುಂದಿನ ದಿನಗಳಲ್ಲಿ ವಿಜ್ಞಾನ ಬೋಧನೆ ಮಾಡುವ ಶಿಕ್ಷಕ, ಉಪನ್ಯಾಸಕರ ಕೊರತೆ ತೀವ್ರವಾಗಿ ಕಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸದ್ಯದಲ್ಲಿಯೇ ಇಸ್ರೋ ಸಂಸ್ಥೆಯ ಮೂಲಕ ಗದಗ ನಗರದಲ್ಲಿ ಉಪಗ್ರಹಗಳ ಉಡಾವಣೆ, ತಯಾರಿಕೆ, ಅವುಗಳ ಕಾರ್ಯ ನಿರ್ವಹಣೆ ಕುರಿತು ಒಂದು ದೊಡ್ಡ ಮಟ್ಟದ ಪ್ರಾತ್ಯಕ್ಷಿಕೆ ಕಾರ್ಯಾಗಾರವನ್ನು ಆಯೋಜಿಸುವಂತೆ ಇಸ್ರೋ ಅಧಿಕಾರಿಗಳಿಗೆ ವೈಯಕ್ತಿಕವಾಗಿ ವಿನಂತಿಸಿದ್ದು, ಇದಕ್ಕೆ ಅವರಿಂದಲೂ ಒಪ್ಪಿಗೆ ದೊರೆತಿದ್ದು, ಸದ್ಯದಲ್ಲಿಯೇ ಜಿಲ್ಲೆಯಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಕುತೂಹಲವನ್ನು ತಣಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಪ್ರೊ. ಎಸ್.ವಿ. ಸಂಕನೂರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಂತೆ ಗದಗ ಜಿಲ್ಲಾ ಕೇಂದ್ರದಲ್ಲಿಯೂ ಜಿಲ್ಲಾ ವಿಜ್ಞಾನ ಕೇಂದ್ರವನ್ನು ನಿರ್ಮಿಸಲು ಸಂಸದರು ಅನುದಾನ ನೀಡಬೇಕೆಂದು ವಿನಂತಿಸಿದರು.
ನ್ಯಾನೋ ತಂತ್ರಜ್ಞಾನ ಕುರಿತು ಪ್ರೊ. ಎಸ್.ಕೆ. ಕೃಷ್ಣಪ್ರಸಾದ, ಡಿ ಎನ್‌ಎ ಫಿಂಗರ್ ಪ್ರಿಂಟ್ ಕುರಿತು ಡಾ. ವಿನೋದ ಲಕ್ಕಪ್ಪನ್, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಾ ಹೊಂಬಾಳಿ, ಬಿಇಓ ಐ.ಬಿ. ಬೆನಕೊಪ್ಪ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆರ್.ಕೆ. ಮಾನೆ ನಿರೂಪಿಸಿದರು.