ಅಟೋಗಳಲ್ಲಿ ಮಾಹಿತಿ ಅಳವಡಿಕೆ ಕಡ್ಡಾಯ: ಪವಾರ
ಕನ್ನಡಪ್ರಭ ವಾರ್ತೆ, ಗದಗ, ಫೆ. 5
ಪ್ರಯಾಣಿಕರ ಸೇವೆಯಲ್ಲಿ ನಿರತವಾಗಿರುವ ಅಟೋ ರಿಕ್ಷಾಗಳಲ್ಲಿ ಚಾಲಕ, ಮಾಲೀಕರ ಕುರಿತು ಸಮಗ್ರ ಮಾಹಿತಿಯುಳ್ಳ ಪತ್ರ ಅಳವಡಿಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಇಲಾಖೆ ನಿರ್ಣಯಿಸಿದ್ದು, ಎಲ್ಲ ಅಟೋ ಚಾಲಕರು ಇದನ್ನು ಗಮನಿಸಬೇಕೆಂದು ಗದಗ ಶಹರ ಸಿಪಿಐ ಸಂತೋಷ ಪವಾರ ಹೇಳಿದರು.
ಅವರು ಮಂಗಳವಾರ ಶಹರ ಪೊಲೀಸ್ ಠಾಣೆಯ ಆವರಣದಲ್ಲಿ ಈ ಕುರಿತು ಕರೆಯಲಾಗಿದ್ದ ಅಟೋ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಚಾಲನಾ ಪ್ರಮಾಣ ಪತ್ರ ಹಾಗೂ ಪರವಾನಿಗೆ ಇಲ್ಲದೇ ಅಟೋ ರಿಕ್ಷಾಗಳು ಸಂಚರಿಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಇಲಾಖೆ ವಾಹನ ಮಾಲೀಕರ ಮತ್ತು ಚಾಲಕರ ಹೆಸರು ಅಟೋ ನೋಂದಾಯಿತ ಸಂಖ್ಯೆ, ಚಾಲಕನ ಚಾಲನಾ ಪ್ರಮಾಣ ಪತ್ರದ ಸಂಖ್ಯೆ ಹಾಗೂ ದೂರವಾಣಿ ಸಂಖ್ಯೆ ಮತ್ತು ಪೊಲೀಸ್ ಠಾಣೆ ಹಾಗೂ ಕಂಟ್ರೋಲ್ ರೂಂನ ಸಂಖ್ಯೆ ಹೊಂದಿರುವ ಫಲಕಗಳನ್ನು ಪ್ರತಿ ಅಟೋಗಳಲ್ಲಿ ಅಳವಡಿಸುವ ನಿರ್ಧಾರ ವನ್ನು ಇಲಾಖೆ ಕೈಗೊಂಡಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ನಗರದಲ್ಲಿ ಟಂಟಂಗಳ ಹಾವಳಿ ನಿಯಂತ್ರಣಕ್ಕೆ ಇಲಾಖೆ ಈಗಾಗಲೇ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ತಪ್ಪಿತಸ್ಥ ವಾಹನಗಳ ಮೇಲೆ ದಂಡ ವಿಧಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಅಟೋ ಚಾಲಕರ ಸಂಘದ ಪದಾಧಿಕಾರಿಗಳು ಹಲವಾರು ಸಮಸ್ಯೆಗಳ ಕುರಿತು ಗಮನ ಸೆಳೆದರು. ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸಾದ ಕವರಿ, ಎನ್.ವಿ. ಬೇಲೂರ, ಸಂಘಟನೆಯ ಪದಾಧಿಕಾರಿಗಳಾದ ಬಾಬಾಜಾನ ಬಳಗಾನೂರ, ಪರಶುರಾಮ ಪೂಜಾರ, ಮಂಜುನಾಥ ಅಗಸಿಮನಿ, ಅಬೂಬಕರ ಅಣ್ಣಿಗೇರಿ ಮುಂತಾದವರು ಪಾಲ್ಗೊಂಡಿದ್ದರು.