ಮಹಿಳೆಯರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಗದಗ: ಮಹಿಳೆಯರು ಮತ್ತು ಮಾನವರ ಹಕ್ಕುಗಳ ರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್.ಆವೀನ ಹೇಳಿದರು.
ಅವರು ಭಾನುವಾರ ಗದಗ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ ಇವರ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರಿಗಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದೌರ್ಜನ್ಯದಂತಹ ಪ್ರಕರಣಗಳನ್ನು ತಡೆಗಟ್ಟಲು ಮುಖ್ಯವಾಗಿ ಮಹಿಳೆಯರಲ್ಲಿ ಕಾನೂನಿನ ಜಾಗೃತಿ ಅತ್ಯವಶ್ಯಕವಾಗಿದೆ. ನಿರಕ್ಷರತೆ ಹಾಗೂ ಬಡತನ ಮಹಿಳಾ ದೌರ್ಜನ್ಯ ಹಾಗೂ ವಂಚನೆ ಪ್ರಮುಖ ಕಾರಣವಾಗಿದೆ. ದುರ್ಬಲ ವರ್ಗದವರಲ್ಲಿ ಶಿಕ್ಷಣದ ಕೊರತೆ ಇರುವುದರಿಂದ ಅವರ ಶೋಷಣೆ ಇಂದಿಗೂ ನಿರಂತರವಾಗಿ ನಡೆಯುತ್ತಿದ್ದು, ಮಹಿಳೆಯರ ವಿಷಯದಲ್ಲಂತೂ ಸಾಕಷ್ಟು ಶೋಷಣೆಗಳು ಬೆಳಕಿಗೆ ಬರುತ್ತಿದ್ದು, ಇದನ್ನು ತಡೆಗಟ್ಟಲು ಪ್ರಜ್ಞಾವಂತ ನಾಗರಿಕರು ಗಮನ ನೀಡಬೇಕು ಎಂದರು. ಉಪನ್ಯಾಸಕಿ ಪ್ರೊ. ಬಿ.ಎನ್. ತಾರಾ, ನ್ಯಾಯವಾದಿ ವಿಜಯಲಕ್ಷ್ಮಿ ಸಿಂದಗಿ ಇವರಿಂದ ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವ ಕುರಿತು ಉಪನ್ಯಾಸಜರುಗಿತು. ಅಧ್ಯಕ್ಷತೆಯನ್ನು ಜಿಲ್ಲಾ ರಕ್ಷಣಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿ ರಾಠೋಡ ವಹಿಸಿದ್ದರು. ನ್ಯಾಯಾಧೀಶರುಗಳಾದ ಉಮೇಶ ಮೂಲಿಮನಿ, ಎಂ.ಎಸ್. ಪಾಟೀಲ, ಎಲ್.ಆರ್. ಕುರಣೆ, ಸಮಾಜ ಕಲ್ಯಾಣ ಅಧಿಕಾರಿ ಎಲ್.ವಿ. ಮೇಸ್ತಾ, ಡಾ ಅರುಂಧತಿ ಕುಲಕರ್ಣಿ, ಜಿಲ್ಲಾ ನ್ಯಾಯಾವಾಧಿಗಳ ಸಂಘದ ಅಧ್ಯಕ್ಷ ವೈ.ಆರ್. ಗುಡೂರ, ಕಾರ್ಯದರ್ಶಿ ಎಂ.ಎಸ್. ರಾಮೇನಹಳ್ಳಿ, ನಗರಸಭೆಯ ಸದಸ್ಯೆ ಲಕ್ಷ್ಮಿದೇವಿ ಕಟ್ಟಿಮನಿ, ಸತೀಶ ಜೋಶಿ, ಸುರ್ಯಾಜಿ ಮುಂತಾದವರು ಹಾಜರಿದ್ದರು. ಸರೋಜಾ ದೇವ್ ಸ್ವಾಗತಿಸಿದರು. ನಗರದ ಗಾಂಧಿ ವೃತ್ತ ಹಾಗೂ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಬೀದಿ ನಾಟಕಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.