ಖಾಲಿ ಕೊಡ ಹಿಡಿದು ಗ್ರಾಪಂಗೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ರೋಣ, ಫೆ. 6
ಕಳೆದ 15 ದಿನಗಳಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶಗೊಂಡ ತಾಲೂಕಿನ ಚಿಕ್ಕಮಣ್ಣೂರ ಗ್ರಾಮಸ್ಥರು ಬುಧವಾರ ಖಾಲಿ ಕೊಡದೊಂದಿಗೆ ಸ್ಥಳೀಯ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಬೇಕಾಬಿಟ್ಟಿಯಾಗಿ ನೀರು ಪೂರೈಕೆ ಮಾಡುತ್ತಾರೆ. ಒಂದೆಡೆ ನೀರು ಬಂದರೆ ಮತ್ತೊಂದೆಡೆ ಬರುವುದಿಲ್ಲ. ಕೇಳಿದರೆ ಗ್ರಾಪಂ ಸಿಬ್ಬಂದಿ ಹಾರಿಕೆಯ ಉತ್ತರ ನೀಡುತ್ತಾರೆ. ಗ್ರಾಪಂ ಆಡಳಿತ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನತೆ ನೀರಿಗಾಗಿ ತೀವ್ರ ಪರದಾಡುವಂತಾಗಿದೆ. ನೀರಿಗಾಗಿ ನಿತ್ಯ ದೂರದ ರೈತರ ಕೊಳವೆ ಬಾವಿಗಳನ್ನು ಆಶ್ರಯಿಸಬೇಕಾಗಿದೆ. ಮಹಿಳೆ, ವೃದ್ದರು ಮಕ್ಕಳೆನ್ನದೇ ನೀರು ತರುವುದೇ ಒಂದು ಉದ್ಯೋಗವಾಗಿದೆ. ಜನತೆಯ ಮೂಲ ಸಮಸ್ಯೆಗೆ ಸ್ಪಂದಿಸುವ ದಿಶೆಯಲ್ಲಿ ಗ್ರಾಪಂ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಗ್ರಾಪಂ ಆಡಳಿತ ನಿರ್ಲಕ್ಷ್ಯ: ಗ್ರಾಮದಲ್ಲಿ ಜನತೆ ನೂರಾರು ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಪಂ ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕುಡಿಯುವ ನೀರಿನ ಸಮಸ್ಯೆ ದಿನೆದಿನೇ ಉಲ್ಬಣಗೊಳ್ಳುತ್ತಿದ್ದರೂ ಗ್ರಾಪಂನವರು ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿನ ನೀರಿನ ಪೈಪ್ಗಳು ಅಲ್ಲಲ್ಲಿ ಒಡೆದಿದ್ದು ಅನಾವಶ್ಯಕವಾಗಿ ನೀರು ಪೋಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಾತಿನ ಚಕಮಕಿ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಿದ್ದ ಸ್ಥಳಕ್ಕೆ ಕೆಲ ಸದಸ್ಯರು ಬಂದು, ನೀವು ನಲ್ಲಿಯ ಮೂಲಕ ಬಂದ ನೀರನ್ನು ಸಾಕಾದ ಬಳಿಕ ನಲ್ಲಿ ಬಂದು ಮಾಡದೇ ಗಟಾರಿಗೆ ಹರಿಬಿಡುತ್ತೀರಿ. ಇದರಿಂದ ನೀರಿನ ಸಮಸ್ಯೆಯಾಗುತ್ತಿದೆ ಎಂದರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಎಲ್ಲೆಲ್ಲಿ ನೀರು ಸರಿಯಾಗಿ ಬಿಡುತ್ತೀರಿ ಹೇಳಿ ಎಂದು ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಸದಸ್ಯ ಬಿ.ಎಸ್. ಕೆಂಚನಗೌಡ್ರ ಮತ್ತು ಪ್ರತಿಭಟನಾಕಾರರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಇನ್ನು ಯಾವುದೇ ರೀತಿಯ ನೀರಿನ ತೊಂದರೆಯಾಗದಂತೆ ಕ್ರಮಕ್ಕೆ ಮುಂದಾಗಲಾಗುವುದು. ಜನತೆಯ ಸಮಸ್ಯೆ ಸ್ಪಂದಿಸುವ ದಿಶೆಯಲ್ಲಿ ಗ್ರಾಪಂ ಆಡಳಿತ ಸದಾ ಸಿದ್ಧವಿದೆ ಎಂದು ಗ್ರಾಪಂ ಸದಸ್ಯರು ಭರವಸೆ ನೀಡದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ದೇವಪ್ಪ ಅಂಗಡಿ, ಶಿವರುದ್ರಗೌಡ ಪಾಟೀಲ, ಸಂಗಪ್ಪ ಕೊಟಗಿ, ಶಂಕ್ರಪ್ಪ ಮಾಮನಿ, ಚಂದ್ರು ಮೇಟಿ, ನಿಂಗಪ್ಪ ಹುಗ್ಗಿ, ಚನ್ನಪ್ಪ ಗಡಗಿ, ಮಹೇಶ ಸವಡಿ, ಶರಣಪ್ಪ ಅಂಗಡಿ, ಸಂಗನಗೌಡ ಸೋಮನಗೌಡ್ರ, ಸುರೇಶ ಶಿವಳ್ಳಿ, ಉಮೇಶ ಶಿವಳ್ಳಿ, ಶಾಂತವ್ವ ಪಟ್ಟೇದ, ಅಮೀರಬಿ ನದಾಫ, ಯಲ್ಲವ್ವ ಹಿರೇಮಣ್ಣೂರ, ಮಾಬೂಬಿ ನದಾಫ, ಪಾತಿಮಾ ನದಾಫ, ವೀರನಗೌಡ ಪೊಲೀಸಪಾಟೀಲ, ನಿಂಗಪ್ಪ ಹಿರೇಮಣ್ಣೂರ, ಯಲ್ಲವ್ವ ಕುರಬಗೌಡ್ರ ಮುಂತಾದವರು ಪಾಲ್ಗೊಂಡಿದ್ದರು.