ಸಾಧನೆಯತ್ತ ಕಿವುಡ, ಮೂಕ ಮಕ್ಕಳ ಶಾಲೆ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 6
ರಾಜ್ಯದಲ್ಲಿ ಕೇವಲ ಬೆರಳೆಣಿಕೆಯಷ್ಟೇ ಇರುವ ಪ್ರತಿಷ್ಠಿತ ಶಾಲೆಗಳ ಪಟ್ಟಿಯಲ್ಲಿ ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯೂ ಒಂದಾಗಿದೆ.
ಕಿವುಡ ಮತ್ತು ಮೂಕ ಮಕ್ಕಳ ಬಾಳಲ್ಲಿ ಹೊಸ ಆಶಾಕಿರಣ ಮೂಡಿಸಿ, ಶೈಕ್ಷಣಿಕ, ಕ್ರೀಡೆ ಹಲವಾರು ರಂಗಗಳಲ್ಲಿ ಅವರ ಪ್ರತಿಭೆಯನ್ನು ಅನಾವರಣಗೊಳಿಸುತ್ತ ಸಾಧನೆಯ ಹೆಜ್ಜೆ ಹಾಕುತ್ತಿದೆ. ಈ ಶಾಲೆಯಲ್ಲಿ ವಿವಿಧ ಜಿಲ್ಲೆಯಲ್ಲಿನ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಸ್ಥಾಪನೆ: ಈ ಶಿಕ್ಷಣ ಸಂಸ್ಥೆಯನ್ನು ಅಭಿನವ ಅನ್ನದಾನ ಶ್ರೀಗಳ ಇಚ್ಛೆಯಂತೆ 1990ರಲ್ಲಿ ಪ್ರಾರಂಭಿಸಲಾಯಿತು. ಈ ಭಾಗದಲ್ಲಿನ ಕಿವುಡ ಮತ್ತು ಮೂಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು, ಅವರ ಸರ್ವತೋಮುಖ ಏಳ್ಗೆಯ ಹಿತದೃಷ್ಟಿಯಿಂದ ಪ್ರಾರಂಭವಾದ ಶಾಲೆಗೆ ಜನರ ಮೆಚ್ಚುಗೆಯು ವ್ಯಕ್ತವಾಯಿತು. ಶ್ರೀಗಳು ಸಮೀಪದ ಜಕ್ಕಲಿ ಗ್ರಾಮದ ವಿಜಯಾ ಹವ್ಯಾಸಿ ಕ್ರೀಡಾ ತಂಡದವರ ಸಹಾಯದಿಂದ ಸುತ್ತಮುತ್ತಲ ಗ್ರಾಮಗಳಲ್ಲಿರುವ ಕಿವುಡ ಮತ್ತು ಮೂಕ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಿ ನಂತರ ನರೇಗಲ್ಲ-ಅಬ್ಬಿಗೇರಿ ರಸ್ತೆಯಲ್ಲಿ ಪ್ರಾರಂಭಿಸಲಾಗಿದೆ.
ಉಚಿತ ಶಿಕ್ಷಣ: ಕಿವುಡ ಮತ್ತು ಮೂಕ ಮಕ್ಕಳಿಗೆ 1ರಿಂದ 10ನೇ ತರಗತಿಯವರೆಗೆ ಶಿಕ್ಷಣ, ಊಟ, ವಸತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ ಸಂಸ್ಥೆಯಾಗಿದೆ. ಸದ್ಯ ಶಾಲೆಯಲ್ಲಿ 159 ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 15 ಶಿಕ್ಷಕರು ಮತ್ತು 15 ಶಿಕ್ಷಕೇತರ ಸಿಬ್ಬಂದಿ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಕ್ಕಳಿಗೆ ಬೋಧನೆ: ಕಿವಿ ಕೇಳಿಸದ, ಮಾತು ಬಾರದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಕಠಿಣ ಕೆಲಸವೇ ಸರಿ.
ಕಣ್ಣುಗಳಿಗೆ ಮಾತ್ರ ಅರ್ಥವಾಗುವಂತಹ ಭಾಷೆಯಲ್ಲಿ ಬೋಧನೆ ಮಾಡಬೇಕಾದ ಅನಿವಾರ್ಯತೆ ಇದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಸನ್ನೆಗಳನ್ನು ಮಾಡುವ ಮೂಲಕ ತಿಳಿಸುತ್ತಾರೆ. ಅದರೊಂದಿಗೆ ದೈಹಿಕ ಶಿಕ್ಷಣ, ಗಣಕಯಂತ್ರ, ತೋಟಗಾರಿಕೆ, ಕ್ರಾಫ್ಟ್, ಕಸೂತಿ, ಚಿತ್ರಕಲೆ, ಕ್ಲೇಮಾಡೆಲಿಂಗ್ ನಂತಹ ವಿಷಯಗಳನ್ನು ಬೋಧಿಸುತ್ತಾರೆ.
ವಿದ್ಯಾರ್ಥಿಗಳ ಸಾಧನೆ: ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿದ್ದಾರೆ. ಚೇತನ ಭೋವಿ, ಜ್ಯೋತಿ ಸಸಂತ್ರಿಮಠ, ಹನಮಪ್ಪ ರಾಜೂರ ಹೀಗೆ ಇನ್ನೂ ಅನೇಕ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.
ಮಕ್ಕಳಿಗೆ ಮಾತು ಬರದಿದ್ದರೂ ಅಭಿನಯದ ಮುಖಾಂತರ ಕಿರು ನಾಟಕ, ಏಕಾಭಿನಯ, ಭರತ ನಾಟ್ಯ, ಜಾನಪದ ನೃತ್ಯಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಕ್ರೀಡೆಯಲ್ಲಿ ಖೋಖೋ, ಜಾವೆಲಿನ್ ಥ್ರೋ, ಅಥ್ಲೆಟಿಕ್ಸಗಳಲ್ಲಿ ರಾಜ್ಯಮಟ್ಟದಲ್ಲಿ ವೈಯಕ್ತಿಕವಾಗಿ ಮಕ್ಕಳು ಸಾಧನೆ ತೋರಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯ ಡಿ.ಜಿ. ಕುಲಕರ್ಣಿಯವರಿಗೆ 2011-12ನೇ ಸಾಲಿನ ರಾಜ್ಯ ಸರ್ಕಾರದಿಂದ ಕಿವುಡ ಮತ್ತು ಮೂಕ ಮಕ್ಕಳ ಶಿಕ್ಷಣದಲ್ಲಿ ವಿಶೇಷ ಸಾಧನೆ ಮಾಡಿದ್ದಕ್ಕಾಗಿ ರಾಜ್ಯ ಪ್ರಶಸ್ತಿ ದೊರೆತಿದೆ. ಶಿಕ್ಷಕ ಲಿಂಗರಾಜ ತಳಬಾಳರಿಗೆ 2012-13ನೇ ಸಾಲಿನ ರಾಜ್ಯ ಮಟ್ಟದ ವಿಶೇಷ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.
- ನಿಂಗರಾಜ ಬೇವಿನಕಟ್ಟಿ