ಕೊಠಡಿಯಲ್ಲಿ ಬೆಂಕಿ: ದಾಖಲೆ ನಾಶ
ರೋಣ: ತಾಲೂಕಿನ ಕಳಕಾಪುರ ಸರ್ಕಾರಿ ಪ್ರಾಥಮಿಕ ಮತ್ತು ಉನ್ನತಿಕರಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬುಧವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೋಣೆಯಲ್ಲಿದ್ದ ಕ್ರೀಡಾ ಸಾಮಗ್ರಿ, ವಿಜ್ಞಾನ ಪರಿಕರಗಳು, ಉತ್ತರ ಪತ್ರಿಕೆಗಳು ಹಾಗೂ ಶಾಲೆಯ ಮಹತ್ವದ ದಾಖಲೆಗಳು ಸುಟ್ಟುಹೋಗಿವೆ.
ಸುದ್ದಿ ತಿಳಿದ ಗ್ರಾಮಸ್ಥರು ಶಾಲೆಗೆ ದೌಡಾಯಿಸಿ, ಬೆಂಕಿ ನಂದಿಸಲು ಯತ್ನಿಸಿದರು. ಬೆಂಕಿ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ, ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಬೆಂಕಿಯಿಂದಾಗಿ ಕೊಠಡಿಯಲ್ಲಿದ್ದ ಟೀವಿ, ಸೋಲಾರ್ ಚಾರ್ಜರ್ ಯುನಿಟ್, ವಾರ್ಷಿಕ ಪರೀಕ್ಷೆಗಳ ಪ್ರಮಾಣಪತ್ರ, ಸಾಕ್ಷರತಾ ಕಾರ್ಯಕ್ರಮದ ಕಾಗದಪತ್ರಗಳು, ಗೋಡೆಗೆ ಹಾಕಿದ್ದ ರಾಷ್ಟ್ರೀಯ ನಾಯಕರ ಭಾವಚಿತ್ರ, ಶುದ್ಧ ನೀರಿನ ಸಣ್ಣ ಘಟಕ, ಕಟ್ಟಿಗೆ ಅಲ್ಮೇರಾ, ನಕಾಶೆಗಳು, ಬೋಧನಾ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು ಹಾಳಾಗಿವೆ. ಎಸ್ಡಿಎಂಸಿ ಅಧ್ಯಕ್ಷ ಯಮನಪ್ಪ ಹರ್ಲಾಪುರ ಸುದ್ದಿಗಾರರ ಜತೆಗೆ ಮಾತನಾಡಿ, ಮಧ್ಯರಾತ್ರಿ 12ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಗ್ರಾಮಸ್ಥರು ಅಗ್ನಿಶಾಮಕ ವಾಹನ ಕರೆಸಿ, ಬೆಂಕಿ ನಂದಿಸಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯರು ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೇಲಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಬಿಇಓ ಕೆ.ವಿ. ಪಾಟೀಲ್, ಪ್ರೌಢಶಾಲಾ ಶಿಕ್ಷಣ ಸಂಯೋಜಕ ಪಿ.ಎಚ್. ಕಡಿವಾಲ, ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆಂದು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.