ನಗರ ಅಭಿವೃದ್ಧಿಗೆ ಶ್ರಮಿಸಿರುವೆ: ಮುಳಗುಂದ
ಗದಗ: ಗದಗ-ಬೆಟಗೇರಿ ಅವಳಿ ನಗರವನ್ನು ನನ್ನ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೊಳಿಸಿದ ತೃಪ್ತಿ ನನಗಿದೆ ಎಂದು ನಗರಸಭೆಯ ಅಧ್ಯಕ್ಷ ಶಿವಣ್ಣ ಮುಳಗುಂದ ಹೇಳಿದರು.
ಅವರು ಗುರುವಾರ ಗದಗ-ಬೆಟಗೇರಿ ನಗರಸಭೆಯ ನವೀಕರಣಗೊಂಡ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಎರಡುವರೆ ವರ್ಷದ ಅಧಿಕಾರಾವಧಿಯಲ್ಲಿ ನಗರವನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಾಗಿದೆ. ಇಂದು ಉದ್ಘಾಟನೆಗೊಂಡಿರುವ ಸಭಾಭವನವು ರಾಜ್ಯದಲ್ಲಿಯೇ ಮಾದರಿಯಾಗಿದೆ. ಸಮುದಾಯ ಭವನವು ಈ ಮೊದಲೇ ನಿರ್ಮಾಣವಾಗಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಸುಮಾರು 2006 ರಲ್ಲಿ ರಾಜ್ಯ ಸರ್ಕಾರವು ನಗರಸಭೆಯ ಅಭಿವೃದ್ಧಿಗಾಗಿ ರು. 37 ಲಕ್ಷ ಗೌರವಧನವನ್ನು ನೀಡಲಾಗಿತ್ತು. ಆದರೆ ಅಂದು ಅಧಿಕಾರದಲ್ಲಿದ್ದ ಸದಸ್ಯರು, ಅಧ್ಯಕ್ಷರು ಗೌರವಧನವನ್ನು ಉಪಯೋಗಿಸಿಕೊಳ್ಳದಿರುವುದನ್ನು ಗಮನಿಸಿ ನಗರಸಭೆಯ ಎಲ್ಲರ ಒಮ್ಮತದ ನಿರ್ಣಯ ಪಡೆದುಕೊಂಡು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿಗೆ ಮನವಿ ಮಾಡಿಕೊಂಡು ಕಾಮಗಾರಿ ಪ್ರಾರಂಭಿಸಿದ ಒಂದುವರೆ ತಿಂಗಳೊಳಗೆ ಈ ಸಮುದಾಯ ಭವನವನ್ನು ನವೀಕರಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಒಪ್ಪಿಗೆ ನೀಡಿದ ಹಾಗೂ ಸಹಕರಿಸಿದ ಎಲ್ಲ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈಗಾಗಲೇ ನಗರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಿದ್ದು, ರು. 90 ಕೋಟಿಯಲ್ಲಿ 2ನೇ ಹಂತದ ಕುಡಿವ ನೀರಿನ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು, ಇನ್ನು 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. 3ನೇ ಹಂತದ ಹಲಿಗುಡ್ಡ ಏತ ನೀರಾವರಿ ಯೋಜನೆಯಿಂದ ನಗರದ ಹೃದಯ ಭಾಗದಲ್ಲಿರುವ ಭೀಷ್ಮ ಕೆರೆಗೆ 0.75 ಟಿಎಂಸಿ ನೀರನ್ನು ಪೂರೈಕೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ. 24್ಢ7 ಕುಡಿವ ನೀರಿನ ಯೋಜನೆಯನ್ನು ನಗರದ ಸುಮಾರು 14 ವಾರ್ಡ್ಗಳಿಗೆ ಪೂರೈಸಲು ನಗರಸಭೆಯು ಕ್ರಮಕೈಗೊಂಡಿದೆ. ಈ ಹಿಂದೆ ಬಿಡುಗಡೆಯಾದ ರು. 30 ಕೋಟಿಯಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನಗರವನ್ನು ಸೌಂದರೀಕರಣಗೊಳಿಸಲು ಶ್ರಮಿಸಲಾಗಿದೆ. ಮತ್ತೇ 13ನೇ ಹಣಕಾಸು ಯೋಜನೆಯ ಅಡಿಯಲ್ಲಿ ರು. 30 ಕೋಟಿ ಬಿಡುಗಡೆಯಾಗಿದ್ದು, ಮುಂಬರುವ ನಗರಸಭೆಯ ನೂತನ ಸದಸ್ಯರು ನಗರದ ಅಭಿವೃದ್ಧಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ರಾಜ್ಯದಲ್ಲಿಯೇ ಗದಗ ನಗರವನ್ನು ಮಾದರಿ ನಗರವನ್ನಾಗಿಸಲು ಶ್ರಮಿಸಬೇಕಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಸದಾನಂದ ಪಿಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರು, ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗವನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಖಮರಸುಲ್ತಾನ್ ನಮಾಜಿ, ಸ್ಥಾಯಿ ಸಮಿತಿಯ ಅಧ್ಯಕ್ಷೆ ವಂದನಾ ವರ್ಣೇಕರ, ಶ್ರೀಕೃಷ್ಣ ಹೊಂಬಾಳಿ, ಜಯಶ್ರೀ ಉಗಲಾಟದ, ವಿಜಯಲಕ್ಷ್ಮೀ ಅಂಗಡಿ, ಆರ್.ಎನ್. ಗೋಡಬೋಲೆ, ಶ್ರೀನಿವಾಸ ಹುಯಿಲಗೋಳ ಉಪಸ್ಥಿತರಿದ್ದರು. ದೊಡ್ಡಮನಿ ಸ್ವಾಗತಿಸಿದರು. ಪ್ರೊ. ಕೆ.ಎಚ್. ಬೇಲೂರ ನಿರೂಪಿಸಿ, ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.