ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜ್ಯ ಸರ್ಕಾರ ಎಚ್ಚರ ವಹಿಸಲಿ

Parashurama
Updated On : 8 Feb 2013, 11:10 am

ಗದಗ: ಕಾವೇರಿ ಐತೀರ್ಪನ್ನು ಫೆ. 20ರೊಳಗೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ್ದು, ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ರಾಜ್ಯಕ್ಕೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕೆಂದು ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
ಗದಗ ಜಿಲ್ಲಾ ಕಸಾಪ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾವೇರಿ, ಕೃಷ್ಣಾ ರಾಜ್ಯದ ಎರಡು ಕಣ್ಣುಗಳಿದ್ದಂತೆ, ಈ ವಿಷಯವಾಗಿ ರಾಜ್ಯಕ್ಕೆ ಕಿಂಚಿತ್ತು ತೊಂದರೆಯಾದರೂ ಕಸಾಪ ಸಹಿಸುವುದಿಲ್ಲ. ನಾವು ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ ಪ್ರತಿನಿಧಿಗಳಾಗಿ ನಾಡಿನ ನೆಲ, ಜಲ, ಭಾಷೆ ರಕ್ಷಣೆಯ ವಿಷಯದಲ್ಲಿ ಬೀದಿಗಳಿದು ಹೋರಾಟ ಮಾಡಲು ಸನ್ನದ್ಧರಾಗಿದ್ದೇವೆ ಎಂದರು.
ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ, ನಾವು ಹೇಡಿಗಳಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಿಗಬೇಕಾದಷ್ಟು ಸಹಾಯ, ಸಹಕಾರ ನಮಗೂ ಸಿಗಬೇಕು. ಸಿಗದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಕನ್ನಡ ರಕ್ಷಿಸುವವರಿಗೆ ಮತ ನೀಡಿ: ವಿಧಾನಸಭಾ ಚುನಾವಣೆ ವೇಳೆ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ, ಯಾವ ಅಭ್ಯರ್ಥಿ ಅಥವಾ ಪಕ್ಷ ಕನ್ನಡವನ್ನು ಪ್ರಾಮಾಣಿಕವಾಗಿ ಕಟ್ಟುವ ಕೆಲಸ ಮಾಡುತ್ತೇವೆ ಎನ್ನುವ ಭರವಸೆ ನೀಡಿ, ಅದರಂತೆ ನಡೆದುಕೊಳ್ಳುವ ಬದ್ಧತೆ ತೋರ್ಪಡಿಸುತ್ತಾರೋ ಅಂಥವರಿಗೆ ಮತ ನೀಡಿ ಎಂದು ಮನವಿ ಮಾಡುತ್ತೇನೆ. ಮುಂದಿನ ಮುಖ್ಯಮಂತ್ರಿ ಅಚಲ ಕನ್ನಡಪರ ನಿಲುವಿನ ವ್ಯಕ್ತಿಯಾಗಿರಬೇಕು ಎನ್ನುವುದು ನನ್ನ ಆಸೆ. ನಮಗೆ ಯಾವುದೇ ಪಕ್ಷ, ವ್ಯಕ್ತಿ ಮುಖ್ಯವಲ್ಲ, ಭಾಷೆಯ ರಕ್ಷಣೆ ಮುಖ್ಯ ಎಂದರು.
ಕಸಾಪಗೆ ಅನುದಾನ ನೀಡಿ: ಸಾಹಿತ್ಯ ಸಮ್ಮೇಳನ ಆಚರಿಸುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲಾಧಿಕಾರಿಗೆ ರು. 1 ಕೋಟಿ ಅನುದಾನ ನೀಡಿದೆ.
ಇದರಿಂದ ಕಸಾಪ ತನ್ನ ಕಾರ್ಯ-ಕಲಾಪಗಳಿಗಾಗಿ ಜಿಲ್ಲಾಧಿಕಾರಿಗಳ ಮುಂದೆ ಕೈಯೊಡ್ಡಿ ನಿಲ್ಲುವಂತಾಗಬಾರದು. ಸರ್ಕಾರ ಕಸಾಪಗೆ ನೇರವಾಗಿ ಅನುದಾನ ನೀಡಬೇಕು. ಮುಂದಿನ ಸಾರಿಯೂ ಜಿಲ್ಲಾಧಿಕಾರಿಗಳಿಗೆ ನೀಡುವುದಿದ್ದಲ್ಲಿ ಸಮ್ಮೇಳನಗಳನ್ನು ನಡೆಸದೇ ಇರುವುದು ಒಳಿತು ಎಂಬ ತಮ್ಮ ಭಾವನೆ ವ್ಯಕ್ತಪಡಿಸಿದರು.
ಮಹಿಷಿ ವರದಿ ಜಾರಿಯಾಗಲಿ: ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವುದಕ್ಕಾಗಿ ಡಾ೤ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರ ಚಿಂತನೆ ನಡೆಸಬೇಕು. ಸರ್ಕಾರ ಒಂದೆಡೆ ಕನ್ನಡ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆ ಹೆಸರಿನಲ್ಲಿ ಮುಚ್ಚುತ್ತಿದ್ದರೆ. ಇನ್ನೊಂದೆಡೆ ನಾಯಿಕೊಡೆಗಳಂತೆ ಇಂಗ್ಲಿಷ್ ಶಾಲೆಗಳು ಪ್ರಾರಂಭವಾಗುತ್ತಿವೆ. ಜಾಗತೀಕರಣ ವ್ಯವಸ್ಥೆ ಹೆಸರಿನಲ್ಲಿ ಪಾಲಕರೇ ಇಂಗ್ಲಿಷ್ ಭಾಷೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಸಿಇಟಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶೇ. 50ರಷ್ಟು ಮೀಸಲಾತಿ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ನಾವೆಲ್ಲ ಒಂದು ಎನ್ನಿ: ಏಕೀಕರಣದ ಕಲ್ಪನೆ ನಂತರ ಸಮಗ್ರ ಕರ್ನಾಟಕ ಒಂದು ಎನ್ನುವ ಭಾವನೆಯಿಂದ ನಾವೆಲ್ಲ ಬದುಕುತ್ತಿದ್ದೇವೆ. ಆದರೆ, ಕೆಲವರು ವಿಭಜನೆ ಮಾತನಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದು, ಫೆ. 9, 10, 11ರಂದು ನಡೆವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯೇ ಇದಕ್ಕೆ ಸ್ಪಷ್ಟ ಉತ್ತರ ಎಂದರು.
2014-15ನೇ ವರ್ಷಕ್ಕೆ ಕಸಾಪ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಕನ್ನಡವನ್ನು ಸಮಗ್ರವಾಗಿ ಕಟ್ಟುವ ಕೆಲಸಕ್ಕೆ ನಾವೆಲ್ಲ ಮುಂದಾಗಬೇಕಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಡಾ೤ ಶಿವಪ್ಪ ಕುರಿ, ಶರಣು ಗೋಗೇರಿ, ಮಲ್ಲೇಶ ಡಿ.ಎಚ್. ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments