ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜ್ಯ ಬಜೆಟ್ ಜಿಲ್ಲೆಯ ಪಾಲಿಗೆ ಸಿಹಿ-ಕಹಿ

Parashurama
Updated On : 9 Feb 2013, 11:46 am

ಕನ್ನಡಪ್ರಭ ವಾರ್ತೆ, ಗದಗ, ಫೆ. 8
ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ಪಟ್ಟಣಗಳು ತಾಲೂಕು ಕೇಂದ್ರಗಳಾಗಬೇಕು ಎನ್ನುವ ಸಾರ್ವಜನಿಕರ ಬಹು ದಿನದ ಬೇಡಿಕೆ ಈಡೇರಿರುವುದನ್ನು ಹೊರತು ಪಡಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳು ಲಭ್ಯವಾಗದೇ ಇರುವುದು ಈ ಬಜೆಟ್ ಜಿಲ್ಲೆಯ ಪಾಲಿಗೆ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ನೀಡಿದೆ.
ಹೊಸ ಯೋಜನೆಗಳೇ ಇಲ್ಲ: ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಯ ಜನತೆ ನೀರಿಕ್ಷೆ ಮಾಡಿದ್ದ ಯಾವೊಂದು ಹೊಸ ಯೋಜನೆಗಳಿಗೆ ಆದ್ಯತೆ ದೊರೆತಿಲ್ಲ. ಯಾವುದೇ ಹೊಸ ಯೋಜನೆಗಳು ಘೋಷಣೆಯಾಗಿಲ್ಲ. ಇನ್ನು ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವಲ್ಲಿ ಅಗತ್ಯವಿರುವ ವೈದ್ಯಕೀಯ ಕಾಲೇಜು ಸ್ಥಾಪನೆ ಕುರಿತು ಈಗಾಗಲೇ ಘೋಷಣೆ ಮಾಡಲಾಗಿತ್ತು. ಈ ಕಾಲೇಜು ಸ್ಥಾಪನೆಗೆ ಬೇಕಾಗುವ ಅಗತ್ಯ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ ರು. 1 ಕೋಟಿ ಅನುದಾನ ಹಾಗೂ ಮುಳಗುಂದ ಪಟ್ಟಣದಲ್ಲಿರುವ ಮಹಾಂತ ಶಿವಯೋಗಿಗಳ ಮಠದ ಅಭಿವೃದ್ಧಿಗೆ ರು. 1 ಕೋಟಿ ನೀಡಿದ್ದನ್ನು ಹೊರತು ಪಡಿಸಿದಲ್ಲಿ ಜಿಲ್ಲೆಗೆ ಯಾವುದೇ ಹೊಸ ಯೋಜನೆಗಳು ಲಭ್ಯವಾಗಿಲ್ಲ.
ಹುಸಿಯಾದ ನಿರೀಕ್ಷೆ: ಜಿಲ್ಲೆಯಲ್ಲಿ ಸುಸಜ್ಜಿತವಾದ ಈರುಳ್ಳಿ ಶೈತ್ಯಾಗಾರ ಬೇಕು ಎನ್ನುವ ಬೇಡಿಕೆಗೆ ಸ್ಪಂದಿಸಿಲ್ಲ. ಇದರೊಟ್ಟಿಗೆ ಜಿಲ್ಲೆಯ 3 ಮುಖ್ಯ ರಸ್ತೆಗಳನ್ನು ರಾಜ್ಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಹಾಗೆಯೇ ಉಳಿದಿದೆ. ಇನ್ನು ಗದಗ-ವಾಡಿ, ಗದಗ-ಹಾವೇರಿ ರೈಲು ನೂತನ ರೇಲ್ವೆ ಮಾರ್ಗಗಳ ನಿರ್ಮಾಣದ ವಿಷಯದಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಜವಾಬ್ದಾರಿಯನ್ನು ಈ ಬಜೆಟ್‌ನ ಮೂಲಕ ಸಾಬೀತು ಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಗದಗ-ಬೆಟಗೇರಿ ಅವಳಿ ನಗರಕ್ಕೆ 24್ಢ7 ನೀರು ಕೊಡುವ ಯೋಜನೆಯ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ.
 ಕೈಗಾರಿಕೆಗಿಲ್ಲ ಆದ್ಯತೆ: ಗದಗ ಜಿಲ್ಲೆ ಆರ್ಥಿಕವಾಗಿ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಕೃಷಿ ಆಧಾರಿತ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾದಲ್ಲಿ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ಎಲ್ಲರ ಆಶಯವಾಗಿತ್ತು. ಆದರೆ. ಪ್ರಸಕ್ತ ಬಜೆಟ್‌ನಲ್ಲಿ ಸಿಎಂ ಶೆಟ್ಟರ್ ಈ ವಿಷಯಕ್ಕೆ ಆದ್ಯತೆ ನೀಡಿಲ್ಲ. ಇನ್ನು ಜಿಲ್ಲೆಯ ಮಹಾತ್ವಾಕಾಂಕ್ಷಿಯ ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡದೇ ಇರುವುದರಿಂದ ರೈತರ ನೀರಾವರಿಯ ಕನಸು ಮತ್ತಷ್ಟು ದಿನಗಳ ಕಾಲ ಮುಂದೂಡುವಂತಾಗಿದೆ.
-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments