ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇತಿಹಾಸ ಹೇಳುವ ಕೋಟೆ ಕೊತ್ತಲಗಳು ವಿನಾಶದತ್ತ

Parashurama
Updated On : 10 Feb 2013, 11:28 am

ಕನ್ನಡಪ್ರಭ ವಾರ್ತೆ, ಉಪ್ಪಿನಬೆಟಗೇರಿ, ಫೆ. 9
ನಮ್ಮ ಇತಿಹಾಸದ ಕಥೆ ಹೇಳುವ ಕೋಟೆಯ ಕೊತ್ತಲಗಳು ಇಂದು ಕಣ್ಮರೆಯಾಗುತ್ತಿದ್ದು, ದೇಗುಲಗಳು ಧ್ವಂಸವಾಗಿವೆ. ಸುರಂಗ ಮಾರ್ಗ ಮುಚ್ಚಿಹೋಗಿವೆ. ಭವ್ಯ ಪರಂಪರೆ ಸಂರಕ್ಷಿಸಿ ಮುಂದಿನ ಪಿಳೀಗೆಗೆ ಕೊಡುಗೆಯಾಗಿ ನೀಡಬೇಕಿರುವುದು ಪುರಾತತ್ವ ಇಲಾಖೆ ಮತ್ತು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಅನೇಕ ವರ್ಷಗಳ ಇತಿಹಾಸ ಹೊಂದಿರುವ ಶರಣ ಸಂಸ್ಕೃತಿ ಹಿನ್ನೆಲೆಯುಳ್ಳ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ, ಗ್ರಾಮ ಸಂಶೋಧಕರು, ಸರ್ಕಾರ ಮತ್ತು ಪುರಾತತ್ವ ಇಲಾಖೆ ದಿವ್ಯ ನಿರ್ಲಕ್ಷ್ಯದ ನೆರಳಲ್ಲಿರುವುದು ವಿಷಾದದ ಸಂಗತಿ.
ಈ ಗ್ರಾಮ 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಂತರ ಜ್ಞಾನನಿಧಿ ಚನ್ನಬಸವೇಶ್ವರರ ನೇತೃತ್ವದಲ್ಲಿ ಉಳವಿಗೆ ಹೊರಟಿದ್ದ ಗಂಗಾಬಿಕಾ, ಕಲ್ಯಾಣಮ್ಮ, ಹರಳಯ್ಯ ಹಾಗೂ ಕಕ್ಕಯ್ಯ ಮುಂತಾದ ಮೂರು ಸಾವಿರ ವಿರಕ್ತರು ಮಾರ್ಗಮಧ್ಯದಲ್ಲಿ ಇಲ್ಲಿಯೇ ತಂಗಿ ಒಂದು ಶ್ರೀ ಮಠದ ಪೀಠ ಪ್ರಾರಂಭಿಸಿ ವಿರುಪಾಕ್ಷ ಶರಣರನ್ನು ಉಸ್ತುವಾರಿಗಾಗಿ ಬಿಟ್ಟು ಮುಂದೆ ಹೊದರಂತೆ. ಅದುವೇ ಇಂದಿನ ಶರಣ ಸಂಸ್ಕೃತಿ ಪ್ರತೀಕವಾದ ಶ್ರೀ ವಿರೂಪಾಕ್ಷೇಶ್ವರ ಮೂರು ಸಾವಿರ ವಿರಕ್ತ ಮಠ.
ತದನಂತರ ರಟ್ಟ ದೊರೆಗಳು, ಬಿಜಾಪುರ ಸುಲ್ತಾನರು, ಮೊಘಲರು, ಪೇಶ್ವೆಯರು, ಬೆಳವಡಿ ಹಾಗೂ ಕಿತ್ತೂರು ಸಂಸ್ಥಾನಗಳ ಆಳ್ವಿಕೆಗೆ ಈ ಗ್ರಾಮ ಒಳಪಟ್ಟಿತ್ತೆಂದು ತಿಳಿದು ಬರುತ್ತದೆ. ತಮ್ಮ ಆಡಳಿತ ಕೇಂದ್ರವನ್ನಾಗಿಸಿಕೊಂಡಿದ್ದ ರಟ್ಟರು ಊರಿನ ಮಧ್ಯ ಭಾಗದಲ್ಲಿರುವ ಎತ್ತರದ ಮರಡಿಯ ಮೇಲೆ ಎರಡು ಸುತ್ತಿನ ಕೋಟೆ, ಅದರ ಸುತ್ತಲೂ ಆಳವಾದ ಕಂದಕ, ಕೋಟೆಯ ಒಳಗಡೆ ಧಾನ್ಯಗಳ ಸಂಗ್ರಹಣೆಗಾಗಿ ಅನೇಕ ಗುಹೆಗಳು, ಎರಡು ನೀರಿನ ಬಾವಿ, ವೈರಿ ಪಡೆಯ ಆಗಮನ ತಿಳಿಯಲು ಮರಡಿಯ ನಾಲ್ಕೂ ದಿಕ್ಕಿಗೂ ಒಂದೊಂದು ಎತ್ತರದ ಬತೇರಿ (ಕಿಲ್ಲೆ) ನಿರ್ಮಿಸುವ ಜೊತೆಗೆ ಗುಪ್ತ ಮಾರ್ಗ ಹೊಂದಿದ್ದರು. ಆ ಮಾರ್ಗಗಳು ಊರಿನಲ್ಲಿದ್ದ ಬಾವಿಗಳಿಗೆ ಮತ್ತು ಕಿತ್ತೂರಿಗೆ ಸಂಪರ್ಕ ಕಲ್ಪಿಸುತ್ತಿದ್ದವು ಎಂದು ಗ್ರಾಮದ ಹಿರಿಯರಿಂದ ತಿಳಿದು ಬರುತ್ತದೆ.
ತಮ್ಮ ಕುಲದೇವತೆಯಾದ ಇಂದಿನ ಪ್ರಸಿದ್ಧ ಸವದತ್ತಿ ಎಲ್ಲಮ್ಮ ದೇವಸ್ಥಾನದ ಮಾದರಿಯಲ್ಲೇ ಉಪ್ಪಿನ ಬೆಟಗೇರಿಯಲ್ಲೂ ಒಂದು ಬೃಹತ್ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದರೆಂದು ಹಿರಿಯರು ಹೇಳುತ್ತಾರೆ. ಹಲವಾರು ರಾಜ ಮನೆತನಗಳ ಆಳ್ವಿಕೆಗೆ ಒಳಪಟ್ಟಿದ್ದ ಉಪ್ಪಿನ ಬೆಟಗೇರಿ ಮೇಲಿಂದ ಮೇಲೆ ಯುದ್ಧಗಳ ಆಕ್ರಮಣಕ್ಕೆ ಒಳಗಾಗಿ ಕೋಟೆ ಹಾಗೂ ಕೆಲ ದೇವಾಲಯಗಳು ಧ್ವಂಸವಾಗಿವೆ. ನಂತರ ಇವುಗಳ ರಕ್ಷಣೆಗಾಗಿ ಸರ್ಕಾರವಾಗಲಿ, ಸ್ಥಳಿಯರಾಗಲಿ ಮುಂದಾಗಲಿಲ್ಲ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.
ಯುದ್ಧಕ್ಕೆ ಬಳಸಿದ ಫಿರಂಗಿ ಇದೆ: ಎರಡು ಕಿಲ್ಲೆಗಳು, ಗುಪ್ತ ಮಾರ್ಗಗಳು ಈ ಪ್ರಾಚೀನ ದೇಗುಲದ ಸಂರಕ್ಷಣೆಗೆ ಮುಂದಾಗದ ಸರ್ಕಾರ ಈಗಲಾದರೂ ಕಣ್ಣು ತೆರೆಯುವುದೇ ನೋಡಬೇಕಿದೆ. ಬೆಟಗೇರಿ ಹತ್ತಿರದಲ್ಲೇ ಇರುವ ಲಕಮಾಪುರದಲ್ಲಿ ಪೇಶ್ವೆ ಬಾಪು ಶಿಂಧೆ ಮತ್ತು ಬೆಳವಡಿ ಸಂಸ್ಥಾನದ ಮಧ್ಯೆ ಯುದ್ಧ ಸಂಭವಿಸಿತ್ತು, ಅದರ ಸಂಕೇತವಾಗಿ ಇಲ್ಲಿ ಇಂದಿಗೂ ಯುದ್ಧಕ್ಕೆ ಬಳಸಿದ್ದ ಫಿರಂಗಿ ಕಾಣ ಸಿಗುತ್ತದೆ. ಇದಕ್ಕೂ ಮೊದಲು ಬಾಪು ತನ್ನ ಸೇನೆಯ ಯುದ್ಧ ತರಬೇತಿಗಾಗಿ ಬೆಟಗೇರಿಗೆ 8 ಕಿ.ಮೀ. ಸಮೀಪದಲ್ಲಿ ಶಿಬಿರವನ್ನು ಏರ್ಪಡಿಸಿದ್ದನಂತೆ. ಅದೇ ಇಂದಿನ ಶಿಬಾರಗಟ್ಟಿ. ಇದಕ್ಕೆ ಪೂರಕವಾಗಿ ಇಲ್ಲಿ ಬಹುಪಾಲು ಜನ ಮರಾಠಿಗರೇ ಇದ್ದಾರೆ.
ಯಾದವರಿದ್ದ ಸ್ಥಳವೇ ಯಾದವಾಡ: ಬೆಟಗೇರಿಯಿಂದ ಐದು ಕಿ.ಮೀ ದೂರದಲ್ಲಿ ಯಾದವರು ವಾಸಿಸುತ್ತಿದ್ದ ಪ್ರದೇಶವೇ ಈಗಿನ ಯಾದವಾಡ ಗ್ರಾಮ. ಹೀಗೆ ಉಪ್ಪಿನ ಬೆಟಗೇರಿ ಐತಿಹಾಸಿಕ ಹಿನ್ನೆಲೆ ಹೊಂದಿದ್ದರೂ ಈ ಬಗ್ಗೆ ಯಾವ ಸಂಶೋಧನೆಯಾಗದಿರುವುದು ಬೇಸರದ ಸಂಗತಿ. ಈಗಲಾದರೂ ಸರ್ಕಾರ, ಪುರಾತತ್ವ ಇಲಾಖೆ, ಸಂಶೋಧಕರು ಇತ್ತಕಡೆ ಗಮನ ಹರಿಸುತ್ತಾರೋ ಕಾದು ನೋಡಬೇಕಿದೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments