ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರಜಾಪ್ರಭುತ್ವ ಸಂಘಟಿಸುವ ಉದ್ದೇಶ

Parashurama
Updated On : 11 Feb 2013, 12:21 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 10
ಪ್ರಜಾಪ್ರಭುತ್ವವನ್ನು ಬೇರು ಮಟ್ಟದಿಂದ, ಕೆಳ ಹಂತದಲ್ಲಿಯೇ ಗಟ್ಟಿಗೊಳಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜನ್ಮ ತಳೆದಿದೆ ಎಂದು ಕೇಂದ್ರದ ಮಾಜಿ ಸಚಿವ, ಸಂಸದ ಮಣಿಶಂಕರ್ ಅಯ್ಯರ್ ಹೇಳಿದರು.
ಅವರು ಭಾನುವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ಗದಗ ತಾಲೂಕು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿನ ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷಗಳ ಆಡಳಿತವನ್ನು ಕರ್ನಾಟಕದ ಜನತೆ ನೋಡಿ ಬೇಸತ್ತಿದ್ದು, ಎಲ್ಲರೂ ದಿನೇ ದಿನೇ ಶಾಶ್ವತ ಮತ್ತು ಸುಭದ್ರವಾದ ಅಧಿಕಾರ ನೀಡುವ ಶಕ್ತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದತ್ತ ಆಕರ್ಷಿತರಾಗುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬರುವುದು ಶತಸ್ಸಿದ್ಧ ಎಂದ ಅವರು, ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ದಿ. ರಾಜೀವ್‌ಗಾಂಧಿ ಅವರು ಹೊಂದಿದ್ದ ಅಪಾರ ಕಾಳಜಿಯಿಂದಲೇ ಇಂದು ಹಿಂದುಳಿದವರು, ದೀನ ದಲಿತರು ಅಧಿಕಾರ ನೋಡುವಂತಾಗಿದೆ. ಈ ರೀತಿಯ ಮೀಸಲಾತಿಯ ಆಧಾರದಲ್ಲಿ ಚುನಾಯಿತರಾಗಿ ಅಧಿಕಾರ ನಡೆಸಿದ ಪ್ರತಿಯೊಬ್ಬರ ಅನುಭವವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಪಕ್ಷವನ್ನು ಗ್ರಾಮೀಣ ಮಟ್ಟದಲ್ಲಿ ಸುಭದ್ರವಾಗಿ ಕಟ್ಟುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ. ಪ್ರಾಯೋಗಿಕವಾಗಿ ಈ ಸಂಘಟನೆಗೆ ದೇಶದಲ್ಲಿಯೇ ಮೊದಲ ಬಾರಿಗೆ ಗದಗ ಜಿಲ್ಲೆಯಿಂದಲೇ ಚಾಲನೆ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ದೇಶಾದ್ಯಂತ ವಿಸ್ತರಿಸಲಾಗುವುದೆಂದರು. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರೊಂದಿಗಿನ ಅನುಭವವನ್ನು ಉದಾಹರಣೆಗಳ ಮೂಲಕ ಅವರು ಹಂಚಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯೆ, ಕಲಾವಿದೆ ಉಮಾಶ್ರೀ ಮಾತನಾಡಿ, ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಬಡವರ ಅನ್ನದ ಚೀಲವನ್ನು ಗಟ್ಟಿಗೊಳಿಸುವ ಪಕ್ಷವಾಗಿದೆ. ಆ ರೀತಿಯಲ್ಲಿ ಅಧಿಕಾರ ನಡೆಸಿದೆ. ಆದರೆ, ಬಿಜೆಪಿ ಮಾತ್ರ ತಮ್ಮ ಹಣಕ್ಕಾಗಿ ಚಿಂತನೆ ಮಾಡುವ ಪಕ್ಷವಾಗಿದ್ದು, ಅದರಿಂದ ರಾಜ್ಯಕ್ಕೆ ಕಿಂಚಿತ್ತೂ ಒಳ್ಳೆಯದಾಗಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರು ಎಷ್ಟೇ ಹಣದ ಆಮಿಷ ತೋರಿಸಿದರೂ ಅದನ್ನೆಲ್ಲ ತಿರಸ್ಕರಿಸಿ ಜನತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಇದರಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.  ಕಾಂಗ್ರೆಸ್ ಪಕ್ಷದ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿ, ಬಿಜೆಪಿಯವರು ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದು ರಾಮನಿಗೇ ಮೋಸ ಮಾಡುತ್ತಿದ್ದಾರೆ. ರಾಮಾಯಣ ರಚಿಸಿದ ವಾಲ್ಮೀಕಿಯನ್ನು ಕಡೆಗಣಿಸಿದ ಇವರಿಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಸದ್ಯದಲ್ಲಿಯೇ ರಾಜ್ಯದ 4 ವಿಭಾಗಗಳಲ್ಲಿ ಎಸ್ಟಿ ಸಮಾವೇಶಗಳನ್ನು ಆಯೋಜಿಸಲಾಗುವುದು. ಈ ದಿನಾಂಕಗಳನ್ನು ಸದ್ಯದಲ್ಲಿಯೇ ಬಹಿರಂಗ ಪಡಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ, ಬಿ.ಆರ್. ಯಾವಗಲ್, ಪಂಚಾಯತ್‌ರಾಜ್ ಸಂಘಟನೆಯ ಉಸ್ತುವಾರಿ ಅರುಣಾ ಖನ್ನೂರ, ಎನ್. ಜಯಪ್ರಕಾಶ, ಮಾಜಿ ಶಾಸಕ ಜಿ.ಎಸ್. ಪಾಟೀಲ, ಪಂಚಾಯತ್‌ರಾಜ್ ಸಂಘಟನೆ ರಾಷ್ಟ್ರೀಯ ಸಂಚಾಲಕ ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ, ಗದಗ ತಾಲೂಕಿನ ಹಲವಾರು ಚುನಾಯಿತ ಪ್ರತಿನಿಧಿಗಳು ಅಭಿಮಾನಿಗಳು ಪಾಲ್ಗೊಂಡಿದ್ದರು. ಪಂಚಾಯತ್‌ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಭು ಮೇಟಿ ಸ್ವಾಗತಿಸಿದರು. ಡಿ.ಕೆ. ಜಮಾದಾರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments