ಮುಖ್ಯಮಂತ್ರಿಗಳ ಆದೇಶಕ್ಕೂ ಕಿಮ್ಮತ್ತಿಲ್ಲ!
ಕನ್ನಡಪ್ರಭ ವಾರ್ತೆ, ಉಪ್ಪಿನ ಬೆಟಗೇರಿ, ಫೆ.10
ಆಕಸ್ಮಿಕ ನಷ್ಟಕ್ಕೆ ಒಳಗಾಗಿ ನೆರವಿಗೆ ನಾಡಿನ ದೊರೆ ಮುಖ್ಯಮಂತ್ರಿ ಮೊರೆ ಹೋದ ರೈತನಿಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯ ಫಲವಾಗಿ ಇಂದಿಗೂ ಕವಡೆ ಕಾಸು ನೆರವು ದೊರೆತಿಲ್ಲ.
ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಮೇವಿನ ಬಣವೆಗಳನ್ನು ಕಳೆದುಕೊಂಡ ಉಪ್ಪಿನ ಬೇಟಗೇರಿ ಗ್ರಾಮದ ರೈತ ಗಂಗಪ್ಪ ಮಡಿವಾಳರ, ತನ್ನ ಜಾನುವಾರುಗಳಿಗೆ ಮೇವಿಲ್ಲ, ನೆರವು ನೀಡಿ ಎಂದು ಯಾಚಿಸಿದ್ದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು. ನೊಂದ ರೈತನ ಮನವಿಗೆ ಸಿಎಂ ಶೆಟ್ಟರ್ ಸ್ಪಂದಿಸಿ, ತಮ್ಮ ಅಧೀನ ಕಾರ್ಯದರ್ಶಿ ಮೂಲಕ ಧಾರವಾಡ ಜಿಲ್ಲಾಧಿಕಾರಿಗೆ ಸೂಚಿಸಿ ರೈತನಿಗೆ ಪರಿಹಾರ ನೀಡಿ ಎಂದು ಆದೇಶಿಸಿದ್ದಾರೆ. ಆದರೆ, ಈ ಆದೇಶ ಇಂದಿಗೂ ಕಾಗದದಲ್ಲಿಯೇ ಉಳಿದಿದೆ.
ಜಿಲ್ಲಾಧಿಕಾರಿಯಿಂದ ಯಾವುದೇ ರೀತಿ ಪ್ರತಿಕ್ರಿಯೆ ಬಾರದ್ದನ್ನು ಗಮನಿಸಿದ ರೈತ ಗಂಗಪ್ಪ ಕೃಷಿ ಸಚಿವ ಉಮೇಶ ಕತ್ತಿ ಅವರಲ್ಲಿ ಪರಿಹಾರಕ್ಕಾಗಿ ಮೊರೆ ಹೋಗಿದ್ದಾನೆ. ಬಳಿಕ ಜಿಲ್ಲಾಧಿಕಾರಿಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಎರಡೂ ಕಡೆಯಿಂದ ಆದೇಶ ಬಂದರೂ ಜಿಲ್ಲಾಡಳಿತ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ, ಜೊತೆಗೆ ಗಂಗಪ್ಪ ಮಡಿವಾಳರ ಸಹಾಯಕ ನಿರ್ದೇಶಕ ಕೃಷಿ ಇಲಾಖೆ, ತಹಸೀಲ್ದಾರ್, ಸ್ಥಳೀಯ ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ ಹತ್ತಾರು ಬಾರಿ ಎಲ್ಲ ಕಚೇರಿಗಳಿಗೆ ಎಡತಾಕಿ ಚಪ್ಪಲಿ ಸವೆದರೂ ರೈತನಿಗೆ ಸಿಕ್ಕಿದ್ದು ಹಾರಿಕೆ ಉತ್ತರಗಳೇ ಹೊರತು ಪರಿಹಾರವಲ್ಲ. ಯಾರೊಬ್ಬರೂ ನೊಂದ ರೈತನ ಅಳಲಿಗೆ ಸ್ಪಂದಿಸದೇ ಮನವಿ ಸ್ವಿಕರಿಸಿ, ಜಿಲ್ಲಾಧಿಕಾರಿಗೆ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಆದರೆ, ಜಿಲ್ಲಾಧಿಕಾರಿ ಮಾತ್ರ ಕೃಷಿ ಇಲಾಖೆಯತ್ತ ಬೆರಳು ತೋರಿಸುತ್ತಿದ್ದಾರೆ ಎಂದು ಗಂಗಪ್ಪ ಮಡಿವಾಳರ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಆದರೆ, ಕೃಷಿ ಇಲಾಖೆ ಅಧಿಕಾರಿಗಳು ಹೇಳೋದೆ ಬೇರೆ. ಬೆಂಕಿ ಅನಾಹುತಗಳಿಂದ ತೊಂದರೆಯಲ್ಲಿರುವ ರೈತರಿಗೆ ಸಹಾಯಧನ ನೀಡಲು ಇಲಾಖೆಯಲ್ಲಿ ಅನುದಾನ ಇಲ್ಲ. ಇದ್ದರೂ ಒಟ್ಟು ಬಜೆಟ್ನ ಸಾವಿರ ಪಟ್ಟು ಪ್ರಕರಣಗಳು ದಾಖಲಾಗುತ್ತವೆ ಹೀಗಿರುವಾಗ ಯಾರಿಗೆ ಸಹಾಯಧನ ನೀಡೋದು ಯಾರಿಗೆ ಬಿಡೋದು ಎನ್ನುತ್ತಾರೆ. ಪ್ರಸಕ್ತ ವರ್ಷ ಧಾರವಾಡ ತಾಲೂಕಿನಲ್ಲಿ ಕಬ್ಬು, ತೊಗರಿ, ಮೇವಿನ ಬಣವೆಗಳು ಸೇರಿದಂತೆ ಒಟ್ಟು 27 ಪ್ರಕರಣಗಳು ದಾಖಲಾಗಿದ್ದು, ಬೆಂಕಿ ಅನಾಹುತದಿಂದ ನಷ್ಟ ಅನುಭವಿಸಿದ ಯಾವ ರೈತರಿಗೂ ಸಹಾಯಧನ ದೊರಕಿಲ್ಲ. ಮೇವಿಲ್ಲದೇ ಬಡವಾಗುತ್ತಿರುವ ಮೂಕ ಪ್ರಾಣಿಗಳ ಗೋಳು ನೋಡಲಾಗದೆ ರೈತ ಗಂಗಪ್ಪ ಈಗಾಗಲೇ ನಾಲ್ಕಾರು ದನಗಳನ್ನು ಮಾರಿದ್ದಾನೆ.
- ಪ್ರಕಾಶ ಹೂಗಾರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.