795 ವಿದ್ಯಾರ್ಥಿಗಳು ಹಾಜರ್
ಕನ್ನಡಪ್ರಭ ವಾರ್ತೆ, ರೋಣ, ಫೆ. 11
ನವೋದಯ ವಸತಿ ಶಾಲೆ ಪ್ರವೇಶಕ್ಕೆ ಪ್ರಸಕ್ತ ಸಾಲಿನ ಜವಾಹರ ನವೋದಯ ವಿದ್ಯಾಲಯ ಪರೀಕ್ಷೆ ಪಟ್ಟಣದ ಬಸಮ್ಮ ಪಾಟೀಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಿ.ಎಫ್. ಪಾಟೀಲ್ ಪ್ರೌಢ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಜರುಗಿತು.
ತಾಲೂಕಿನಲ್ಲಿ ಪರೀಕ್ಷೆಗೆ ಒಟ್ಟು 824 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಇದರಲ್ಲಿ 29 ವಿದ್ಯಾರ್ಥಿಗಳು ಗೈರಾಗಿದ್ದು, 795 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 776 ಕನ್ನಡ ಮಾಧ್ಯಮ ಮತ್ತು 16 ಆಂಗ್ಲ ಮಾಧ್ಯಮ ಹಾಗೂ 3 ಉರ್ದು ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು ಎಂದು ಕೇತ್ರ ಶಿಕ್ಷಣಾಧಿಕಾರಿ ಕೆ.ವಿ.ಪಾಟೀಲ್ ತಿಳಿಸಿದ್ದಾರೆ.
ಪರೀಕ್ಷೆ ವಂಚಿತ ವಿದ್ಯಾರ್ಥಿ: ಶಿಕ್ಷಕನ ತಪ್ಪು ಮಾಹಿತಿ ಮತ್ತು ಸಲಹೆಯಿಂದಾಗಿ ಭಾನುವಾರ ನಡೆದ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಿಂದ ತಾಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧರ್ಮಪ್ಪ ಮಾದರ ಎಂಬ 5ನೇ ತರಗತಿಯ ವಿದ್ಯಾರ್ಥಿ ಪರೀಕ್ಷೆ ಬರೆಯದೇ ವಂಚಿತನಾಗಿದ್ದಾನೆ.
ನಾಗರಾಳ ಶಾಲಾ ಶಿಕ್ಷಕರೊಬ್ಬರು ತಮ್ಮ ಶಾಲೆಯ ವಿದ್ಯಾರ್ಥಿ ಧರ್ಮಪ್ಪ ಮಾದರ ಇವರ ತಂದೆ ಲಕ್ಕಪ್ಪ ಮಾದರ ಅವರನ್ನು ಕರೆದು, ನಿಮ್ಮ ಮಗನ ಪರೀಕ್ಷೆ ಭಾನುವಾರ ರೋಣದಲ್ಲಿ ನಡೆಯುತ್ತದೆ. ಕರೆದುಕೊಂಡು ನೀವೇ ಹೋಗಬೇಕು. ನಾವು ಯಾರೂ ಬರುವುದಿಲ್ಲ. ನಮ್ಮದು ಪರೀಕ್ಷೆ ಹಾಲ್ ಟಿಕೆಟ್ ಕೊಡುವುದಷ್ಟೇ ಕೆಲಸ ಎಂದು ಹೇಳಿ ರೋಣಕ್ಕೆ ಕಳಿಸಿದರು. ಆದರೆ, ವಿದ್ಯಾರ್ಥಿ ಪಾಲಕ ರೋಣಕ್ಕೆ ಬೆಳಗ್ಗೆ 10 ಗಂಟೆಗೆ ಬಂದರೂ ಮಧ್ಯಾಹ್ನ 12 ಗಂಟೆಯವರೆಗೆ ಮಗನೊಂದಿಗೆ ರೋಣದಲ್ಲಿ ಪರೀಕ್ಷೆ ಕೇಂದ್ರ ಹುಡುಕಿದ್ದಾರೆ. ಕೊನೆಗೆ ಪಟ್ಟಣದ ಬಸಮ್ಮ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಬಂದಾಗ 12 ಗಂಟೆಯಾಗಿತ್ತು.
11.30ಕ್ಕೆ ಪರೀಕ್ಷೆ ಪ್ರಾರಂಭವಾಗಿದ್ದರಿಂದ 12ಕ್ಕೆ ಬಂದ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಅಲ್ಲಿನ ವೀಕ್ಷಕ ಮತ್ತು ಅಧೀಕ್ಷಕರು ಅನುಮತಿ ನೀಡಲಿಲ್ಲ. ನಮಗೆ ನಾಗರಾಳ ಶಾಲೆಯ ಶಿಕ್ಷಕರು ಸರಿಯಾಗಿ ಮಾಹಿತಿ ನೀಡದ್ದರಿಂದ ನಮ್ಮ ಮಗ ಪರೀಕ್ಷೆ ಬರೆಯದೆ ವಂಚಿತನಾಗುವಂತಾಯಿತೆಂದು ತಂದೆ ಲಕ್ಕಪ್ಪ ಮಾದರ ಕಣ್ಣೀರು ಹಾಕಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.