ರು. 1.92 ಕೋಟಿ ಉಳಿತಾಯ ಬಜೆಟ್ ಮಂಡನೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಗದಗ-ಬೆಟಗೇರಿ ನಗರಸಭೆಯ 2013-14ನೇ ಸಾಲಿನ ಬಜೆಟ್ನ್ನು ನಗರಸಭೆಯ ಹಲವು ಸದಸ್ಯರ ಪರ-ವಿರೋಧದ ಮಧ್ಯೆ ರು. 1.92 ಕೋಟಿ ಉಳಿತಾಯ ಬಜೆಟ್ನ್ನು ಸೋಮವಾರ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಮಂಡಿಸಿದರು.
2013-14ನೇ ಸಾಲಿಗಾಗಿ ಒಟ್ಟು ರು. 85,72,35,694 ಕೋಟಿಯ ಅಂದಾಜು ವೆಚ್ಚ ಮಾಡುವ ಬಜೆಟ್ ಇದಾಗಿದೆ. ರು. 75,90,25,500 ಆದಾಯವನ್ನು ನಿರೀಕ್ಷಿಸಲಾಗಿದೆ. ಆರಂಭದ ಶಿಲ್ಕು ರು. 11,74,90,143 ಇದೆ. ಹೀಗಾಗಿ ಶಿವಣ್ಣ ಮುಳಗುಂದ ಅವರು ರು. 1,92,79,949 ಉಳಿತಾಯ ಬಜೆಟ್ ಮಂಡಿಸಿದರು.
ಅಂದಾಜು ಆದಾಯ: ಪ್ರಸಕ್ತ ವರ್ಷದಲ್ಲಿ ಮುಖ್ಯಮಂತ್ರಿಯವರ ಅಭಿವೃದ್ಧಿ ಅನುದಾನದಿಂದ ರು. 30 ಕೋಟಿ, ಎಸ್ಎಫ್ಸಿ ಮುಕ್ತ ನಿಧಿ ಅನುದಾನದಿಂದ ರು. 8 ಕೋಟಿ, ವಿದ್ಯುತ್ ಅನುದಾನ ರು. 7.20 ಕೋಟಿ, ಆಸ್ತಿ ತೆರಿಗೆಯಿಂದ ರು. 2.42.25.806, ನೀರು ಸರಬರಾಜು ಮೂಲಗಳ ಆದಾಯ ರು. 1.17 ಕೋಟಿ, 13ನೇ ಹಣಕಾಸು ಅನುದಾನ ರು. 4.60 ಕೋಟಿ, ಅಸಾಧಾರಣ ಸ್ವೀಕೃತಿಗಳಿಂದ ರು. 7,80,96,775 ಇತರೆ ಅನುದಾನ ರು. 1.25 ಕೋಟಿ ಹಾಗೂ ಇನ್ನಿತರ ಮೂಲಕ ಒಟ್ಟು ರು. 75,90,25,500 ಅಂದಾಜು ಆದಾಯ ನೀರಿಕ್ಷಿಸಲಾಗಿದೆ.
ಅಂದಾಜು ಖರ್ಚು: ನೌಕರರ ವೇತನಕ್ಕಾಗಿ ರು. 9,66,73,728 ವಿದ್ಯುತ್ ಸುಡತಿ ಬಿಲ್ ರು. 7.20 ಕೋಟಿ, ಕೆಯುಐಡಿಎಫ್ಸಿ ಶೇ. 10 ವಂತಿಗೆ ರು. 1 ಕೋಟಿ, ತೆರೆದ ಚರಂಡಿಗಳು ಸಣ್ಣ ಸೇತುವೆ ಮಾರ್ಗಗಳು ರು. 6.50 ಕೋಟಿ, ಲ್ಯಾಂಡ್ ಫಿಲ್ ಸೈಟ್ ಅಭಿವೃದ್ಧಿಗಾಗಿ ರು. 1.50 ಕೋಟಿ, ನೀರು ಸರಬರಾಜು ವ್ಯವಸ್ಥೆಗಾಗಿ ರು. 2.50 ಕೋಟಿ, ಉದ್ಯಾನಗಳ ಅಭಿವೃದ್ಧಿಗಾಗಿ ರು. 1 ಕೋಟಿ, ಅಸಾಧಾರಣ ಪಾವತಿಗಳಿಗಾಗಿ ರು. 7,34,50,000 ಅಂದಾಜು ಖರ್ಚಿನ ಬಜೆಟ್ ಮಂಡಿಸಿದರು.
ನಗರಸಭೆ ವಿರೋಧ ಪಕ್ಷದ ನಾಯಕ ಎಂ.ಎಂ. ಹಿರೇಮಠ ಹಾಗೂ ಹೈಸ್ಕೂಲ್ ಕಮಿಟಿ ಅಧ್ಯಕ್ಷ ಸದಾನಂದ ಪಿಳ್ಳಿ ಮಾತನಾಡಿ, ಈ ಬಜೆಟ್ ಸಂಪೂರ್ಣ ಜನವಿರೋಧಿ ಬಜೆಟ್ ಆಗಿದ್ದು, ಇದರಲ್ಲಿ ನಗರದ ಒಳರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೇ ಬಜೆಟ್ ಮಂಡಿಸಲಾಗಿದೆ. ದಲಿತ ವಿರೋಧಿ ಬಜೆಟ್, ಅಧಿಕಾರಿಗಳು ಹೊಂದಿಸಿದ ಮಾಹಿತಿಯಂತೆ ಅಧ್ಯಕ್ಷರು ಓದುತ್ತಿದ್ದಾರೆಂದು ಆರೋಪಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ನಂತರ ನಗರಸಭೆ ಅಧ್ಯಕ್ಷರು ವಿರೋಧ ಪಕ್ಷದವರು ಹಾಗೂ ಸರ್ವ ಸದಸ್ಯರು ನೀಡಿದ ಮಾಹಿತಿಯನ್ನು ಪಡೆದುಕೊಳ್ಳುವ ಮೂಲಕ ಬಜೆಟ್ನಲ್ಲಿ ಸೇರಿಸುವ ಕುರಿತು ಹೇಳಿಕೆ ನೀಡಿದ ನಂತರ ಸಭೆ ಮುಕ್ತಾಯವಾಯಿತು. ನಗರಸಭೆ ಉಪಾಧ್ಯಕ್ಷೆ ಖಮರಸುಲ್ತಾನ್ ನಮಾಜಿ, ಸದಸ್ಯೆ ಎಲ್.ಡಿ. ಚಂದಾವರಿ, ಸಿದ್ದು ಪಲ್ಲೇದ, ಲಕ್ಷ್ಮೀದೇವಿ ಕಟ್ಟಿಮನಿ, ವಂದನಾ ವರ್ಣೇಕರ ಮುಂತಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.