ಹಿಂದೂಗಳ ಮತಾಂತರ ಖಂಡಿಸಿ ಧರಣಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 11
ಜಿಲ್ಲೆಯಲ್ಲಿ ಮುಗ್ದ ಹಿಂದೂ ಜನತೆಯನ್ನು ಮತಾಂತರಗೊಳಿಸುತ್ತಿರುವುದನ್ನು ತಡೆಯಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆ ಗದಗ ಜಿಲ್ಲಾ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರವಿ ಶಿದ್ಲಿಂಗ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ವ್ಯಾಪ್ತಿಗೆ ಬರುವ ಬಹುತೇಕ ಜಾತಿಯ ಜನರನ್ನು ಹಾಗೂ ಕಡುಬಡತನದಲ್ಲಿರುವ ಅನೇಕ ವರ್ಗದ ಜನತೆಗೆ ಆಮಿಷವೊಡ್ಡಿ ಮತಾಂತರ ಮಾಡಿಕೊಳ್ಳುತ್ತಿರುವ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಅನ್ಯ ಕೋಮಿನ ಅನುಯಾಯಿಗಳನ್ನು ಕೂಡಲೇ ಬಂಧಿಸಬೇಕು.
ಜಿಲ್ಲೆಯ ಮುಂಡರಗಿ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲ ಕ್ರಿಶ್ಚಿಯನ್ ಸಮುದಾಯದವರು ಅತ್ಯಂತ ಹಿಂದುಳಿದ, ಬಡ ಲಂಬಾಣಿ, ಪರಿಶಿಷ್ಟ ಜಾತಿಗೆ ಸೇರಿದ ಹಿಂದೂ ವಡ್ಡರ, ಕೊರವರ, ಮಾದರ ಜನಾಂಗ, ಪರಿಶಿಷ್ಟ ಪಂಗಡದ ವಾಲ್ಮೀಕಿ ಸಮುದಾಯದ ಯುವಕರಿಗೆ ವಿವಿಧ ಆಮಿಷಗಳನ್ನು ಒಡ್ಡುವ ಮೂಲಕ ಮತಾಂತರದಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವು ಕಡೆ ಬಲವಂತದಿಂದ ಮತಾಂತರ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀರಾಮಸೇನೆ ಸಂಘಟನೆಯ ಕಾರ್ಯಕರ್ತರು ಮತಾಂತರವಾಗದಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದರು.
ಮತಾಂತರ ಮಾಡುವವರನ್ನು ತಡೆಯಲು ನಮ್ಮ ಸಂಘಟನೆಯ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆಯ ಸಹಕಾರ ಸಿಗುತ್ತಿಲ್ಲ. ಬದಲಾಗಿ ಮತಾಂತರ ಮಾಡುತ್ತಿರುವ ಜನರಿಂದಲೇ ನಮ್ಮ ಸಂಘಟನೆಯ ಮೇಲೆ ದೂರು ಪಡೆದು ಸಂಘಟನೆಯ ಕಾರ್ಯಕರ್ತರ ಮೇಲೆ ಜಾತಿ ನಿಂದನೆಯ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವ ಪರಂಪರೆ ಹಾಕಿಕೊಂಡಿದ್ದಾರೆ. ಇದಕ್ಕೆ ಉದಾಹರಣೆಯಂದರೆ ಫೆ. 4 ರಂದು ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಮತಾಂತರ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ತಡೆಯಲು ಮುಂದಾದ ಸಂದರ್ಭದಲ್ಲಿ ಮತಾಂತರಗೊಂಡ ಯುವಕರು ನಮ್ಮ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪೂಲೀಸರು ಸಹ ಅಗತ್ಯ ವಿಚಾರಣೆ ನಡೆಸದೇ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.
ವಿವಿಧ ಆಮಿಷ, ಆಸೆ ತೋರಿಸಿ ಮುಗ್ಧ ಜನತೆಯನ್ನು ಮತಾಂತರ ಮಾಡುವುದರಲ್ಲಿ ನಿರತವಾಗಿರುವ ಕ್ರಿಶ್ಚಿಯನ್ ಸಮುದಾಯ ಹಾಗೂ ಅನ್ಯ ಕೋಮಿನ ಜನರ ಮೇಲೆ ಸೂಕ್ತ ನಿಗಾವಹಿಸಬೇಕು. ಸುಳ್ಳು ಜಾತಿ ನಿಂದನೆ ಪ್ರಕರಣದಲ್ಲಿ ಬಂಧಿಸಿರುವ ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರ ಮೇಲಿನ ಎಲ್ಲ ಪ್ರಕರಣ ವಾಪಸ್ ಪಡೆಯಬೇಕು. ಇಲ್ಲದೇ ಹೋದಲ್ಲಿ ಸಂಘಟನೆಯ ಪರವಾಗಿ ರಾಜ್ಯಾದ್ಯಂತ ವಿವಿಧ ರೀತಿಯ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ, ಮಂಜಯ್ಯಸ್ವಾಮಿ ಅರವಟಗಿಮಠ, ಬಸನಗೌಡ ಪಾಟೀಲ, ಶ್ರೀಕಾಂತ ಬಡಿಗೇರ, ಶಿವರುದ್ರಪ್ಪ ತಳವಾರ ಮತ್ತಿತರರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.