ಚೌಡಯ್ಯ ನಿಷ್ಠುರ ವಚನಕಾರ: ದೇವರು
ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಅಂಬಿಗರ ಚೌಡಯ್ಯ ಶರಣರು ಅತ್ಯಂತ ನ್ಯಾಯ ನಿಷ್ಠುರ ವಚನಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ಬಸವತತ್ವ ಮಹಾಮನೆಯ ಶರಣಬಸವ ದೇವರು ಹೇಳಿದರು. ಅವರು ಈಚೆಗೆ ತೋಂಟದಾರ್ಯ ಮಠದಲ್ಲಿ 2106ನೇ ಶಿವಾನುಭವದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು.
ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಅನುಪಸ್ಥಿತಿಯಲ್ಲಿ ಸಮಾರಂಭದ ನೇತೃತ್ವ ವಹಿಸಿ ಆಶೀರ್ವಚನ ನೀಡಿದ ಕುಮಾರೇಶ್ವರ ಪಾಠಶಾಲೆಯ ಮುಖ್ಯಸ್ಥ ಗಂಗಾಧರದೇವರು, ಅಂಬಿಗರ ಚೌಡಯ್ಯನವರ ಬೋಧನೆಗಳನ್ನು ಅಭ್ಯಸಿಸಿ ಅವುಗಳ ಆಚರಣೆಗೆ ಜನತೆ ಮುಂದಾಗಬೇಕು.
ದೇವರ ಹೆಸರಲ್ಲಿ ಆಚರಿಸುವ ಧಾರ್ಮಿಕ ಕಂದಾಚಾರಗಳಿಂದ ದೂರವಿರಬೇಕು, ಅಂದಾಗ ಮಾತ್ರ ಶರಣ ಸಂಸ್ಕೃತಿಯ ಜೀವನಕ್ಕೆ ಸಾರ್ಥಕತೆ ಬರಲು ಸಾಧ್ಯ ಎಂದರು.
ಹರ್ತಿಯ ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಶಹನಾಯಿ ವಾದನ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ರಮೇಶ ಬೇವಿನಕಟ್ಟಿ, ಶ್ರೀಕಾಂತ ಹಿರೇಮಠ ಇವರಿಂದ ಧರ್ಮಗ್ರಂಥ ಪಠಣ ಹಾಗೂ ಚಿಂತನೆ ನಡೆಯಿತು. ಸಂಘದ ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು.
ಮಂಜುಳಾ ಹಾಸೀಲಕರ ನಿರೂಪಿಸಿದರು. ಅಧ್ಯಕ್ಷ ಅಮರೇಶ ಅಂಗಡಿ, ಪ್ರಕಾಶ ಕರಿಸೋಮನಗೌಡ್ರ, ಅನ್ನಕ್ಕ ಬಡಿಗಣ್ಣವರ, ವೀರೇಶ ಮುನವಳ್ಳಿ, ಸಿದ್ದಲಿಂಗಯ್ಯ ಹಿರೇಮಠ, ತೋಂಟೇಶ ಕುರಡಗಿ ಮತ್ತಿತರರು ಹಾಜರಿದ್ದರು.