ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿಸರ್ಗದ ಸೊಬಗು ಆನಂದಿಸಿ: ಸಿದ್ದೇಶ್ವರ ಶ್ರೀ

Parashurama
Updated On : 15 Feb 2013, 12:13 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 14
ಐಹಿಕ ಸಂಪತ್ತು ಗಳಿಸುವುದಕ್ಕಿಂತ ನಿಸರ್ಗದತ್ತವಾಗಿ ನಮಗೆ ಸಿಕ್ಕ ಅನೇಕ ಸಂಗತಿಗಳಿಂದ ಆನಂದ ಪಡೆಯದೆ ಕೊನೆ ಗಳಿಗೆಯಲ್ಲಿ ಪಶ್ಚಾತ್ತಾಪ ಪಟ್ಟರೆ ಉಪಯೋಗವಿಲ್ಲ. ನಿಸರ್ಗದ ಸೊಬಗನ್ನು ಪ್ರತಿಯೊಬ್ಬರೂ ಆನಂದಿಸಿ ಎಂದು ಬಿಜಾಪುರದ ಸಿದ್ದೇಶ್ವರ ಶ್ರೀಗಳು ಹೇಳಿದರು.
ಗುರುವಾರ ನಗರದ ಆಧ್ಯಾತ್ಮಿಕ ವೇದಿಕೆ ಆಶ್ರಯದಲ್ಲಿ ವಿದ್ಯಾದಾನ ಸಮಿತಿ ಪ್ರೌಢಶಾಲೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಪ್ರವಚನ ನೀಡಿದ ಅವರು, ಪ್ರತಿಯೊಬ್ಬರ ಆನಂದದ ಅನುಭೂತಿಗೆ ಬೇಕಾದುದನ್ನು ದೇವರು ನೀಡಿದ್ದಾನೆ. ಅದನ್ನು ಅನುಭವಿಸಬೇಕು. ಜೀವನವನ್ನು ಸಂತೋಷಗೊಳಿಸಿಕೊಳ್ಳಬೇಕು. ಈ ಜಗತ್ತಿಗೆ ಮನುಷ್ಯ ಬರುವುದು ಕೆಲಹೊತ್ತು ಮಾತ್ರ, ಇಲ್ಲಿಯೇ ಕಾಯಂ ಇರಲು ಯಾರೂ ಬಂದಿಲ್ಲ. ಬಂದರೂ ಶಾಶ್ವತವಾಗಿ ಇರುವುದಕ್ಕೆ ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮನುಷ್ಯ ತಾನು ಈ ಭೂಮಿಗೆ ಬಂದ ಉದ್ದೇಶ ಮರೆತು ಇಡಿ ಜಗತ್ತೇ ತನ್ನ ನಿಯಂತ್ರಣದಲ್ಲಿರಬೇಕೆಂದು ಹಿಟ್ಲರ್‌ನಂತೆ ಬಯಸಬಾರದು ಎಂದರು.
ಇನ್ನು ಕೆಲವರು ಬಂದರು, ಈ ಜಗತ್ತಿನ ಸೌಂದರ್ಯ ಅರಿತರು. ಸುಂದರ ಬಾಳು ಬಾಳಿದರು. ಶಾಂತಿ, ಸಹನೆ, ಆನಂದ ಹರಡುತ್ತ ಇಡಿ ವಿಶ್ವವನ್ನೇ ಸ್ವರ್ಗ ಮಾಡಬೇಕೆಂದು ಪ್ರಯತ್ನಿಸಿದರು. ಅಂಥವರ ಸಾಲಿಗೆ ಭಗವಾನ್ ಬುದ್ಧರಂಥ ದಾರ್ಶನಿಕರು ಸೇರುವರು. ಉದಾತ್ತವಾದ ಪ್ರಕೃತಿಯ ಆರಾಧಕರ ಸಾಲಿಗೆ ರವಿಂದ್ರನಾಥ ಟ್ಯಾಗೋರಂತಹ ಕವಿಗಳು ಸೇರುತ್ತಾರೆ ಎಂದುತಿಳಿಸಿದರು.
ನಮ್ಮ ಮನಸ್ಸಿನ ಆನಂದಕ್ಕೆ ಕಾರಣವಾಗಬಲ್ಲ ಸಣ್ಣ ಪುಟ್ಟ ಸಂಗತಿಗಳನ್ನು ಗಮನಿಸದೆ ಸಂಪತ್ತಿನ ಗಳಿಕೆ, ಸಂಗ್ರಹವೇ ಜೀವನ ಎಂದು ತಿಳಿದ ಮನುಷ್ಯರಿಗೆ ಆನಂದ ಪಡಲು ವೇಳೆಯಾದರೂ ಎಲ್ಲಿದೆ ಎಂದು ಪ್ರಶ್ನಿಸಿದ ಶ್ರೀಗಳು, ಆಂತರಿಕ ಸಂತೋಷಕ್ಕಿಂತ ಆನಂದದ ಅನುಭೂತಿಗಿಂತ ಮಿಗಿಲಾದ ಗುರಿ ಇನ್ನೊಂದಿಲ್ಲ, ಅಂತಹ ಆಂತರಿಕ ಸಂತೋಷ ನಮ್ಮೊಳಗಿನಿಂದಲೇ ಬರುವಂತಹದು. ಅದು ಇದ್ದ ಮನುಷ್ಯ ಎಲ್ಲಿದ್ದರೂ ಹೇಗಿದ್ದರೂ ಆನಂದದಲ್ಲಿರುವನು. ಅಂತಹ ಬದುಕಿನ ಶೈಲಿ ನಮ್ಮದಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement