ಪುರಸಭೆ ಆಡಳಿತಾಧಿಕಾರಿ ಅಧಿಕಾರ ಸ್ವೀಕಾರ
ಗಜೆಂದ್ರಗಡ: ಸ್ಥಳೀಯ ಜನತೆಯ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸಿ ಆಡಳಿತದ ಮೌಲ್ಯ ಹೆಚ್ಚಿಸಲು ಪೌರ ಸೇವಾ ನೌಕರರು ಮುಂದಾಗಿ ಎಂದು ಉಪವಿಭಾಗಧಿಕಾರಿ ಐ.ಜೆ ಗದ್ಯಾಳ ಹೇಳಿದರು.
ಅವರು ಗುರುವಾರ ಸ್ಥಳೀಯ ಪುರಸಭೆಗೆ ಆಡಳಿತಾಧಿಕಾರಿ ನೇಮಕಗೊಂಡ ಹಿನ್ನೆಲೆಯಲ್ಲಿ ಸಭಾಭವನದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪೌರ ಸೇವಾ ನೌಕರರೊಂದಿಗೆ ಪುರಸಭಾ ಸದಸ್ಯರ 5 ವರ್ಷದ ಅವಧಿಯಲ್ಲಿ ಪಟ್ಟಣದಲ್ಲಿನ ಅಭಿವೃದ್ಧಿ ಹಾಗೂ ಅವರ ಕಾರ್ಯಕ್ಷಮತೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಜನತೆಯ ಮೂಲ ಸೌಲಭ್ಯಗಳಿಗೆ ಮೊದಲಾದ್ಯತೆ ನೀಡುವುದರ ಜತೆಗೆ ಕುಡಿಯುವ ನೀರಿನ ಸಮಸ್ಯೆಯಂತಹ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುವುದು ಎಂದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಆಡಳಿತಾಧಿಕಾರಿಗಳಿಗೆ ಪುರಸಭಾ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಪುರಸಭೆಯ ಆಡಳಿತದ ಸಮಗ್ರ ಮಾಹಿತಿ ನೀಡಿದರು. ರೋಣ ತಹಸೀಲ್ದಾರ್ ಎಸ್.ಆರ್.ಕಡಿವಾಲರ, ಗಜೇಂದ್ರಗಡ ಪ್ರಭಾರಿ ವಿಶೇಷ ತಹಸೀಲ್ದಾರ್ ಎನ್.ಎಸ್. ಕೂಡಲ, ಸಿ.ಕೆ. ಕುಲಕರ್ಣಿ, ಪಿ.ಎನ್. ದೊಡ್ಡಮನಿ, ಬಸವರಾಜ ಇಂಡಿ, ಎಂ.ಬಿ. ಒಂಟಿ, ಮಹೇಶ ನಿಡಶೇಸಿ, ಬಸವರಾಜ ಬಳಗಾನೂರ ಹಾಜರಿದ್ದರು.