ಪ್ರೇಮಿಗಳ ದಿನ: ಶ್ರೀರಾಮಸೇನೆ ಪ್ರತಿಭಟನೆ
ಗದಗ: ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಗುರುವಾರ ಶ್ರೀರಾಮಸೇನೆ ಕಾರ್ಯಕರ್ತರು ನಗರದ ನಾಡಕವಿ ಹುಯಿಲಗೋಳ ನಾರಾಯಣ ರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ವಿದೇಶಿ ಸಂಸ್ಕೃತಿಯ ವ್ಯಾಲೆಂಟೈನ್ಸ್ ಡೇ ವಿರುದ್ಧ ಘೋಷಣೆ ಕೂಗಿದರು.
ಹೋರಾಟದ ನೇತೃತ್ವ ವಹಿಸಿದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ರವಿ ಶಿದ್ಲಿಂಗ್ ಮಾತನಾಡಿ, ಪ್ರೇಮಿಗಳ ದಿನ ಎಂಬ ವಿಚಿತ್ರ ಆಚರಣೆ ಪಾಶ್ಚಿಮಾತ್ಯ ಸಂಸ್ಕೃತಿಯ ವಿರೂಪವಾಗಿದೆ. ಇಂತಹ ದಿನಾಚರಣೆ ಕೂಡದು. ಯುವಕ-ಯುವತಿಯರು ವ್ಯಾಲೆಂಟೈನ್ಸ್ ಡೇಯಂದು ಪ್ರೀತಿ-ಪ್ರೇಮ ಎಂದು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂದು ನಮ್ಮ ದೇಶದಲ್ಲಿ ಇಂತಹ ವಿದೇಶಿ ಸಂಸ್ಕೃತಿಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಇಂದಿನ ಜೀವನ ಶೈಲಿಯೇ ಪ್ರಮುಖ ಕಾರಣವಾಗಿದೆ ಎಂದರು.
ಯುವಜನತೆ ಇಂತಹ ವಿಕೃತ ಸಂಸ್ಕೃತಿಗೆ ಮಾರುಹೋಗುತ್ತಿರುವುದು ನೋವಿನ ಸಂಗತಿ. ಇದನ್ನು ಶ್ರೀರಾಮ ಸೇನೆ ವಿರೋಧಿಸುತ್ತದೆ. ವ್ಯಾಲೆಂಟೈನ್ಸ್ ಡೇ (ಪ್ರೇಮಿಗಳ ದಿನ) ಎಂಬ ವಿಕೃತ ಸಂಸ್ಕೃತಿಯನ್ನು ಆಚರಿಸದೆ ಇಂದಿನ ದಿನವನ್ನು ತಂದೆ-ತಾಯಿಯರ ಪೂಜೆಯ ದಿನವಾಗಿ ಆಚರಿಸುವಂತೆ ಕರೆ ನೀಡಿದರು. ಶ್ರೀರಾಮಸೇನೆ ಕಾರ್ಯಕರ್ತರು ಪ್ರೀತಿ-ಪ್ರೇಮದ ಸಂದೇಶವುಳ್ಳ ಶುಭಾಶಯ ಪತ್ರಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ವಿದೇಶಿ ಸಂಸ್ಕೃತಿಯ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆಯಲ್ಲಿ ಶ್ರೀರಾಮಸೇನೆಯ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ, ಹುಲಿಗೆಪ್ಪ ವಡ್ಡರ, ಹುಲಿಗೆಪ್ಪ ವಾಲ್ಮೀಕಿ, ಸುರೇಶ ಹೆಬಸೂರ, ಸೀನು ಬದಿ, ರವಿಕಿರಣ ಪುಣೇಕರ ಪಾಲ್ಗೊಂಡಿದ್ದರು.