ವಿಕಲಚೇತನರ ನಿರ್ಲಕ್ಷ್ಯ ಬೇಡ: ಮುಂದಿನಮನಿ
ಗದಗ: ವಿಕಲತೆಯುಳ್ಳವರಲ್ಲಿಯು ಅನೇಕ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಅವಕಾಶವಿಲ್ಲದೆ ಕಮರಿ ಹೋಗುತ್ತಿವೆ ಎಂದು ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ ಬೇಸರ ವ್ಯಕ್ತ ಪಡಿಸಿದರು.
ಅವರು ಬುಧವಾರ ನಗರದ ಪ್ರಭು ರಾಜೇಂದ್ರ ಶಾರೀರಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ ವಿವಿಧ ಇಲಾಖೆಗಳ ಸ್ಪೆಶಲ್ ಓಲಿಂಪಿಕ್ ಸಹಯೋಗದಲ್ಲಿ ವಿಕಲಚೇತನ ಮಕ್ಕಳಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ಗದಗ ಸ್ಪೊರ್ಟ್ಸ್ ಮತ್ತು ಕಲ್ಚರಲ್ ಅಕಾಡೆಮಿ ಕಾರ್ಯದರ್ಶಿ ಸಿದ್ದಲಿಂಗೇಶ ಮೆಣಸಿನಕಾಯಿ, ನಾವೂ ಅನೇಕ ಸಾರಿ ವಿಕಲಚೇತನ ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದೇವೆ. ಅವರ ಸಾಮರ್ಥ್ಯಗಳ ಪ್ರದರ್ಶನಕ್ಕೆ ಇಲ್ಲಿ ಅವಕಾಶ ಕಲ್ಪಿಸಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ನಮ್ಮ ಅಕಾಡೆಮಿಯಿಂದಲೂ ಇಂತಹ ಕ್ರೀಡಾಕೂಟ ಸಂಘಟನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ವಿಶೇಷ ಓಲಿಂಪಿಕ್ನ ರಾಷ್ಟ್ರೀಯ ಕೋಚ್ ಭಾರತಿ ಕೋಠಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆ ಮತ್ತು ಮನರಂಜನೆ ಮಕ್ಕಳ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ವಿಕಲಚೇತನರ ಮನಸ್ಸು ತುಂಬಾ ಸೂಕ್ಷ್ಮವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅತಿಥಿಗಳಾಗಿ ಪ್ರಭು ರಾಜೆಂದ್ರ ಶಾರೀರಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ. ಮೇಟಿ, ಎಂ. ಬಾಬುರಾವ್, ಮಯಾಸ್ನ ನೀರ್ದೇಶಕ ಶಶಿಧರ ಚಳಿಗೇರಿ, ವೈ.ಕೆ.ಚೌಡಾಪುರ, ಜಿ.ಎಚ್. ಪಿಂಜಾರ, ವಿ.ಎಫ್. ಕಲಕಂಬಿ, ವೈ.ಕೆ. ಓಸೇಕರ್ ಪಾಲ್ಗೊಂಡಿದ್ದರು. ಬಸವರಾಜ ನಿರೂಪಿಸಿ, ಪಿ.ಎಸ್.ಕೊರಡು, ಸ್ವಾಗತಿಸಿದರು. ಮುಂಡರಗಿಯ ಐ.ಇ.ಆರ್.ಟಿ ಶಿಕ್ಷಕ ರವಿ ದೇವರಡ್ಡಿ ವಂದಿಸಿದರು.