ಪಡಿತರ ಚೀಟಿ ವಿಳಂಬ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 15
ಸರ್ಕಾರ ಬಡವರಿಗೆ ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದರಿಂದ ದುಡಿವ ಮತ್ತು ಬಡ ಶ್ರಮಿಕ ವರ್ಗದವರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಪಡಿತರ ಚೀಟಿ ವಿತರಿಸಬೇಕೆಂದು ಆಗ್ರಹಿಸಿ ಶುಕ್ರವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಪ್ರತಿಭಟನೆ ಮಾಡಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗದಗ ವಿಧಾನಸಭಾ ಮತ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ ರೆಡ್ಡಿ, ಸರ್ಕಾರ ಬಡವರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಅವರಿಗೆ ಸರಿಯಾದ ಸಮಯದಲ್ಲಿ ಪಡಿತರ ಚೀಟಿ ನೀಡದೇ ಇರುವುದರಿಂದ ಇಂದು ಪಡಿತರ ಅಂಗಡಿಗಳಲ್ಲಿ ಅವರಿಗೆ ಆಹಾರ ಧಾನ್ಯಗಳು ಸಿಗುತ್ತಿಲ್ಲ. ಈ ಹಿಂದೆ ಹೊಂದಿದ್ದ ಪಡಿತರ ಚೀಟಿಗಳನ್ನು ಯಾವುದೇ ನಿಖರವಾದ ಕಾರಣಗಳಿಲ್ಲದೇ ರದ್ದುಪಡಿಸಿದ್ದರಿಂದ ಸಾವಿರಾರು ಸಂಖ್ಯೆಯ ಬಡವರು ತೊಂದರೆ ಅನುಭವಿಸುವಂತಾಗಿದೆ.
ರೇಷನ್ ಅಂಗಡಿಗಳಿಗೆ ಹೋದರೆ, ಅಂಗಡಿಯ ಮಾಲೀಕರು ಪಡಿತರ ಚೀಟಿಬೇಕು ಎಂದು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅರ್ಹ ಬಡವರಿಗೆ ಸೂಕ್ತವಾದ ಪಡಿತರ ಚೀಟಿ ಮತ್ತು ಸರಿಯಾದ ಸಮಯಕ್ಕೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವತ್ತ ಗಮನ ನೀಡಬೇಕು. ಇನ್ನು ಪ್ರತಿಯೊಂದು ಪಡಿತರ ಅಂಗಡಿಗಳಲ್ಲಿಯೂ ಸೀಮೆ ಎಣ್ಣೆ, ಸಕ್ಕರೆ ವಿತರಣೆಯಲ್ಲಿ ಪ್ರತಿ ಕೆಜಿಗೆ 50 ಪೈಸೆ ಹೆಚ್ಚಿಗೆ ಪಡೆಯುತ್ತಾರೆ. ಇದನ್ನು ಕೇಳಿದರೆ ಅವರಿಂದ ಸಮರ್ಪಕ ಉತ್ತರ ಸಿಗುವುದಿಲ್ಲ.
ಇನ್ನು ಗದಗ ತಾಲೂಕಿನ ಹಲವಾರು ಗ್ರಾಮಗಳಲ್ಲಿನ ಮತ್ತು ನಗರ ಪ್ರದೇಶಗಳಲ್ಲಿನ ಪಡಿತರ ಅಂಗಡಿಗಳಲ್ಲಿ ದರಪಟ್ಟಿ ಮತ್ತು ಸ್ಟಾಕ್ ಲಿಸ್ಟ್‌ಗಳನ್ನು ಹಾಕುವುದೇ ಇಲ್ಲ. ಈ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಗಮನ ಹರಿಸಬೇಕು. ತಪ್ಪಿತಸ್ಥರ ಮೇಲೆ ಕೂಡಲೇ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದರು. ನಗರದ ಗಾಂಧಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಶೋಕ ಮಂದಾಲಿ, ಉಮರ್‌ಫಾರೂಕ್ ಹುಬ್ಬಳ್ಳಿ, ಸುಧೀರ ಶಿವಪುರ, ಮಾಂತೇಶ ಬೆಳದಡಿ, ಸರ್ಫರಾಜ್ ಬಬರ್ಚಿ, ಶಿವು ನಾಯಕ, ಮಲ್ಲನಗೌಡ ಪಾಟೀಲ, ಬಸವರಾಜ ಕಡೇಮನಿ, ಮಲ್ಲನಗೌಡ ಹನುಮಂತಗೌಡ್ರ, ಅಜಯ ಪಾಟೀಲ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು, ಪದಾಧಿಕಾರಿಗಳು ಹಾಜರಿದ್ದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.