ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಾಲಮನ್ನಾ

Mainashree
Updated On : 18 Feb 2013, 10:27 am

ಕನ್ನಡಪ್ರಭ ವಾರ್ತೆ, ರೋಣ, ಫೆ. 17
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡಿ ಅಧಿಕಾರಕ್ಕೆ ತಂದರೆ ರೈತರ ಎಲ್ಲ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಭಾನುವಾರ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಗ್ರಾಮ ಸಂದರ್ಶನ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ರೈತರು ಕೃಷಿ ಚಟುವಟಿಕೆಗಳಿಗಾಗಿ ವಿವಿಧ ರೀತಿಯ ಸಾಲ ಪಡೆದುಕೊಂಡಿದ್ದು, ಅದರ ಒಟ್ಟು ಮೊತ್ತ ರು. 19 ಸಾವಿರ ಕೋಟಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣವೇ ಈ ಎಲ್ಲ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು. ಕೇವಲ ಚುನಾವಣೆಯ ಲಾಭ ಪಡೆದುಕೊಳ್ಳಲು ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿದೆ ಎಂದು ಟೀಕಿಸಿದರು. ಪಕ್ಷಕ್ಕೆ ಜನ ಆಶೀರ್ವಾದ ಮಾಡಿ ಅಧಿಕಾರಕ್ಕೆ ತಂದಲ್ಲಿ ಅಂಗವಿಕಲರಿಗೆ ತಿಂಗಳಿಗೆ ರು. 2500, ವೃದ್ಧಾಪ್ಯ ಹಾಗೂ ವಿಧವಾ ಮಾಸಾಶನವನ್ನು ರು. 1500ಕ್ಕೆ ಹೆಚ್ಚಿಸಲಾಗುವುದು. ಗರ್ಭಿಣಿಯರಿಗೆ ಪೌಷ್ಠಿಕ ಆಹಾರಕ್ಕಾಗಿ ತಿಂಗಳಿಗೆ ರು. 5 ಸಾವಿರ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಗಗನಕ್ಕೇರಿದ ಗೊಬ್ಬರ ಬೆಲೆಯನ್ನು ಇಳಿಕೆ ಮಾಡಲು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಓದಿದ ನಿರುದ್ಯೋಗಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ ರೂಪಿಸಲಾಗಿದೆ. ರೋಣ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸ್ವತ ಕೃಷಿಕನಾಗಿದ್ದು, ಅವರನ್ನು ಚುನಾಯಿಸುವ ಮೂಲಕ ಕ್ಷೇತ್ರದ ರೈತರ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದರು.
ಜೆಡಿಎಸ್ ಪಕ್ಷದ ರೋಣ ಮತಕ್ಷೇತ್ರದ ಅಭ್ಯರ್ಥಿ ಹೇಮಗಿರೀಶ ಹಾವಿನಾಳ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮ್ಯಾಚ್ ಪಿಕ್ಸಿಂಗ್ ರಾಜಕೀಯ ಮಾಡುತ್ತಿವೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಮತ್ತು ರೋಣ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ನೋವುಗಳಿಗೆ ಸ್ಪಂದಿಸಿ ಸೇವೆ ಮಾಡಲು ಜನತೆ ನನಗೆ ಆಶೀರ್ವಾದ ಮಾಡಬೇಕಿದೆ ಎಂದರು.
ಡಾ. ಮಂಜುನಾಥ ವಿಶ್ವಬ್ರಾಹ್ಮಣ, ಎಚ್.ಎಸ್. ಸೋಂಪುರ, ಶರಣಪ್ಪ ರೇವಡಿ, ಜಿಲ್ಲಾಧ್ಯಕ್ಷ ವಿ.ವಿ. ಕಪ್ಪತ್ತನವರ, ತಾಲೂಕಾಧ್ಯಕ್ಷ ರಾಮಣ್ಣ ಸಂಕ್ರೋಜಿ, ರವಿ ದಂಡಿನ, ಮೈಲಾರಪ್ಪ ದೇಶಣ್ಣವರ, ದೇವಪ್ಪ ಕಂಬಳಿ, ಅಂದಪ್ಪ ಅಕ್ಕಿ, ಎನ್.ಜಿ. ವಡ್ಡಟ್ಟಿ, ಉಮೇಶ ಹಿರೇಗೌಡ್ರ, ಕೆ.ಎಸ್. ಕೊಡತಗೇರಿ, ಮಕ್ತುಂ ಸಾಗರ, ಶರಣಪ್ಪ ಪೂಜಾರ, ಸಂಗಣ್ಣ ಹಳ್ಳಿ, ಬಸವರಾಜ ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು. ಉಮೇಶ ಮಲ್ಲಾಪುರ ನಿರೂಪಿಸಿ, ಸ್ವಾಗತಿಸಿದರು. ನಿಂಗಪ್ಪ ನವಲಗುಂದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement