ಅನುದಾನಕ್ಕೆ ಕೊರತೆ ಇಲ್ಲ ಆದರೆ ಅಭಿವೃದ್ಧಿ ಮಾತ್ರ ಆಗಲಿಲ್ಲ
ಬಡವರಿಗಿಲ್ಲ ಮೂಲ ಸೌಕರ್ಯ
ಅವಳಿ ನಗರದ ಒಂದನೇ ವಾರ್ಡ್ ಎಸ್.ಎಂ. ಕೃಷ್ಣ ಆಶ್ರಯ ಬಡಾವಣೆಗಳಂತಹ ಬಡವರೇ ಹೆಚ್ಚಾಗಿ ವಾಸಿಸುವ ಮನೆಗಳನ್ನು ಒಳಗೊಂಡಿದ್ದು, ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕಾಗಿ ಅಲ್ಲಿನ ಸಾರ್ವಜನಿಕರು ಕಾಯುತ್ತಿದ್ದಾರೆ. ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗಾಗಿ ಮತ್ತು ಕುಡಿಯುವ ನೀರಿಗಾಗಿ ವಾರ್ಡ್ ಸದಸ್ಯರೇ ಹೋರಾಟ ಮಾಡಿದ ಘಟನೆಯೂ ಜರುಗಿದೆ. ಈಚೆಗೆ ಕೊನೆಗೊಂಡ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಕುಂತಲಾ ಅಕ್ಕಿ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಕಾಂಗ್ರೆಸ್ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಬಿಜೆಪಿ, ಜಾತ್ಯತೀತ ಜನತಾದಳ ಹಾಗೂ ಬಿಎಸ್ಆರ್ ಪಕ್ಷಗಳು ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದು, ಈ ವಾರ್ಡ್ನಲ್ಲಿ 1925 ಪುರುಷರು, 2013 ಮಹಿಳೆಯರು ಸೇರಿದಂತೆ 3938 ಮತದಾರರಿದ್ದಾರೆ. ಇಲ್ಲಿ ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು ಅದೇ ಮತಗಳು ಫಲಿತಾಂಶ ನಿರ್ಧರಿಸಲಿವೆ. ಇಲ್ಲಿಯ ಆಶ್ರಯ ಬಡಾವಣಿಯಲ್ಲಿ ನೂರೊಂದು ಸಮಸ್ಯೆಗಳಿದ್ದು, ವಿಶೇಷವಾಗಿ ಕೂಲಿ ಕಾರ್ಮಿಕರೇ ವಾಸಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ವಾರ್ಡ್ನ ಸಮಸ್ಯೆಗಳೇಮತದಾರರಿಗೆ ಅಸ್ತ್ರಗಳಾಗಿವೆ.
ಜನರ ಗೋಳು ಕೇಳೋರ್ಯಾರು ?
ಈ ವಾರ್ಡ್ ಬೆಟಗೇರಿಯ ಮಾನ್ವಿ ಚಾಳ್, ಕುಷ್ಟಗಿ ಚಾಳ್ ಹಾಗೂ ಗಾಂಧಿ ನಗರ (ಸೆಟ್ಲಮೆಂಟ್ ಭಟ್ಕೋ ಚಾಳ್, ಮಿಶನ್ ಕಾಂಪೌಂಡ್) ಪ್ರದೇಶಗಳನ್ನು ಒಳಗೊಂಡಿದೆ. ಹಿಂದುಳಿದ ವರ್ಗದ ಜನರೇ ಹೆಚ್ಚಾಗಿ ವಾಸವಾಗಿರುವ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯದೇ ಹಲವಾರು ಸಮಸ್ಯೆಗಳಿವೆ. ಅದರಲ್ಲಿಯೂ ಸೆಟ್ಲಮೆಂಟ್ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ವಾರ್ಡ್ ಅಭಿವೃದ್ಧಿಗೆ ಆದ್ಯತೆ ನೀಡುವ ಜನಪ್ರತಿನಿಧಿಯ ಅವಶ್ಯಕತೆ ಇದೆ. ಕಳೆದ ಚುನಾವಣೆಯಲ್ಲಿ ಲಕ್ಷ್ಮಿದೇವಿ ಕಟ್ಟಿಮನಿ ಆಯ್ಕೆಯಾಗಿದ್ದರು. ಈಗ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ನಿಂದ ವೀಣಾ ಕಟ್ನಳ್ಳಿ ಸೇರಿದಂತೆ 3 ಜನರ ಹೆಸರು ಕೇಳಿ ಬರುತ್ತಿದೆ. ಈ ವಾರ್ಡ್ನಲ್ಲಿ ಒಟ್ಟು 3411 ಮತದಾರರಿದ್ದು, ಅವರಲ್ಲಿ 1619 ಪುರುಷರು, 1721 ಮಹಿಳಾ ಮತದಾರರಿದ್ದು, ಇಲ್ಲಿಯೂ ಹಿಂದುಳಿದ ವರ್ಗಗಳ ಮತಗಳೇ ಫಲಿತಾಂಶ ನಿರ್ಧರಿಸಲಿವೆ. ಹಲವಾರು ಅಭಿವೃದ್ಧಿ ಕೆಲಸಗಳಿಗಾಗಿ ಜನತೆ ಕಾಯುತ್ತಿದ್ದಾರೆ. ಬೆಟಗೇರಿ ಸಂಪರ್ಕ ಕಲ್ಪಿಸುವ ಇಲ್ಲಿ ಕೆಲ ರಸ್ತೆಗಳು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾರ್ಪಡಿಸಿರುವುದು ಸ್ವಲ್ಪ ಸಮಾಧಾನ ತಂದಿದೆ.
ಇಲ್ಲಿ ನೀರಿಗೂ ಪರದಾಟ
ಈ ವಾರ್ಡ್ ಬೆಟಗೇರಿಯ ಕುಂಬಾರ ಓಣಿ, ಹೊಸಪೇಟೆ ಚೆಕ್ ಪ್ರದೇಶ ಸೇರಿದಂತೆ ಬೆಟಗೇರಿ ಹೃದಯ ಭಾಗದಲ್ಲಿದ್ದು, ಬಹುತೇಕ ದುಡಿವ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿದ್ದಾರೆ. ಕಳೆದ ಅವಧಿಯಲ್ಲಿ ಕುಡಿಯುವ ನೀರಿಗಾಗಿ ಇಲ್ಲಿನ ಜನತೆ ಹೆಚ್ಚಿನ ತೊಂದರೆಯನ್ನು ಅನುಭವಿಸಿದ್ದಾರೆ. ಇದಕ್ಕಾಗಿ ಸ್ವತಃ ಸದಸ್ಯೆಯಾಗಿದ್ದ ವಾಣಿಶ್ರೀ ಮಾದಗುಂಡಿ ಅಧ್ಯಕ್ಷರ ಸಮ್ಮುಖದಲ್ಲಿಯೇ ಹೋರಾಟ ಮಾಡಿದ ಘಟನೆಯೂ ನಡೆದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ವಾಣಿಶ್ರೀ ಮಾದಗುಂಡಿ ಆಯ್ಕೆಯಾಗಿದ್ದು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ಗೆ 4 ಅರ್ಜಿಗಳು ಬಂದಿದ್ದು, ಇನ್ನು ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಜಾತ್ಯತೀತ ಜನತಾ ದಳದಿಂದ ಫಕ್ಕೀರವ್ವ ಭಜಂತ್ರಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. 3720 ಮತದಾರರಿದ್ದು. ಅವರಲ್ಲಿ 1820 ಪುರುಷರು ಹಾಗೂ 1900 ಮಹಿಳಾ ಮತದಾರರಿದ್ದು, ಇಲ್ಲಿ ಲಿಂಗಾಯತ ಮತಗಳು ಹೆಚ್ಚು ಪ್ರಮುಖವಾಗಿವೆ. ವಾರ್ಡಿನಲ್ಲಿನ ಬಹುತೇಕ ದುಡಿಯವ ವರ್ಗ ಹಾಗೂ ಮಧ್ಯಮ ವರ್ಗದವರು, ಬಹುಸಂಖ್ಯಾತರು ಕುಡಿವ ನೀರಿಗಾಗಿ ಪರಿತಪಿಸಿದ್ದಾರೆ. ಈ ಆಕ್ರೋಶ ಚುನಾವಣೆಯಲ್ಲಿ ಹೊರಬೀಳುವ ಸಾಧ್ಯತೆ ಇದೆ.
ಅಭಿವೃದ್ಧಿ: ಕೊಂಚ ನೆಮ್ಮದಿ
ಈ ವಾರ್ಡ್ ಮಂಜುನಾಥ ನಗರ ಹಾಗೂ ನರಸಾಪುರ ನೇಕಾರ ಕಾಲೋನಿ ಒಳಗೊಂಡಿದ್ದು, ಈ ಕ್ಷೇತ್ರದಿಂದ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಶಿವಣ್ಣ ಮುಳಗುಂದ ಆಯ್ಕೆಯಾಗಿ ಎರಡುವರೆ ವರ್ಷಗಳ ಕಾಲ ವಿರೋಧ ಪಕ್ಷದ ನಾಯಕನಾಗಿ, ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿ 5 ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿದು, ಎರಡುವರೆ ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಅವರು ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುವುದರಿಂದ ಅವರ ಪುತ್ರ ಮಂಜುನಾಥ ಮುಳಗುಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಶ್ರೀನಿವಾಸ ಹುಬ್ಬಳ್ಳಿ ಹಾಗೂ ಇತರರ ಹೆಸರು ಕೇಳಿಬರುತ್ತಿದೆ. ಬಿಎಸ್ಆರ್ ದಿಂದ ಮಂಜುನಾಥ ಹೇಮಣ್ಣ ಮುಳಗುಂದ ಸ್ಪರ್ಧೆಗೆ ಇಳಿಯಲಿದ್ದಾರೆ. ಜೆಡಿಎಸ್ನಿಂದ ಹುಲ್ಲೇಶ ಭಜಂತ್ರಿ ಹೆಸರು ಕೇಳಿ ಬರುತ್ತಿದೆ. ಬಹುತೇಕ ನೇಕಾರಿಕೆಯನ್ನೇ ನಂಬಿರುವ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು. ಅಭಿವೃದ್ಧಿ ವಿಷಯದಲ್ಲಿ ಕೊಂಚ ನೆಮ್ಮದಿಯನ್ನು ಮೂಡಿಸಿರುವ ಕ್ಷೇತ್ರ. ಈ ವಾರ್ಡ್ನಲ್ಲಿ ಒಟ್ಟು 4007 ಮತದಾರರಿದ್ದು, ಅವರಲ್ಲಿ 2007 ಪುರುಷರು, 2 ಸಾವಿರ ಮಹಿಳೆಯರಿದ್ದು ನೇಕಾರರು ಹಾಗೂ ಹಿಂದುಳಿದ ವರ್ಗಗಳ ಮತಗಳೇ ಇಲ್ಲಿ ಅಂತಿಮ ಫಲಿತಾಂಶಕ್ಕೆ ನಾಂದಿಯಾಗಲಿವೆ.
ಚರಂಡಿ ಅವ್ಯವಸ್ಥೆ, ನೀರಿಗೆ ಬರ
ಈ ವಾರ್ಡ್ ಬೆಟಗೇರಿಯ ಹೊರವಲಯದಲ್ಲಿರುವ ಗಣೇಶ ನಗರವನ್ನು ಒಳಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಮಕೃಷ್ಣ ಪಾಂಡ್ರೆ ಗೆಲವು ಸಾಧಿಸಿದ್ದರು. ಈ ವಾರ್ಡ್ನಲ್ಲಿಯೂ ನೇಕಾರಿಕೆ ಹಾಗೂ ಮಧ್ಯಮ ವರ್ಗದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದು. ಚರಂಡಿ ಅವ್ಯವಸ್ಥೆಯಿಂದ ಮತ್ತು ಕುಡಿಯುವ ನೀರಿಗಾಗಿ ಜನತೆ ಪರಿತಪಿಸುತ್ತಿದ್ದಾರೆ. ಇದಕ್ಕಾಗಿ ಹಲವಾರು ಬಾರಿ ಹೋರಾಟ ಮಾಡಿದ್ದಾರೆ. ಆದರೂ ನಗರಾಡಳಿತದಿಂದ ಇವರಿಗೆ ಸ್ಪಂದನೆ ಸಿಕ್ಕಿಲ್ಲ. ಕಳೆದ ಬಾರಿ ಕಾಂಗ್ರೆಸ್ನಿಂದ ಅಶೋಕ ಬಣ್ಣದ ಸ್ಪರ್ಧಿಸಿ ಸೋಲುಂಡಿದ್ದರು. ಈ ಬಾರಿಯೂ ಅವರ ಹೆಸರು ಕೇಳಿ ಬರುತ್ತಿದೆ. ಬಿಜೆಪಿಯಿಂದ ಅರವಿಂದ ಹುಲ್ಲೂರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನದ ವಿಷಯದಲ್ಲಿ ವಾರ್ಡ್ನಲ್ಲಿಯೂ ಸಾಕಷ್ಟು ಅಸಮಾಧಾನವಿದೆ. ಒಟ್ಟು 3792 ಮತದಾರರಿದ್ದು, ಅವರಲ್ಲಿ 1902 ಪುರುಷರು ಹಾಗೂ 1890 ಮಹಿಳಾ ಮತದಾರರಿದ್ದಾರೆ. ಇಲ್ಲಿಯೂ ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಲಿವೆ. ಚುನಾವಣೆ ಇಲ್ಲಿಯ ಮತದಾರರಿಗೆ ಸೂಕ್ತ ಅವಕಾಶ ಕಲ್ಪಿಸಿದ್ದು, ತೀರ್ಪಿಗಾಗಿ ಕಾಯಬೇಕಾಗಿದೆ.
ವಾರ್ಡ್ನಲ್ಲಿ ಅಭಿವೃದ್ಧಿ ಮರೀಚಿಕೆ
ಬಹುತೇಕ ಹಿಂದುಳಿದ ವರ್ಗದ ಜನರನ್ನೇ ಹೊಂದಿರುವ ವಾರ್ಡ್ ಇದಾಗಿದ್ದು, ಕಳೆದ ಚುನಾವಣೆಯಲ್ಲಿ ಶಾಂತಾ ಹೊನ್ನಳ್ಳಿ ಬಿಜೆಪಿಯಿಂದ ಆಯ್ಕೆಯಾಗಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ನ ಶಿವಣ್ಣ ಮುಳಗುಂದ ಅವರಿಗೆ ಅಧ್ಯಕ್ಷರಾಗುವ ಭಾಗ್ಯ ಕಲ್ಪಿಸಿಕೊಟ್ಟು, ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆಯೂ ನಡೆದಿತ್ತು. ಈ ಬಾರಿ ಮತ್ತೆ ಬಿಜೆಪಿಯಿಂದ ಸ್ಪರ್ಧೆಗಿಳಿಯುವ ಆಸಕ್ತಿ ಹೊಂದಿದ್ದು, ಬಿಜೆಪಿ ಟಿಕೆಟ್ ನೀಡುತ್ತದೋ ಎಂಬುವುದನ್ನು ಕಾದು ನೋಡಬೇಕು. ಜಾತ್ಯತೀತ ಜನತಾದಳದಿಂದ ಹಸೀನ್ ಬೇಗಂ ನಾಯ್ಕರ್ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಕಾಂಗ್ರೆಸ್ನಿಂದ ರೇಣುಕಾ ಪೂಜಾರ ಸೇರಿದಂತೆ ಇನ್ನಿಬ್ಬರ ಹೆಸರುಗಳು ಕೇಳಿ ಬ0ರುತ್ತಿವೆ. ಈ ವಾರ್ಡ್ನಲ್ಲಿ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಲಿದ್ದು, ಅಭಿವೃದ್ಧಿ ಕೆಲಸಗಳು ಮಾತ್ರ ಇಲ್ಲಿಯೂ ಶೂನ್ಯ ಎನ್ನುವುದು ವಾರ್ಡ್ನ ಮತದಾರರ ಗೋಳಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಒಟ್ಟು 3775 ಮತದಾರರಿದ್ದು, ಅವರಲ್ಲಿ 1805 ಪುರುಷ ಮತದಾರರು ಹಾಗೂ 1970 ಮಹಿಳಾ ಮತದಾರರಿದ್ದು, ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿವೆ.
ಇಲ್ಲಿ ಹಿಂದುಳಿದವರೇ ಹೆಚ್ಚು
ಬೆಟಗೇರಿಯ ಪಿ.ಬಿ. ರಸ್ತೆಯ ಬಲ ಭಾಗದ ಪ್ರದೇಶವನ್ನು ಒಳಗೊಂಡಿರುವ ಈ ವಾರ್ಡ್ನಲ್ಲಿ ಕ್ರಿಶ್ಚಿಯನ್ ಸೇರಿದಂತೆ ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಾಗಿವೆ. ಕುಡಿಯುವ ನೀರು ಹಾಗೂ ಚರಂಡಿ ನಿರ್ಮಾಣದ ವಿಷಯದಲ್ಲಿ ಈ ಹಿಂದೆ ಸಾಕಷ್ಟು ಗೊಂದಲ ಉಂಟಾಗಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ದಶರಥ ಕೊಳ್ಳಿ, ನಗರಸಭೆಯಲ್ಲಿ ಅಧ್ಯಕ್ಷರ ಆಯ್ಕೆ ವೇಳೆ ಕಾಂಗ್ರೆಸ್ ಬೆಂಬಲಿಸಿ ಸಮಸ್ಯೆ ಸೃಷ್ಟಿ ಮಾಡಿಕೊಂಡಿದ್ದರು. ಈ ಬಾರಿಯೂ ಬಿಜೆಪಿಯಿಂದಲೇ ಸ್ಪರ್ಧೆಗಿಳಿಯುವ ಸಾಧ್ಯತೆ ಹೆಚ್ಚಾಗಿದ್ದು, ಕಳೆದ ಬಾರಿ ಕಾಂಗ್ರೆಸ್ನಿಂದ ಬಲರಾಮ ಬಸವಾ ಸ್ಪರ್ಧಿಸಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರೊಟ್ಟಿಗೆ ಬಿ.ಎಸ್.ಆರ್. ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳ ಅಭ್ಯರ್ಥಿಗಳಲ್ಲಿ ಹೆಚ್ಚೆಚ್ಚು ಆಕಾಂಕ್ಷಿಗಳಿದ್ದು ಪಕ್ಷವು ಯಾವುದೇ ಹೆಸರು ಬಹಿರಂಗ ಪಡಿಸುತ್ತಿಲ್ಲ. ಈ ವಾರ್ಡ್ನಲ್ಲಿ ಒಟ್ಟು 3389 ಮತದಾರರಿದ್ದು, ಅವರಲ್ಲಿ 1670 ಪುರುಷರು ಹಾಗೂ 1719 ಮಹಿಳೆಯರಿದ್ದು, ಈ ವಾರ್ಡ್ನಲ್ಲಿಯೂ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿವೆ. ಅವರೆಲ್ಲಾ ಯಾರಿಗೆ ಆಶೀರ್ವದಿಸುತ್ತಾರೆ ಕಾದು ನೋಡಬೇಕಾಗಿದೆ.
ಅಭಿವೃದ್ಧಿಗೆ ಆದ್ಯತೆ ಇಲ್ಲ
ಬೆಟಗೇರಿಯ ಹೆಲ್ತ್ ಕ್ಯಾಂಪ್ ಹಾಗೂ ಪೊಲೀಸ್ ಕ್ವಾಟರ್ಸ್ ನೀಲಕಂಠೇಶ್ವರ ಮಠದ ಹಿಂದಿನ ಭಾಗವನ್ನು ಒಳಗೊಂಡಿದ್ದು, ಇಲ್ಲಿಯೂ ರಸ್ತೆ ಸೇರಿದಂತೆ ಇನ್ನುಳಿದ ಸಮಸ್ಯೆಗಳಿಗೆ ಸ್ವಲ್ಪ ಪ್ರಮಾಣದ ಸ್ಪಂದನೆ ದೊರೆತಿದೆ. ಕುಡಿಯುವ ನೀರು ಸೌಲಭ್ಯ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿ, ನಗರಸಭೆಯಲ್ಲಿ ಪ್ರಥಮ ಬಿಜೆಪಿ ಅಧ್ಯಕ್ಷೆಯಾಗಿ ವಿಜಯಲಕ್ಷ್ಮಿ ಅಂಗಡಿ ಅಧಿಕಾರ ನಡೆಸಿದ್ದರು. ಈ ಬಾರಿಯೂ ಅವರು ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ನಿಂದ ಹದ್ದಣ್ಣವರ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದು. ಬಿಎಸ್ಆರ್ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಈ ವಾರ್ಡ್ನಲ್ಲಿ ಒಟ್ಟು 3944 ಮತದಾರರಿದ್ದು ಅವರಲ್ಲಿ 1979 ಪುರುಷರು ಹಾಗೂ 1965 ಮಹಿಳೆಯರಿದ್ದು, ಇಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿದ್ದು, ಹಿಂದುಳಿದ ವರ್ಗದವರನ್ನು ಕಡೆಗಣಿಸಿದಲ್ಲಿ ಫಲಿತಾಂಶದಲ್ಲಿ ಏರುಪೇರಾಗಲಿದೆ. ಮುಖ್ಯಮಂತ್ರಿಗಳು ಸಣ್ಣ ಮತ್ತು ಮಧ್ಯ ಪಟ್ಟಣಗಳ ಅಭಿವೃದ್ಧಿಗಾಗಿ ನೀಡಿದ ಅನುದಾನದಲ್ಲಿ ಸ್ವಲ್ಪ ಕಾಮಗಾರಿಗಳಾಗಿರುವುದು ಸಮಾಧಾನ ತಂದಿದೆ.
ಅಭಿವೃದ್ಧಿ ಕಾರ್ಯಕ್ಕೆ ಕಾದಿದೆ
ಈ ವಾರ್ಡ್ ಕುರಹಟ್ಟಿ ಪೇಟೆಯ ಹೊಸ ನೀರು ಭಾವಿ, ರೇಲ್ವೆ ಕ್ವಾಟರ್ಸ್ ಬೋರಾಗಾರ ಓಣಿ ಮಲ್ಲಿಕಾರ್ಜುನ ಗುಡಿ ಭಾಗಗಳನ್ನು ಒಳಗೊಂಡಿದೆ. ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರಾಡಳಿತಕ್ಕೆ ಸಾಧ್ಯವಾಗಿಲ್ಲ. ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ವಾರ್ಡ್ ಕಾಯುತ್ತಿದೆ. ಕುಡಿಯುವ ನೀರು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಗಾಗಿ ಹೋರಾಟಗಳೂ ನಡೆದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ನಾಗರಾಜ ಗಣಾಚಾರಿ ಆಯ್ಕೆಯಾಗಿದ್ದರು. ಕಾಂಗ್ರೆಸ್ನಿಂದ ರಫೀಕ್ ಶಿರಹಟ್ಟಿ ಸ್ಪರ್ಧಿಸಿದ್ದು, ಇಬ್ಬರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜಾತ್ಯತೀತ ಜನತಾದಳ, ಬಿ.ಎಸ್.ಆರ್. ಕಾಂಗ್ರೆಸ್ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, 5ಕ್ಕೂ ಹೆಚ್ಚು ಜನರು ಪಕ್ಷದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ವಾರ್ಡ್ನಲ್ಲಿ 1946 ಮತದಾರರಿದ್ದು, ಅವರಲ್ಲಿ 996 ಪುರುಷ ಮತದಾರರು ಹಾಗೂ 950 ಮಹಿಳೆಯರಿದ್ದು, ಈ ವಾರ್ಡ್ನಲ್ಲಿ ಲಿಂಗಾಯತ ಹಾಗೂ ಮೇಲ್ವರ್ಗದ ಮತಗಳು ಫಲಿತಾಂಶ ನಿರ್ಧರಿಸಲಿವೆ. ಅವುಗಳನ್ನು ಪಡೆಯಲು ಅಭ್ಯರ್ಥಿಗಳು ಚುನಾವಣೆ ಘೋಷಣೆಯಾಗುತ್ತಲೇ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅವರೆಲ್ಲ ಫೆ. 7ರ ವರೆಗೆ ಶ್ರಮ ಪಡಬೇಕಾಗಿದೆ.
ಲಿಂಗಾಯತ ಮತಗಳೇ ನಿರ್ಣಾಯಕ
ವಿವೇಕಾನಂದ ನಗರ, ಕರಿಯಮ್ಮನ ಕಲ್ಲು, ಇರಾಣೆ ಕಾಲೋನಿ, ಹಮಾಲರ ಕಾಲೋನಿ, ಮಸಾರಿ ಬಡಾವಣೆಗಳನ್ನು ಒಳಗೊಂಡಿದೆ. ಬಹುತೇಕ ಹೆಚ್ಚು ಸುಶೀಕ್ಷಿತರು ಹಾಗೂ ಪ್ರಜ್ಞಾವಂತರೇ ವಾಸಿಸುವ ಬಡಾವಣೆಯಾಗಿದ್ದು, ಈ ವಾರ್ಡ್ನಲ್ಲಿ ಕಳೆದ ಬಾರಿ ಕಾಂಗ್ರೆಸ್ನ ಸಿ.ಕೆ. ಮಾಳೆಶೆಟ್ಟಿ ಆಯ್ಕೆಯಾಗಿದ್ದು, ಈ ಬಾರಿಯೂ ಟಿಕೆಟ್ ಆಂಕಾಕ್ಷಿಯಾಗಿದ್ದಾರೆ. ಇವರೊಟ್ಟಿಗೆ ಯುವ ಕಾಂಗ್ರೆಸ್ ಘಟಕದ ರವಿಕುಮಾರ ರೆಡ್ಡಿ ಹಾಗೂ ಅನೀಲ ಸಿಂಗ್ಟಾಲಕೇರಿ ಅರ್ಜಿ ಸಲ್ಲಿಸಿದ್ದು. ಜೆಡಿಎಸ್ನಿಂದ ಅಬ್ದುಲ್ ಕಲಬುರ್ಗಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಬಿಜೆಪಿಯಿಂದ ಪುಷ್ಪಾ ಪತ್ತಾರ ಸೇರಿದಂತೆ 6ಕ್ಕೂ ಹೆಚ್ಚು ಜನರ ಹೆಸರುಗಳು ಕೇಳಿ ಬರುತ್ತಿವೆ. ಇಲ್ಲಿನ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ ಈ ಬಡಾವಣೆಯಲ್ಲಿ ಸೂಕ್ತ ಉದ್ಯಾನವನ ಸ್ಥಾಪಿಸಬೇಕು ಎನ್ನುವ ಹೋರಾಟ ಆಗಾಗ್ಗೆ ನಡೆಯುತ್ತಲೇ ಇದೆ. ವಾರ್ಡ್ನಲ್ಲಿ ಒಟ್ಟು 3011 ಮತದಾರರಿದ್ದು ಅವರಲ್ಲಿ 1560 ಪುರುಷರು, 1451 ಮಹಿಳಾ ಮತದಾರರಿದ್ದು, ಬ್ರಾಹ್ಮಣ ಹಾಗೂ ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ ಇದರೊಟ್ಟಿಗೆ ಇರಾನಿ ಕಾಲೋನಿಯಲ್ಲಿನ ಮುಸ್ಲಿಂ ಮತಗಳೂ ಅಷ್ಟೇ ನಿರ್ಣಾಯಕವಾಗಿವೆ.
ಅಭಿವೃದ್ಧಿಗೆ ಗಾಯದ ಬರೆ
ಜಗದ್ಗುರು ತೋಂಟದಾರ್ಯ ಕಾಲೇಜು ಮುಂಭಾಗ, ವಿವೇಕಾನಂದ ಕೊಳಚೆ ಪ್ರದೇಶ, ರಾಜೀವಗಾಂಧಿ ನಗರದ ಕೆಲ ಭಾಗಗಳು ಈ ವಾರ್ಡ್ನ ವ್ಯಾಪ್ತಿಗೆ ಬರುತ್ತವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಕಾಶ ಮುಧೋಳ ಆಯ್ಕೆಯಾಗಿದ್ದು, ಅವರು ಅಪಘಾತದಲ್ಲಿ ತೀವ್ರ ಗಾಯಗೊಂಡು ತಮ್ಮ ಅಧಿಕಾರಾವಧಿಯನ್ನು ಮನೆಯಲ್ಲಿಯೇ ಮುಗಿಸಿದ್ದಾರೆ. ಈ ಬಾರಿ ಬಿಜೆಪಿಯಿಂದ ಬೇರೊಬ್ಬರು ಸ್ಪರ್ಧಿಸುವ ಸಾಧ್ಯತೆ ನಿಚ್ಚಳ. 5ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರೂ ಪಕ್ಷ ಯಾರ ಹೆಸರನ್ನೂ ಬಹಿರಂಗ ಪಡಿಸುತ್ತಿಲ್ಲ. ಇನ್ನು ಕಾಂಗ್ರೆಸ್ನಿಂದ ಶ್ರೀನಿವಾಸ ಹುಯಿಲಗೋಳ ಹಾಗೂ ಸುಧೀರ ಶಿವಪುರ ಆಕಾಂಕ್ಷಿಗಳಾಗಿದ್ದು, ಜೆಡಿಎಸ್ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಈ ವಾರ್ಡ್ನಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳು ತೀವ್ರವಾಗಿದ್ದು, ಈ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ವಾರ್ಡ್ನಲ್ಲಿ ಒಟ್ಟು 831 ಮತದಾರರಿದ್ದು ಅವರಲ್ಲಿ 437 ಪುರುಷರು ಹಾಗೂ 394 ಮಹಿಳಾ ಮತದಾರರಿದ್ದು, ಇಲ್ಲಿಯೂ ಲಿಂಗಾಯತ ಮತಗಳ ಫಲಿತಾಂಶ ನಿರ್ಧರಿಸಲಿವೆ.
ಮೂಲ ಸೌಲಭ್ಯ ವಂಚಿತ
ಈ ವಾರ್ಡ್ ರೇಲ್ವೆ ಕ್ವಾಟರ್ಸ್ನ ಕೆಲ ಭಾಗ ಹಾಗೂ ಕೆ.ಸಿ. ರಾಣಿ ರಸ್ತೆಯ ಎಡ ಭಾಗವನ್ನು ಒಳಗೊಂಡಿದೆ. ಕಳೆದ ಬಾರಿ ಕಾಂಗ್ರೆಸ್ನ ಮಂಜುನಾಥ ಪೂಜಾರಿ ಆಯ್ಕೆಯಾಗಿದ್ದು, ಹಾಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಕೃಷ್ಣ ಹೊಂಬಾಳಿ ಬಿಜೆಪಿಯಿಂದ ಸ್ಪರ್ಧಿಸಿ ಈ ಹಿಂದೆ ಪರಾಭವಗೊಂಡಿದ್ದರು. ಇಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಮಾಜಿ ಸಚಿವ ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷ ದಿಂದ ಮುತ್ತು ಮುಶಿಗೇರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಹಾಗೂ ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ವಾರ್ಡ್ನ ಜನತೆಯನ್ನು ಕಾಡುತ್ತಿದ್ದು, ವಾರ್ಡ್ನ ಮತದಾರರ ನಿರೀಕ್ಷೆಯಂತೆ ಅಭಿವೃದ್ಧಿ ಕಾರ್ಯಗಳು ಆಗಲಿಲ್ಲ. ಹೀಗಾಗಿ ಆ ಸಮಸ್ಯೆಗಳೆಲ್ಲವೂ ಈ ಬಾರಿಯ ಚುನಾವಣೆಯಲ್ಲಿ ಪ್ರಭಾವ ಬೀರಲಿವೆ. ಈ ವಾರ್ಡ್ನಲ್ಲಿ ಒಟ್ಟು 1505 ಮತದಾರರಿದ್ದು, ಅವರಲ್ಲಿ 716 ಪುರುಷ ಮತದಾರರು ಹಾಗೂ 789 ಮಹಿಳಾ ಮತದಾರರಿದ್ದು, ಮಹಿಳೆಯರೇ ಇಲ್ಲಿ ನಿರ್ಣಾಯಕವಾಗಿದ್ದು, ಲಿಂಗಾಯತ ಹಾಗೂ ಹಿಂದುಳಿದ ವರ್ಗಗಳ ಮತಗಳು ಚುನಾವಣಾ ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿವೆ.
ಕಾಂಗ್ರೆಸ್ ಬೆಂಬಲಿಸಿದ್ದ ಹೊನ್ನಳ್ಳಿ
ಗದಗ ಬೆಟಗೇರಿ ಅವಳಿನಗರದಲ್ಲೇ ಈ ವಾರ್ಡ್ ಅತ್ಯಂತ ಚಿಕ್ಕದಾಗಿದ್ದು, ಮುಳಗುಂದ ಓಣಿ, ಟೆಂಗಿನಕಾಯಿ ಬಜಾರ, ಪೆಂಡಾರ ಓಣಿ, ಹಬೀಬ ಗಲ್ಲಿಗಳು ಸೇರಿದಂತೆ ಬೆಟಗೇರಿ ಮುಖ್ಯ ಮಾರುಕಟ್ಟೆಯ ಭಾಗಗಳನ್ನು ಈ ವಾರ್ಡ್ ಒಳಗೊಂಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಮನೋಹರ ಹೊನ್ನಳ್ಳಿ ಆಯ್ಕೆಯಾಗಿದ್ದರು. ಇವರು ಅಧ್ಯಕ್ಷರ 2ನೇ ಅವಧಿಯ ಆಯ್ಕೆಯ ವೇಳೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ತೊಂದರೆಗೀಡಾಗಿದ್ದು, ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜಾತ್ಯತೀತ ಜನತಾದಳ ಹಾಗೂ ಬಿಜೆಪಿ ಮತ್ತು ಬಿ.ಎಸ್.ಆರ್. ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಕರ್ನಾಟಕ ಜನತಾ ಪಕ್ಷಗಳು ಇಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಯಾರ ಹೆಸರನ್ನೂ ಬಹಿರಂಗಗೊಳಿಸುತ್ತಿಲ್ಲ. ಇಲ್ಲಿಯೂ ಹಿಂದುಳಿದ ವರ್ಗಗಳ ಮತಗಳೇ ನಿರ್ಣಾಯಕವಾಗಿದ್ದರೂ, ಲಿಂಗಾಯತ ಮತಗಳು ಅಭ್ಯರ್ಥಿಗಳ ಗೆಲವು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ವಾರ್ಡ್ನಲ್ಲಿ ಒಟ್ಟು 1383 ಮತಗಳಿದ್ದು ಅವರಲ್ಲಿ 683 ಪುರುಷರು ಹಾಗೂ 700 ಮಹಿಳಾ ಮತದಾರರಿದ್ದಾರೆ.