ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತದಾರ ಪ್ರಭುವಿನತ್ತ ನಗರಸಭೆ ಸದಸ್ಯರ ಚಿತ್ತ

Mainashree
Updated On : 20 Feb 2013, 11:09 am

ಗದಗ-ಬೆಟಗೇರಿ ನಗರಸಭೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಅವಳಿ ನಗರದ ಚಿತ್ರವಣವನ್ನೇ ಬದಲಾವಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಬಿಜೆಪಿಯು ಭರವಸೆ ಈಡೇರಿಸುವುದು ಒತ್ತಟ್ಟಿಗಿರಲಿ, ಜನತೆ ಅವರಿಗೆ 5 ವರ್ಷ ಆಡಳಿತ ನಡೆಸಲು ನೀಡಿದ ಅವಕಾಶವನ್ನು ಬಳಸಿಕೊಳ್ಳದೇ ವಿರೋಧ ಪಕ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿ, ರಾಜ್ಯದಲ್ಲಿಯೇ ಅತ್ಯಂತ ಅವಮಾನಕರ ಸ್ಥಿತಿಯನ್ನು ಎದುರಿಸಿತು.  ನಗರ ಸ್ಥಳೀಯ ಸಂಸ್ಥ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ 'ಕನ್ನಡಪ್ರಭ'  ಆರಂಭಿಸಿರುವ
 ಮತದಾರರ ಜಾಗೃತಿ ಎರಡನೇ ದಿನವಾದ ಇಂದು ಗದಗ ನಗರಸಭೆಯ ವಿವಿಧ ವಾರ್ಡ್‌ಗಳ ಸ್ಥಿತಿಗತಿ ಕುರಿತು ಶಿವಕುಮಾರ ಕುಷ್ಟಗಿ ಮಾಹಿತಿ ನೀಡಿದ್ದಾರೆ.
ನಗರದ ವಿವಿಧೆಡೆ ನೀರಿಗೆ ಹಾಹಾಕಾರ, ಚರಂಡಿ ಸ್ವಚ್ಛತೆ
ಕೊರತೆಯಿಂದ ಜನ ಬೇಸತ್ತಿದ್ದಾರೆ.

ಸ್ಲಂ ನಿವಾಸಿಗಳಿಗೆ ದುರ್ನಾತವೇ ಗತಿ
ಈ ವಾರ್ಡ್ ನಗರದ ಹೃದಯ ಭಾಗವಾದ ವಕೀಲ ಚಾಳ್, ಟ್ಯಾಗೋರ್ ರಸ್ತೆ, ಹಾಗೂ ಹಣಗಿ ಜೀನ್ ಪ್ರದೇಶವನ್ನು ಒಳಗೊಂಡಿದ್ದು, ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಂದನಾ ವರ್ಣೇಕರ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಸುಮಾ ಗರಗ ಸ್ಪರ್ಧಿಸಿ ಸೋಲುಂಡಿದ್ದರು. ಈ ಬಾರಿ ಇಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಹಿಂದುಳಿದ ಮತ್ತು ಮೇಲ್ವರ್ಗ ಸೇರಿದಂತೆ ಎಲ್ಲ ಬಗೆಯ ಮತಾದಾರರನ್ನು ಈ ವಾರ್ಡ್ ಹೊಂದಿದ್ದು, ಇಲ್ಲಿನ ಕೆಲ ಸ್ಲಂ ನಿವಾಸಿಗಳ ಸ್ಥಳಾಂತರದ ಗೊಂದಲ ಹಾಗೆಯೇ ಮುಂದುವರಿದಿದೆ. ಹಿಂದುಳಿದ ಜನರ, ಬಡವರಿಗೆ ಸೂಕ್ತ ಸೌಲಭ್ಯ ದೋರಕಿಸಿ ಅವರ ಅಭಿವೃದ್ಧಿಗೆ ಸಹಕರಿಸುವ ಆವಶ್ಯಕತೆ ಇದೆ. ಕುಡಿಯುವ ನೀರಿಗಾಗಿ ವಾರ್ಡ್ ಜನತೆ ಪರದಾಡುತ್ತಾರೆ. ಅದರಲ್ಲೂ ಬೇಸಿಗೆ ಸಮಯದಲ್ಲಂತೂ ಇವರ ಪರಿಸ್ಥಿತಿ ಹೇಳತೀರದು. ಇದಕ್ಕೆಲ್ಲಾ ಕೊನೆ ಇಲ್ಲದಂತಾಗಿದೆ. ಈ ವಾರ್ಡ್‌ನಲ್ಲಿ ಒಟ್ಟು 1745 ಮತದಾರರಿದ್ದು, ಅವರಲ್ಲಿ 910 ಪುರುಷರು ಹಾಗೂ 835 ಮಹಿಳಾ ಮತದಾರರಿದ್ದಾರೆ. ಇಲ್ಲಿ ಪ್ರಜ್ಞಾವಂತ ಜನರೇ ಹೆಚ್ಚಾಗಿ ವಾಸವಾಗಿದ್ದು, ಲಿಂಗಾಯತ ಹಾಗೂ ಬ್ರಾಹ್ಮಣ ಮತಗಳೇ ನಿರ್ಣಾಯಕವಾಗಿವೆ.

ಮಹಿಳಾ ಮತದಾರರೇ ಹೆಚ್ಚು
ಈ ವಾರ್ಡ್ ಬಸವೇಶ್ವರ ನಗರ ಶಹಪೂರ ಪೇಟೆಯನ್ನು ಒಳಗೊಂಡಿದ್ದು, ಇದು ಗದಗ ನಗರದ ಅತ್ಯಂತ ಹಳೆಯ ಪ್ರದೇಶವಾಗಿದೆ. ಇಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣಗಳ ವಿಷಯದಲ್ಲಿ ಹಾಗೂ ಶೌಚಾಲಯಗಳ ನಿರ್ಮಾಣದಲ್ಲಿ ಸಾಕಷ್ಟು ತೊಂದರೆಗಳಿವೆ. ಮೂಲ ಸೌಕರ್ಯ ಸಮಪರ್ಕವಾಗಿ ಎಲ್ಲರಿಗೂ ದೊರೆಯಬೇಕಿದೆ. ನೀರು, ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ಕಳೆದ ಬಾರಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸಿದ್ದ ಸದಾನಂದ ಪಿಳ್ಳಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಸಂತೋಷ ತೋಟಗಂಟಿಮಠ ಹಾಗೂ ಭಾರತೀಯ ಜನತಾ ಪಕ್ಷದಿಂದ ಪರಮೇಶ ನಗಳೂರ ಸ್ಪರ್ಧಿಸಿ ಸೋಲುಂಡಿದ್ದು, ಈ ಬಾರಿ ಮತ್ತೆ ಇವರೆಲ್ಲಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಕೆಜೆಪಿಯೂ ಈ ವಾರ್ಡ್‌ನಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ನಿಚ್ಚಳವಾಗಿದೆ. ಈ ವಾರ್ಡ್‌ನಲ್ಲಿ 2560 ಮತದಾರರಿದ್ದು, ಅವರಲ್ಲಿ 1250 ಪುರುಷರು ಹಾಗೂ 1310 ಮಹಿಳೆಯರಿದ್ದು, ಇಲ್ಲಿಯೂ ಮಹಿಳಾ ಮತದಾರರೇ ನಿರ್ಣಾಯಕವಾಗಿದ್ದಾರೆ. ಲಿಂಗಾಯತ ಮತಗಳೇ ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿವೆ.

ಶ್ರೀರಾಮುಲು ಅಭಿಮಾನಿ ಲಕ್ಷ್ಮಣ
ಈ ವಾರ್ಡ್ ಡಿ.ಸಿ. ಮಿಲ್ ಭಾಗ, ಕೆಳಗೇರಿ, ಅಂಬೇಡ್ಕರ್ ನಗರ ಸೇರಿದಂತೆ ಬಹುತೇಕ ಹಿಂದುಳಿದ ಪ್ರದೇಶಗಳನ್ನೇ ಒಳಗೊಂಡಿದೆ. ಸಾಕಷ್ಟು ಕಾಮಗಾರಿಗಳು ನಡೆದಿದ್ದರೂ, ಕೆಲ ಕಾಮಗಾರಿಗಳಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಕಳೆದ ಬಾರಿ ಶ್ರೀರಾಮುಲು ಅಭಿಮಾನಿ ಬಳಗದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದ ಲಕ್ಷ್ಮಣ ದೊಡ್ಡಮನಿ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಕೃಷ್ಣಾ ಪರಾಪುರ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದು, ಈ ಬಾರಿ ಮತ್ತೆ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಉಡಚಪ್ಪ ಹಳ್ಳಿಕೇರಿ ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದರು. ಈ ಬಾರಿ ಅವರೊಂದಿಗೆ ಪ್ರಭಾಕರ ಮಣ್ಣಮ್ಮನವರ ಅವರ ಹೆಸರೂ ಕೇಳಿ ಬರುತ್ತಿದೆ. ಬಿಎಸ್‌ಆರ್. ಹಾಗೂ ಕೆಜೆಪಿ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಈ ವಾರ್ಡ್‌ನಲ್ಲಿ ಒಟ್ಟು 3587 ಮತದಾರರಿದ್ದು, ಅವರಲ್ಲಿ 1750 ಪುರುಷರು, 1837 ಮಹಿಳಾ ಮತದಾರರಿದ್ದು, ಬಹುತೇಕ ಹಿಂದುಳಿದ ವರ್ಗದ ಮತಗಳೇ ನಿರ್ಣಾಯಕವಾಗಿದ್ದು. ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲ ಸಮಸ್ಯೆಗಳ ಪರಿಹಾರಕ್ಕೂ ಗಮನ ನೀಡಬೇಕಿದೆ.


ಜನ ಕೌತಾಳ ಕೈ ಹಿಡಿಯುವರೇ?
ಈ ವಾರ್ಡ್ ನಗರದ ಪ್ರಮುಖ ಸ್ಥಳಗಳಾದ ಆಝಾದ್ ರಸ್ತೆಯಿಂದ, ಜವುಳ ಗಲ್ಲಿ ಭಾಗಗಳನ್ನು ಒಳಗೊಂಡಿದೆ. ಹೆಚ್ಚಾಗಿ ಅಲ್ಪ ಸಂಖ್ಯಾತ ಜನರೇ ಹೆಚ್ಚಾಗಿ ವಾಸವಾಗಿದ್ದು, ದುಡಿವ ವರ್ಗ, ಮತ್ತೆ ಮನೆ ಕೆಲಸವನ್ನೇ ನಂಬಿಕೊಂಡಿರುವ ಕುಟುಂಬಗಳಿವೆ.  ಈ ವಾರ್ಡ್‌ನಲ್ಲಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಪೀರಸಾಬ್ ಕೌತಾಳ ಆಯ್ಕೆಯಾಗಿದ್ದರು. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಜಿಲ್ಲಾ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಸಾಧಿಕ ನರಗುಂದ ಅವರ ಹೆಸರು ಕೇಳಿ ಬರುತ್ತಿದೆ. ಇನ್ನು ಜೆಡಿಎಸ್‌ನಿಂದ ಜಿಲ್ಲಾ ಜೆಡಿಎಸ್ ವಕ್ತಾರ ದಾವಲ ಮುಳಗುಂದ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಕೆಜೆಪಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದು, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಮೂವರ ಹೆಸರು ಚರ್ಚೆಯಾಗುತ್ತಿದ್ದು ಇನ್ನು ಅಂತಿಮಗೊಂಡಿಲ್ಲ. ವಾರ್ಡ್‌ಗೆ ಭೇಟಿ ನೀಡಿದ ವೇಳೆಯಲ್ಲಿ ಅಲ್ಲಿನ ಸಾರ್ವಜನಿಕರು ತಮ್ಮ ತೊಂದರೆ ಹೇಳಿಕೊಂಡರು. ಒಟ್ಟು 2215 ಮತದಾರರಿದ್ದು, ಅವರಲ್ಲಿ 1114 ಪುರುಷರು, 1101 ಮಹಿಳಾ ಮತದಾರರಿದ್ದಾರೆ. ಅಲ್ಪ ಸಂಖ್ಯಾತರ ಮತಗಳೇ ಪ್ರಮುಖವಾಗಿದ್ದರೂ, ಹಿಂದುಳಿದ ವರ್ಗದ ಮತಗ ಕಡೆಗಣಿಸುವಂತಿಲ್ಲ.

ಚಿಕ್ಕ ವಾರ್ಡಿಗಿಲ್ಲ ಚೊಕ್ಕ ಸೌಲಭ್ಯ
ಈ ವಾರ್ಡ್ ಜವುಳಗಲ್ಲಿ ತಗ್ಗು ಪ್ರದೇಶ, ಕೊನೇರಿ ಹೊಂಡಗಳನ್ನು ಒಳಗೊಂಡಿದೆ. ಹಲವಾರು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಯೋಜನೆ ರೂಪಿಸಿದ್ದರೂ ಸಫಲವಾಗಲಿಲ್ಲ. ಇದರಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಖಮರ್‌ಸುಲ್ತಾನ್ ನಮಾಜಿ ಆಯ್ಕೆಯಾಗಿದ್ದು, ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಭಿನ್ನಮತದ ಲಾಭ ಪಡೆದು, ಎರಡುವರೆ ವರ್ಷ ನಗರಸಭೆಯ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದು, ಸದ್ಯ ಮರು ಆಯ್ಕೆ ಬಯಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಲು 4 ಜನರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಇನ್ನು ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿ ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದು, ಅಲ್ಪಖ್ಯಾಂತ, ಲಿಂಗಾಯತ, ಹಿಂದಳಿದ ವರ್ಗಗಳ ಮತಗಳು ಫಲಿತಾಂಶ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಇದು ಸಣ್ಣ ವಾರ್ಡ್ ಆಗಿದ್ದು, ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ತೀವ್ರ ಪೈಪೋಟಿ ಎದುರಿಸಬೇಕಾದ ಸಾಧ್ಯತೆ ಇದೆ. ವಾರ್ಡ್‌ನಲ್ಲಿ ಒಟ್ಟು 820 ಮತದಾರರಿದ್ದು, ಅವರಲ್ಲಿ 400 ಪುರುಷರು, 420 ಮಹಿಳಾ ಮತದಾರರಿದ್ದಾರೆ.

ಶೌಚಾಲಯ ಅವ್ಯವಸ್ಥೆ, ಸಂಕಷ್ಟ ಜನತೆಗೆ

ಈ ವಾರ್ಡ್ ಐತಿಹಾಸಿಕ ವೀರನಾರಾಯಣ ಗುಡಿ ಹಿಂದಿನ ಭಾಗ ಸೇರಿದಂತೆ ಹಲವಾರು ಪ್ರಮುಖ ಸ್ಥಳಗಳನ್ನು ಒಳಗೊಂಡಿದೆ. ಮುಖ್ಯವಾಗಿ ಹಳೆಯ ಗದಗ ನಗರದ ಕೆಲ ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಹೆಚ್ಚಾಗಿ ದುಡಿವ ವರ್ಗ, ಕೃಷಿಕರು ಸೇರಿದಂತೆ ಕೂಲಿ ಕಾರ್ಮಿಕರು, ಕೆಲ ಬ್ರಾಹ್ಮಣ ಕುಟುಂಬಗಳು ವಾಸವಾಗಿವೆ. ಅಭಿವೃದ್ಧಿ ವಿಷಯಕ್ಕೆ ಬಂದಾಗ ಇಲ್ಲಿಯೂ ಸಮಸ್ಯೆಗಳು ಸಾಕಷ್ಟಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಬಸವಣ್ಣೆವ್ವ ಭಾವಿ ಆಯ್ಕೆಯಾಗಿದ್ದು, ಈ ಬಾರಿಯೂ ಅವರು ಮತ್ತೆ ಸ್ಪರ್ಧಿಸುವ ಇಚ್ಚೆ ಹೊಂದಿದ್ದಾರೆ. ಇನ್ನು ಕಾಂಗ್ರೆಸ್‌ನ ಮೂವರು ಹಾಗೂ ಜೆಡಿಎಸ್‌ನಿಂದ ಇಬ್ಬರು ಆಕಾಂಕ್ಷಿಗಳಿದ್ದು ಪಕ್ಷ ಅಂತಿಮಗೊಳಿಸುವ ಹಂತದಲ್ಲಿದೆ. ಬಿಎಸ್‌ಆರ್ ಹಾಗೂ ಕೆಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸಿದೆ. ಈ ವಾರ್ಡ್‌ನಲ್ಲಿ ಒಟ್ಟು 2511 ಮತದಾರರಿದ್ದು, ಅವರಲ್ಲಿ 1273 ಪುರುಷರು, 1238 ಮಹಿಳಾ ಮತದಾರರಿದ್ದು, ಇಲ್ಲಿಯೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ. ಇದರೊಟ್ಟಿಗೆ ಇನ್ನುಳಿದ ಸಣ್ಣ ಸಮುದಾಯಗಳ ಮತಗಳನ್ನು ಕಡೆಗಣಿಸಿದಲ್ಲಿ ಅಭ್ಯರ್ಥಿಗಳು ಸಮಸ್ಯೆ ಖಚಿತ.

ಹಿಂದುಳಿದ ಮತಗಳೇ ನಿರ್ಣಾಯಕ
ಈ ವಾರ್ಡ್ ಅಂಬೇಡ್ಕರ್ ನಗರ, ರೆಹಮತ್‌ನಗರ, ದ್ಯಾಮವ್ವನಕಟ್ಟಿ, ಯಲಿಗಾರ ಓಣಿ, ಗಂಗಾಪುರ ಪೇಟೆ, ಸುಣ್ಣದ ಬಟ್ಟಿ, ಕೊಳಚೆ ಪ್ರದೇಶ, ಕುಷ್ಠರೋಗ ಕಾಲೋನಿ ಈ ಭಾಗಗಳನ್ನು ಒಳಗೊಂಡಿದೆ. ಅತ್ಯಂತ ಹಿಂದುಳಿದ ಜನರೇ ಇಲ್ಲಿ ವಾಸವಾಗಿದ್ದಾರೆ. ಕುಷ್ಠರೋಗ ಕಾಲೋನಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿಲ್ಲ. ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದ್ದರೂ ಕಾಮಗಾರಿಯಲ್ಲಿ ಗುಣಮಟ್ಟವಿಲ್ಲ. ಇನ್ನು ಹಲವಾರು ಕಡೆಗಳಲ್ಲಿ ಚರಂಡಿ ಮತ್ತು ರಸ್ತೆಗಳ ನಿರ್ಮಾಣದ ವಿಷಯದಲ್ಲಿ ಸಾರ್ವಜನಿಕರಲ್ಲಿ ಅಸಮಾಧಾನವಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪದ್ಮಾವತಿ ಯಗಪಲ್ಲಿ ಆಯ್ಕೆಯಾಗಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಸಾಕಷ್ಟು ಜನರು ಅರ್ಜಿ ಸಲ್ಲಿಸಿದ್ದು, ಪಕ್ಷ ಯಾರ ಹೆಸರನ್ನೂ ಬಹಿರಂಗಗೊಳಿಸುತ್ತಿಲ್ಲ. ಈ ವಾರ್ಡ್‌ನಲ್ಲಿ ಒಟ್ಟು 1244 ಮತದಾರರಿದ್ದು, 641 ಪುರುಷರು, 603 ಮಹಿಳಾ ಮತದಾರರಿದ್ದಾರೆ. ಇಲ್ಲಿ ಹಿಂದುಳಿದ ವರ್ಗಗಳ ಮತವೇ ನಿರ್ಣಾಯಕವಾಗಿವೆ.  

ನೀರು ಸಂಗ್ರಹವೇ ಇವರ ಚಿಂತೆ
ಈ ವಾರ್ಡ್ ಖಾನ್ ತೋಟ, ಜನತಾ ಕಾಲೋನಿ, ಮಾನವಿ ಪ್ಲಾಟ್ ಈ ಪ್ರದೇಶಗಳನ್ನು ಒಳಗೊಂಡಿದೆ. ಈ ಹಿಂದಿನ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥ ಪಡಿಸುವಲ್ಲಿ ಸಾಧ್ಯವಾಗದೇ ಇರುವುದರಿಂದ ಇಂದಿಗೂ ಸಮಸ್ಯೆ ಎದುರಿಸುಂತಾಗಿದೆ.  ಜನರಿಗೆ ಕುಡಿಯುವ ನೀರು ಸಂಗ್ರಹಿಸಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಪ ತೃಪ್ತಿ ಪಡಬಹುದಾದಂತಹ ಕೆಲಸಗಳು ಇಲ್ಲಿ ನಡೆದಿವೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಕಮಲಾಕ್ಷಿ ಗೊಂದಿ ಆಯ್ಕೆಯಾಗಿದ್ದು, ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಪಕ್ಷವು ಭಿನ್ನಮತದ ಭಯದಿಂದ ಹೆಸರು ಬಹಿರಂಗ ಪಡಿಸುತ್ತಿಲ್ಲ. ಇನ್ನು ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಜೆಡಿಎಸ್, ಕೆಜೆಪಿ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದು, ಇನ್ನು ಅಂತಿಮಗೊಳಿಸಿಲ್ಲ ಎನ್ನುವ ಉತ್ತರ ನೀಡುತ್ತಿವೆ. ಈ ವಾರ್ಡ್‌ನಲ್ಲಿ ಒಟ್ಟು 2156 ಮತದಾರರಿದ್ದು, 1062 ಪುರುಷರು, 1094 ಮಹಿಳಾ ಮತದಾರರಿದ್ದಾರೆ. ಇಲ್ಲಿ ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಮತಗಳೇ ನಿರ್ಣಾಯಕವಾಗಿವೆ.

ಪರಶುರಾಮ ಪ್ರತಿಭಟಿಸಿದ್ದು ಇದೆ
ಈ ವಾರ್ಡ್ ನಗರದ ಗುಜ್ಜರ ಬಸ್ತಿ ಎಡಭಾಗ, ಒಕ್ಕಲಗೇರಿ, ದಖನಿಗಲ್ಲಿ, ಕೊಳಗೇರಿ ಪ್ರೇಸ್, ಹನುಮನಗರಡಿ ಈ ಪ್ರದೇಶಗಳನ್ನು ಒಳಗೊಂಡಿದೆ. ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದರೂ ಅವುಗಳು ನಿಗಧಿತ ಅವಧಿಯಲ್ಲಿ ಮುಗಿಯದೇ ಇರುವುದರಿಂದ, ಮುಗಿದ ಕಾಮಗಾರಿಗಳಿಗೆ ನಗರಸಭೆಯಿಂದ ಸರಿಯಾದ ಸಮಯಕ್ಕೆ ಹಣ ಪಾವತಿಸದೇ ಇರುವುದನ್ನು ಖಂಡಿಸಿ ಈ ವಾರ್ಡ್‌ನ ಸದಸ್ಯ ಪರಶುರಾಮ ಹೆಬಸೂರು ನಗರಸಭೆಯ ಸಭೆಯಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಹೋರಾಟ ಮಾಡಿದ್ದು ನಡೆದಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪರಶುರಾಮ ಹೆಬಸೂರ ಆಯ್ಕೆಯಾಗಿದ್ದರು. ಈ ಬಾರಿಯೂ ಅವರೇ ಟಿಕೆಟ್ ಆಕಾಂಕ್ಷಿ. ಕಾಂಗ್ರೆಸ್‌ನಿಂದ ಬರಕತ್‌ಅಲಿ ಮುಲ್ಲಾ ಸ್ಪರ್ಧಿಸಿ ಸೋಲುಂಡಿದ್ದು ಅವರೂ ಈ ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಾಧಿಕ ನರಗುಂದ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಇನ್ನು ಜೆಡಿಎಸ್‌ನಿಂದ ರಮೇಶ ಕಲಬುರ್ಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ವಾರ್ಡ್‌ನಲ್ಲಿ ಒಟ್ಟು 2734 ಮತದಾರರಿದ್ದು, 1347 ಪುರುಷರು, 1387 ಮಹಿಳಾ ಮತದಾರರಿದ್ದು ಬಹುತೇಕ ಹಿಂದುಳಿದ ವರ್ಗಗಳ ಮತಗಳೇ ಹೆಚ್ಚಾಗಿದ್ದು ಅವರೇ ನಿರ್ಣಾಯಕರಾಗಿದ್ದಾರೆ.

ಕಾಂಕ್ರೀಟ್ ರಸ್ತೆ ಬಲು ಜೋರು
ಹಳೆ ಸರಾಫ ಬಜಾರ್, ನಾಲ್ವಾಡ ಓಣಿ, ಕಟಗರ ಗಲ್ಲಿ, ಬುಳ್ಳಾ ಗಲ್ಲಿ ಈ ಪ್ರದೇಶವನ್ನು ಒಳಗೊಂಡಿದ್ದು, ನಗರದ ಪ್ರಮುಖ ರಸ್ತೆಗಳು ಹಾಗೂ ಹೃದಯ ಭಾಗದಲ್ಲಿರುವ ಎಲ್ಲ ಸ್ಥಳಗಳು ಈ ವಾರ್ಡ್‌ಗೆ ಒಳಪಡುತ್ತಿದ್ದು, ಇಲ್ಲಿನ ಹಲವಾರು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಇದು ಸಾರ್ವಜನಿಕರಲ್ಲಿ ಕೊಂಚ ಮಟ್ಟಿನ ನೆಮ್ಮದಿ ಮೂಡಿಸಿದೆ. ಇಲ್ಲಿಯೂ ನೀರಿ ಸಮಸ್ಯೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ದಿಸಿದ್ದ ಶಂಭುಲಿಂಗಪ್ಪ ಗುಗ್ಗರಿ ಜಯ ಸಾಧಿಸಿದ್ದು, ನಂತರ ಅಪಘಾತದಲ್ಲಿ ತೀವ್ರ ಗಾಯಗೊಂಡು ಹಾಸಿಗೆ ಹಿಡಿದಿದ್ದರಿಂದ ಹಲವಾರು ವರ್ಷಗಳ ಕಾಲ ಅವರು ರಾಜಕೀಯದಿಂದ ದೂರ ಉಳಿಯುವಂತಾಯಿತು. ಈ ವಾರ್ಡ್‌ನಲ್ಲಿ ರಮೇಶ ಅಬ್ಬಿಗೇರಿ ಅವರೊಂದಿಗೆ ಇನ್ನು 3 ಜನ ಆಕಾಂಕ್ಷಿಗಳು ಬಿಜೆಪಿಯಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸಲು 4 ಜನ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಕೆಜೆಪಿಯೂ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ಈ ವಾರ್ಡ್‌ನಲ್ಲಿ ಒಟ್ಟು 2032 ಮತದಾರರಿದ್ದು, 1037 ಪುರುಷರು, 995 ಮಹಿಳಾ ಮತದಾರರಿದ್ದಾರೆ.

ಇಲ್ಲಿ ರಸ್ತೆಯನ್ನೇ ಅತಿಕ್ರಮಿಸಿದ್ದಾರೆ
ನಗರದ ಹಾಳದಿಬ್ಬ, ವೀರನಾರಾಯಣ ದೇವಸ್ಥಾನದ ಮುಂದಿನ ಭಾಗ, ಕುರುಬರ ಗರಡಿ, ಗಂಗಾಪುರ ಪೇಟೆ,  ಕರಿದೇವರ ಗುಡಿಯ ಬಲಭಾಗ, ಆಝಾದ ರಸ್ತೆ, ಗೌರಿಶಂಕರ ಲಾಡ್ಜ್ ಹತ್ತಿರ ಈ ಭಾಗಗನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ರಸ್ತೆಯು ಸಾಕಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಮುಖ್ಯ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದ್ದು, ಕೊಂಚ ನೆಮ್ಮದಿಯ ವಿಷಯವಾಗಿದೆ. ಇನ್ನು ಒಳ ರಸ್ತೆಗಳ ಅಭಿವೃದ್ಧಿ ಹಾಗೂ ವಾರ್ಡ್‌ಗಳಲ್ಲಿ ಕುಡಿವ ನೀರು ಪೂರೈಕೆ ಮಾಡುವ ಪೈಪ್‌ಲೈನ್ ದುರಸ್ತಿ ಕಾರ್ಯ  ಕೈಗೆತ್ತಿಕೊಳ್ಳಬೇಕಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸಿದ್ದು ಪಲ್ಲೇದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅವರೇ ಮರು ಆಯ್ಕೆ ಬಯಸಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್‌ನಿಂದ ಸಂಗಮೇಶ ಕವಳಿಕಾಯಿ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಇನ್ನು ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಕೆಜೆಪಿಯೂ ಈ ವಾರ್ಡ್‌ನಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ತಯಾರಿಯಲ್ಲಿದ್ದು, ಇಲ್ಲಿ  ಒಟ್ಟು 2326 ಮತದಾರರಿದ್ದು, 1237 ಪುರುಷರು, 1089 ಮಹಿಳಾ ಮತದಾರರಿದ್ದಾರೆ.

ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಿತೇ?

ನಗರದ ಅತ್ಯಂತ ಮಧ್ಯವರ್ತಿ ಸ್ಥಳವಾದ ಹಳೆ ಬಸ್ ನಿಲ್ದಾಣ, ಗ್ರೇನ್ ಗ್ರೋಸರಿ ಮಾರುಕಟ್ಟೆ, ಕಮ್ಮಾರ ಸಾಲ ಹಾಗೂ ವಕಾರ ಸಾಲ, ತೋಂಟದಾರ್ಯ ಮಠ, ಲಕ್ಷ್ಮಿ ಚಾಳ, ಮಾಹಾವೀರ ಕಾಲೋನಿ ಈ ಭಾಗಗಳನ್ನು ಒಳಗೊಂಡಿದೆ. ವಾರ್ಡ್‌ನಲ್ಲಿ ಸಾಕಷ್ಟು ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಕಳೆದ ಬಾರಿ ಶ್ರೀರಾಮುಲು ಅಭಿಮಾನಿ ಬಳಗದಿಂದ ಸ್ಪರ್ಧಿಸಿದ್ದ ಸಿರಾಜ್ ಬಳ್ಳಾರಿ ಆಯ್ಕೆಯಾಗಿ ಬಿಜೆಪಿಗೆ ಬೆಂಬಲ ನೀಡಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಉಮರ್‌ಫಾರೂಕ್ ಹುಬ್ಬಳ್ಳಿ ಹಾಗೂ ಅಕ್ಬರ್‌ಸಾಬ್ ಬಬರ್ಚಿ, ರಸೂಲ್‌ಸಾಬ ಫಿರಾಣ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಜೆಡಿಎಸ್‌ನಿಂದ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಎಂ.ಎಸ್. ಪವರ್ತಗೌಡ್ರ ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಬಿಎಸ್‌ಆರ್ ಕಾಂಗ್ರೆಸ್ ಹಾಗೂ ಕೆಜೆಪಿ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿವೆ. ವಾರ್ಡ್‌ನಲ್ಲಿ ಹತ್ತಾರು ಸಮಸ್ಯೆಗಳು ದಶಕಗಳಿಂದಲೇ ಜೀವಂತಾಗಿವೆ. ಒಟ್ಟು 1918 ಮತದಾರರಿದ್ದು, 992 ಪುರುಷರು, 926 ಮಹಿಳಾ ಮತದಾರರಿದ್ದು. ಲಿಂಗಾಯತ ಮತಗಳೇ ಇಲ್ಲಿ ನಿರ್ಣಾಯಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement