ಸಾಗುವಳಿ ಭೂಮಿ ತೆರವಿಗೆ ವಿರೋಧ
ಹಿರೇಕೆರೂರು: ಅರಣ್ಯ ಪ್ರದೇಶದಲ್ಲಿ ಕಾಯ್ದಿಟ್ಟ ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿದ್ದ ರೈತರನ್ನು ತೆರವುಗೊಳಿಸಲು ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕಿನ ನೀಡನೇಗಿಲು, ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ ಅರಣ್ಯಾಧಿಕಾರಿಗಳು ಮತ್ತು ರೈತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಗ್ರಾಮಸ್ಥರ ಪಟ್ಟು: ಹಲವಾರು ವರ್ಷಗಳಿಂದ ಸುಮಾರು 850 ಹೆಕ್ಟೇರ್ ಪ್ರದೇಶದಲ್ಲಿ ನಾವು ಸಾಗುವಳಿ ಮಾಡುತ್ತಿದ್ದೇವೆ. ಇಷ್ಟು ವರ್ಷ ಬಿಟ್ಟು ಈಗ ಏಕಾಏಕಿ ಅರಣ್ಯಾಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿರುವುದರಿಂದ ಅನೇಕ ಬಡ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ಎದುರಾಗಿದೆ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ತೆರವಿಗೆ ಅವಕಾಶ ನೀಡುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಆದೇಶ ಪಾಲಿಸಿದ್ದೇವೆ: ಈ ವೇಳೆ ವಲಯ ಅರಣ್ಯಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ಸರ್ಕಾರದ ಆದೇಶದಂತೆ ಈ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಾಗುವಳಿ ಮಾಡಿದ ಸುಮಾರು 200 ಹೆಕ್ಟೇರ್ ಪ್ರದೇಶವನ್ನು ತೆರವುಗೊಳಿಸಿ ಅರಣ್ಯೀಕರಣಕ್ಕೆ ಸಜ್ಜುಗೊಳಿಸಬೇಕಿದೆ. ತಾವು ರೈತರ ವಿರೋಧಿಯಲ್ಲ. ಆದರೆ, ಸರ್ಕಾರದ ಆದೇಶ ಪಾಲನೆ ಮಾಡುವುದು ನನ್ನ ಕರ್ತವ್ಯ. ಬೇಕಿದ್ದರೆ ನೀವು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಎಂದು ಸಲಹೆ ಮಾಡಿದರು. ಇದಕ್ಕೆ ಗ್ರಾಮಸ್ಥರು ಪಟ್ಟು ಸಡಿಲಿಸಲಿಲ್ಲ. ಈ ಸಂದರ್ಭ ಶಿವ್ಯಾನಾಯ್ಕ ಲಮಾಣಿ ಮಾತನಾಡಿ, ಫಾರಂ 53ರ ಪ್ರಕಾರ ಅನೇಕ ಬಡ ರೈತರು ಅರಣ್ಯ ಭೂಮಿಗಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಅದು ಇತ್ಯರ್ಥವಾಗುವ ತನಕ ಯಾವುದೇ ಕಾರಣಕ್ಕೂ ತೆರವು ಕಾರ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಪ್ರತಿಭಟನೆಯಲ್ಲಿ ಕೆಂಚಪ್ಪ ಕುರಿಯವರ, ಚಂದ್ರಣ್ಣ ಲಮಾಣಿ, ಹನುಮಂತನಾಯ್ಕ ಲಮಾಣಿ, ಸುರೇಶನಾಯ್ಕ ಲಮಾಣಿ, ರಾಜು ಬನ್ನಿಹಟ್ಟಿ, ಹನುಮಂತಪ್ಪ ಪುರ, ತಿರಕಪ್ಪ ಲಮಾಣಿ, ನಾಗಪ್ಪ ಹರಿಜನ, ದುರುಗಪ್ಪ ಹರಿಜನ, ಸುರೇಶ ಮರ್ಕಳ್ಳಿ, ಕೃಷ್ಣನಾಯ್ಕ ಬುಲ್ಡಾ, ಲೋಕೇಶ ಲಮಾಣಿ, ಕೆಂಗಪ್ಪ ವಡ್ಡರ ಇತರರು ಇದ್ದರು.