ಸರ್ವಾಂಗೀಣ ಅಭಿವೃದ್ಧಿ ಬಿಜೆಪಿ ಮೂಲಮಂತ್ರ: ಸಚಿವ ಬಂಡಿ
ಗಜೇಂದ್ರಗಡ: ಸರ್ಕಾರ ರಾಜ್ಯದ 43 ಹೊಸ ತಾಲೂಕು ಕೇಂದ್ರಗಳನ್ನು ಏಕಕಾಲದಲ್ಲಿ ಘೋಷಿಸುವ ಮೂಲಕ ಸಿಎಂ ಜಗದೀಶ ಶೆಟ್ಟರ್ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಸಮಗ್ರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರವೆಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಕಳಕಪ್ಪ ಬಂಡಿ ಹೇಳಿದರು.
ಅವರು ಭಾನುವಾರ ಸಂಜೆ ಸ್ಥಳೀಯ ಮೈಸೂರ ಮಠದಲ್ಲಿ ನಡೆದ ಗಜೇಂದ್ರಗಡ ತಾಲೂಕು ಹೋರಾಟ ಸಮಿತಿ ಹಾಗೂ ಸುತ್ತಲಿನ ಗ್ರಾಮಗಳ ಸರ್ವ ಸಮಾಜ ಸದಸ್ಯರ ವತಿಯಿಂದ ಗಜೇಂದ್ರಗಡ ತಾಲೂಕು ಘೋಷಣೆಗೆ ಶ್ರಮಿಸಿದ ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಪಟ್ಟಣ ಸೇರಿದಂತೆ ಈ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಗಜೇಂದ್ರಗಡ ತಾಲೂಕು ಕೇಂದ್ರ ಆಗಬೇಕೆನ್ನುವ ಜನರ ಕನಸು ನನಸಾಗಿದೆ. ಕೇವಲ ಕಾಟಾಚಾರದ ತಾಲೂಕಾಗದೆ ಒಂದೇ ವರ್ಷದಲ್ಲಿ ತಾಲೂಕಿಗೆ ಸಂಬಂಧಿಸಿದ ಎಲ್ಲ ಮೂಲ ಸೌಕರ್ಯ ಒದಗಿಸಲಾಗುವುದು. ಗಜೇಂದ್ರಗಡ ತಾಲೂಕಿಗೆ ಸುಮಾರು 45 ಗ್ರಾಮಗಳು ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಜಿಲ್ಲೆಯಲ್ಲಿಯೇ 2 ನೇ ಅತ್ಯಂತ ದೊಡ್ಡ ಪಟ್ಟಣವೆನಿಸಿದ ಗಜೇಂದ್ರಗಡಕ್ಕೆ ಮೂಲ ಸೌಲಭ್ಯ ಮರೀಚಿಕೆಯಾಗಿತ್ತು, ನನ್ನ 9 ವರ್ಷದ ಅಧಿಕಾರವಧಿಯಲ್ಲಿ ಸರ್ಕಾರದ ಹತ್ತು ಹಲವು ಯೋಜನೆಗಳನ್ನು ಪಟ್ಟಣಕ್ಕೆ ಒದಗಿಸಲು ಶ್ರಮಿಸಿದ್ದೇನೆ ಎಂದರು.