ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಜಾರಿಯಾಗಲಿ

Lingaraj Badiger
Updated On : 22 Feb 2013, 12:39 pm

ಕನ್ನಡಪ್ರಭ ವಾರ್ತೆ, ಗದಗ, ಫೆ. 21
ಕೇಂದ್ರ ದೇಶದಲ್ಲಿ ಜನವಿರೋಧಿ ನೀತಿ ಜಾರಿಗೆ ತರುತ್ತಿದ್ದು, ಅವುಗಳ ಬದಲು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ತರಬೇಕು ಎಂದು ಸಿಐಟಿಯು ಸಂಘಟನೆಯ ರಾಜ್ಯ ಮುಖಂಡ ಎಫ್.ಎಸ್. ಸಿಂಧಗಿ ಹೇಳಿದರು.
ಅವರು ಗುರುವಾರ ನಗರದಲ್ಲಿ 2ನೇ ದಿನದ ಸಾರ್ವತ್ರಿಕ ಮುಷ್ಕರದಲ್ಲಿ ಮಾತನಾಡಿದರು. ವಾಲ್‌ಮಾರ್ಟ್‌ನಂತಹ ದೈತ್ಯ ಕಂಪನಿಗಳು ಚಿಲ್ಲರೆ ವ್ಯಾಪಾರ ಕ್ಷೇತ್ರ ಪ್ರವೇಶಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ದೇಶದಲ್ಲಿ ಸುಮಾರು 1.30 ಕೋಟಿ ಚಿಲ್ಲರೆ ವ್ಯಾಪಾರಿಗಳಿದ್ದು, ಸುಮಾರು 20 ಕೋಟಿ ಜನರು ಉದ್ದಿಮೆ ಮೇಲೆ ಅವಲಂಬಿತರಾಗಿದ್ದಾರೆ. ಅಂಥವರ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಠ್ಠಲ ನಾಯಕ ಮಾತನಾಡಿ, ದೇಶದ ಶೇ. 93ರಷ್ಟು ದುಡಿವ ಅಸಂಘಟಿತ ವಲಯದ ಕೆಲಸಗಾರರನ್ನು ಕಾರ್ಮಿಕ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಜಿಡಿಪಿಯ ಶೇ. 60ರಷ್ಟು ಕೊಡುಗೆ ನೀಡಿದ್ದರೂ ಅಸಂಘಟಿತ ವಲಯದ ನೌಕರರಿಗೆ ಕೆಲಸದ ಭದ್ರತೆ ಇಲ್ಲ. ಆದ್ದರಿಂದ ಕೂಡಲೇ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಈ ದೇಶದ ಜನತೆಗೆ ಕೇಂದ್ರ ಸರ್ಕಾರ ರೇಶನ್ ನೀಡಿದ್ದರೂ ರೇಶನ್ ನೀಡುತ್ತಿಲ್ಲ. ಕೂಡಲೇ ಸರ್ಕಾರ ಎಲ್ಲರಿಗೂ ಸಾರ್ವತ್ರಿಕ ಪಡಿತರ ಚೀಟಿ ಮೂಲಕ 35 ಕೆಜಿ ಅಕ್ಕಿ, ಗೋದಿ ತಲಾ ರು. 2 ದರದಲ್ಲಿ ನೀಡಬೇಕು ಎಂದು ಮಹೇಶ ಹಿರೇಮಠ ಆಗ್ರಹಿಸಿದರು. ದೇಶದ ದುಡಿವ ಜನತೆಗಿರುವ ಅಲ್ಪಸ್ವಲ್ಪ ಸಾಮಾಜಿಕ ಭದ್ರತೆಯನ್ನು ನಾಶಪಡಿಸಲು ಪ್ರಸ್ತುತ ಅರ್ಥ ವ್ಯವಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ನಿವೃತ್ತಿ ವೇತನ ವ್ಯವಸ್ಥೆ ದುರ್ಬಲಗೊಳಿಸಲು ಸಂಚು ನಡೆದಿದೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಎಲ್ಲರಿಗೂ ಖಾತರಿ ಪಿಂಚಣಿ (ನಿವೃತ್ತಿ ವೇತನ) ನೀಡಬೇಕು ಎಂದು ಸಿಎಟಿ ಮುಖಂಡ ಬಸವರಾಜ ಮಂತೂರ ಆಗ್ರಹಿಸಿದರು. ಗ್ರಾಪಂ ನೌಕರರ ಸಂಘದ ಮುಖಂಡ ಮೋಹನ ಉಪಾಸಿ, ಮೈಲಾರಪ್ಪ ಕಲಕೇರಿ, ಅಂಗನವಾಡಿ ನೌಕರ ಶಾಂತಮ್ಮ ಜಾವೂಲ, ಶಾರದಾ, ಬಿಸಊಿಟ ನೌಕರರ ಮುಖಂಡ ಯಶೋದಾ ಬೆಟಗೇರಿ, ಪುಷ್ಪಾ ಚವ್ಹಾಣ, ರೇಣುಕಾ ಹೆಗಡೆ, ಎಫ್.ಎಂ.ಐ.ಆರ್. ಮಖಂಡರಾದ ಶ್ರೀನಿವಾಸ ಮಹೇಶ ಮುರಗಿ, ವಿಮಾ ನೌಕರರ ಮುಖಂಡ ಜಿ.ಎಸ್. ತಳವಾರ, ಮಾಹಗೊಂಡಪ್ಪ ಅಂಗಡಿ ಮಾತನಾಡಿದರು. ಪ್ರತಿಭಟನಕಾರರು ನಗರದ ಮುನ್ಸಿಪಲ್ ಕಾಲೇಜ ಮೈದಾನದಿಂದ ಮೆರವಣಿಗೆ ಪ್ರಾರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಮುಳಗುಂದ ನಾಕಾದಲ್ಲಿ 30ಕ್ಕೂ ಹೆಚ್ಚು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದರು. ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement