ಪಕ್ಷಕ್ಕಿಂತ ಉತ್ತಮ ನಾಯಕನಿಗೆ ಜೈ
ರಾಜು ಪಾಟೀಲ
ಕನ್ನಡಪ್ರಭ ವಾರ್ತೆ, ಮುಳಗುಂದ. ಫೆ. 22
ಮುಳಗುಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನುಳಿದ ಪಟ್ಟಣ ಪಂಚಾಯಿತಿಯಲ್ಲಿರುವಂತೆ ಇಲ್ಲಿ ಹಲವಾರು ಸಮಸ್ಯೆಗಳಿದ್ದರೂ ಅಭಿವೃದ್ಧಿ ಕಾಮಗಾರಿಯ ವಿಷಯದಲ್ಲಿ ಕೊಂಚ ಮಟ್ಟಿನ ನೆಮ್ಮದಿ ಮೂಡಿಸುವಂತಹ ಕಾರ್ಯಗಳು ಪಟ್ಟಣದಾದ್ಯಂತ ನಡೆದಿವೆ.
ಇದಕ್ಕೆ ಕಾರಣರ್ಯಾರು ಎನ್ನುವುದಕ್ಕಿಂತ ಇದಕ್ಕಿಂತ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಕಾಮಗಾರಿಗಳಾಗಿ ಪಟ್ಟಣವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡುವಂತಹ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉತ್ತಮ ಜನಪ್ರತಿನಿಧಿಗಳನ್ನು ಜನತೆ ನಿರೀಕ್ಷೆ ಮಾಡುತ್ತಿದ್ದಾರೆ.
ಆಕಾಂಕ್ಷಿಗಳಲ್ಲಿ ಉತ್ಸಾಹ: ಪ್ರಮುಖ ರಾಜಕೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಯುವಕರು ಉತ್ಸಾಹ ತೋರುತ್ತಿದ್ದಾರೆ. ಆದರೆ, ರಾಷ್ಟ್ರೀಯ ಪಕ್ಷಗಳು ಮಾತ್ರ ಈ ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದವರಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಪ್ರಾದೇಶಿಕ ಪಕ್ಷಗಳಲ್ಲಿಯೂ ರಾಷ್ಟ್ರೀಯ ಪಕ್ಷಗಳಲ್ಲಿ ಟಿಕೆಟ್ ವಂಚಿತರಾದವರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದು, ಅತೃಪ್ತರು ಸ್ಪರ್ಧೆಗಿಳಿದಲ್ಲಿ ಚುನಾವಣೆಗೆ ಹೆಚ್ಚಿನ ರಂಗು ಬರಲಿದೆ. ಇನ್ನು ಹಳೆಯ ಅಭ್ಯರ್ಥಿಗಳು ಪಾರಂಪರಿಕ ಮತಗಳನ್ನೇ ನೆಚ್ಚಿಕೊಂಡಿದ್ದರೆ, ಯುವಕರು ಹೊಸ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಕಾಮಗಾರಿಗೆ ಆದ್ಯತೆ ನೀಡಬೇಕಿದೆ: ಪಟ್ಟಣದ ಹಲವಾರು ಬಡಾವಣೆಗಳಲ್ಲಿನ ಒಳ ರಸ್ತೆಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಆದ್ಯತೆ ನೀಡಬೇಕಿದೆ. ಇನ್ನು ಚರಂಡಿಗಳ ವಿಷಯದಲ್ಲಿಯೂ ಇದೇ ಪರಿಸ್ಥಿತಿ ಇದ್ದು, ಕೆಲವೆಡೆ ಕಿತ್ತು ಹೋಗಿರುವ ಚರಂಡಿಗಳನ್ನು ಮರು ದುರಸ್ತಿ ಮಾಡಬೇಕಿದೆ. ಇನ್ನು ಶೌಚಾಲಯಗಳ ನಿರ್ವಹಣೆಯ ವಿಷಯದಲ್ಲಿಯೂ ಸಾಕಷ್ಟು ಸಮಸ್ಯೆಗಳಿದ್ದು, ಈ ಬಗ್ಗೆಯೂ ಪುರಸಭೆ ಗಮನ ನೀಡಬೇಕಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮಗೆ ಸ್ಪಂದಿಸುವವರಿಗೆ ಮತ ಹಾಕುತ್ತೇವೆ. ನಾವು ಯಾವುದೇ ಪಕ್ಷವನ್ನು ನೋಡುವುದಿಲ್ಲ ಎನ್ನುವ ಅಭಿಪ್ರಾಯವನ್ನು ವಾರ್ಡ್ಗಳಲ್ಲಿ ಭೇಟಿ ನೀಡಿದ ವೇಳೆ 'ಕನ್ನಡಪ್ರಭ'ಕ್ಕೆ ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದರು.
ಅಲ್ಪ ಸಮಾಧಾನ: ಪಟ್ಟಣದಲ್ಲಿ ಕುಡಿಯುವ ನೀರು ಮತ್ತು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಯು ಅಲ್ಪ ಮಟ್ಟಿನ ತೃಪ್ತಿ ತರುವ ನಿಟ್ಟಿನಲ್ಲಿದ್ದು, ಹಲವಾರು ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. ಇನ್ನು ಕೆಲವೆಡೆ ಸಣ್ಣ ರಸ್ತೆಗಳು ಅಭಿವೃದ್ಧಿ ಕಂಡಿದ್ದರೂ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಇನ್ನು ನೆಮ್ಮದಿಯ ವಿಷಯವೆಂದರೆ ಪಟ್ಟಣ ಪಂಚಾಯಿತಿಗೆ ಉತ್ತಮ ಗುಣಮಟ್ಟದ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದ್ದು ಎಲ್ಲರಲ್ಲಿ ಸಂತಸ ತಂದಿದೆ.