ಕಾಂಗ್ರೆಸ್ ಕಾರ್ಯಕರ್ತನ ಪ್ರತಿಭಟನೆ
ಮುಂಡರಗಿ: ಕಾಂಗ್ರೆಸ್ ಪಕ್ಷವು ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರಿಗೆ ಟಿಕೆಟ್ ನೀಡದೇ ನಿರಾಕರಿಸಿದೆ ಎಂದು ಆರೋಪಿಸಿ, ಟಿಕೆಟ್ ಆಕಾಂಕ್ಷಿಯೋರ್ವ ಕೈಯಲ್ಲಿ ಸೀಮೆ ಎಣ್ಣೆ ಹಿಡಿದುಕೊಂಡು ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿಯೇ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 14ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನ ಪತ್ನಿ ಸ್ಪರ್ಧೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರೂ ಪಕ್ಷದ ತಾಲೂಕು ಅಧ್ಯಕ್ಷರು ನಮ್ಮನ್ನು ಕಡೆಗಣಿಸಿ ಬೇರೆಯವರಿಗೆ ಟಿಕೆಟ್ ನೀಡುತ್ತಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿ ನಾಗರಾಜ ಹೊಂಬಳಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ತಾಲೂಕಿನಾದ್ಯಂತ ವಿವಿಧ ಗ್ರಾಮಗಳಿಗೆ ತೆರಳಿ ಪಕ್ಷದ ಸಂಘಟನೆಗಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ. ನನ್ನ ಪತ್ನಿ ರೇಖಾ ಅವರನ್ನು 14ನೇ ವಾರ್ಡಿನ ಅಭ್ಯರ್ಥಿಯಾಗಿ ನಿಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ನಾನು ಕೇಳಿಕೊಂಡಿದ್ದೆ. ನಿನ್ನೆ ರಾತ್ರಿಯವರೆಗೂ ನಮಗೇ ಟಿಕೇಟ್ ಕೊಡುತ್ತೇವೆಂದು ಜಿಲ್ಲಾ ವರಿಷ್ಠರಾದ ಎಚ್.ಕೆ. ಪಾಟೀಲ್ ಹಾಗೂ ವಾಸಣ್ಣ ಕುರಡಗಿಯವರು ಹೇಳಿದ್ದರು. ಆದರೆ ಶನಿವಾರ ಬೆಳಗ್ಗೆ ಜಿಲ್ಲಾ ವರಿಷ್ಠರನ್ನು ಭೇಟಿ ಮಾಡಿದಾಗ ನಿನಗೆ ಟಿಕೇಟ್ ನೀಡಿದರೆ, ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಹೇಮಂತಗೌಡ ಪಾಟೀಲ್ ಹೇಳುತ್ತಿದ್ದಾರೆ. ಇದು ಸರಿಯೇ ಎಂದು ಪ್ರಶ್ನಿಸಿದರು. ನಾನೊಬ್ಬ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಕಾರ್ಯದರ್ಶಿಯಾಗಿದ್ದರೂ ಕಳೆದ 7-8 ತಿಂಗಳಿಂದ ಪಕ್ಷದ ಎಲ್ಲ ಚಟುವಟಿಕೆಯಿಂದ ನನ್ನನ್ನು ದೂರ ಇಟ್ಟಿದ್ದಾರೆ. ಜಿಲ್ಲಾ ವರಿಷ್ಠರು ಹೇಳಿದರೂ ತಾಲೂಕು ಅಧ್ಯಕ್ಷರು ರಾಜಿನಾಮೆ ನಾಟಕವಾಡುವ ಮೂಲಕ ತಮ್ಮ ಹಠ ಸಾಧಿಸುತ್ತಿರುವುದು ಪಕ್ಷದ ಬೆಳವಣಿಗೆಗೆ ಸರಿಯಲ್ಲ. ಆದ್ದರಿಂದ ನಾನೀಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ ಎಂದರು.
ಸೀಮೆ ಎಣ್ಣೆ ಸಮೇತ ಪ್ರತಿಭಟನೆ: ತಮ್ಮ ಮಗ ನಾಗರಾಜ ಹೊಂಬಳಗಟ್ಟಿ ಅನೇಕ ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾನೆ. ಇದೀಗ ಪುರಸಭೆ ಚುನಾವಣೆಗೆ ಪಕ್ಷದ ಅಧ್ಯಕ್ಷರು 14ನೇ ವಾರ್ಡಿನ ಟಿಕೆಟ್ ನಿರಾಕರಿಸಿರುವುದನ್ನು ಖಂಡಿಸಿ, ತಂದೆ ಯಲ್ಲಪ್ಪ ಹೊಂಬಳಗಟ್ಟಿ, ತಾಯಿ ರೇಣುಕಾ ಹೊಂಬಳಗಟ್ಟಿ ಸೀಮೆ ಎಣ್ಣೆ ಸಮೇತ ತಾಲೂಕು ಕಾಂಗ್ರೆಸ್ ಕಾರ್ಯಾಲಯದ ಮುಂದೆ ಕುಳಿತುಕೊಂಡು ಪ್ರತಿಭಟನೆಗೆ ಮುಂದಾಗಿದ್ದರು.
ಪಕ್ಷದ ವರಿಷ್ಠರ ನಿರ್ಧಾರ: ಈ ಕುರಿತು ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹೇಮಂತಗೌಡ ಪಾಟೀಲ ಅವರನ್ನು ಮಾತನಾಡಿಸಿದಾಗ, ಪುರಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಾಲೂಕು ಅಧ್ಯಕ್ಷನಾಗಿ ಕೇವಲ ನಾನೊಬ್ಬನೇ ನಿರ್ಧಾರ ತೆಗೆದುಕೊಂಡಿಲ್ಲ. ಅದಕ್ಕಾಗಿಯೇ 10 ಜನ ಹಿರಿಯರ ಕಮಿಟಿಯನ್ನು ಮಾಡಿದ್ದು, ಅವರ ಹಾಗೂ ಪಕ್ಷದ ವರಿಷ್ಠರ ಮಾರ್ಗದರ್ಶನದಂತೆ ಆಯಾ ವಾರ್ಡ್‌ಗಳಲ್ಲಿ ಮಾನ್ಯತೆ ನೀಡಿ ಟಿಕೆಟ್ ಹಂಚಲಾಗುತ್ತಿದೆ. ನಾಗರಾಜ ಹೊಂಬಳಗಟ್ಟಿಯವರ ಬಗ್ಗೆ ನನಗೆ ಯಾವುದೇ ದ್ವೇಷವಿಲ್ಲ ಎಂದು ತಿಳಿಸಿದರು.