ನೇತ್ರ ರಕ್ಷಣೆ ಅವಶ್ಯ
ರೋಣ: ಮಾನವನಿಗೆ ನೇತ್ರ ಅತ್ಯಂತ ಪ್ರಮುಖ ಅಂಗವಾಗಿದ್ದು, ಯಾವುದೇ ರೀತಿಯಿಂದ ತೊಂದರೆಯಾಗದಂತೆ ನೇತ್ರ ರಕ್ಷಣೆ ಮಾಡಿಕೊಳ್ಳುವದು ಅವಶ್ಯ ಎಂದು ಅಚೀವರ್ಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಶಶಿಧರ ದಿಂಡೂರ ಹೇಳಿದರು.
ಅವರು ಈಚೆಗೆ ಎಲ್.ಐ. ದಿಂಡೂರ ಎಬಿಸಿ ಮಾಂಟೆಸ್ಸರಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಗದಗ, ರೋಟರಿ ಗದಗ ಸೆಂಟ್ರಲ್, ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಹಾಗೂ ಅಚೀವರ್ಸ್ ಎಜ್ಯುಕೇಶನ ಟ್ರಸ್ಟ್ ಗದಗ ಸಂಯುಕ್ತಾಶ್ರಯದಲ್ಲಿ ಜರುಗಿದ ಉಚಿತ ಕಣ್ಣಿನ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಬಿರವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಡಿ. ಮಹಾವರಕರ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ತೊಂದರೆಯಲ್ಲಿರುವ ಬಡ ಜನತೆಗೆ ಇಂತಹ ಶಿಬಿರಗಳು ಫಲಕಾರಿಯಾಗಲಿವೆ. ಸಂಸ್ಥೆಯ ಅಧ್ಯಕ್ಷ ಶಶಿಧರ ದಿಂಡೂರ ಅವರ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ಎಂದರು. ನ್ಯಾಯವಾದಿ ಎಲ್.ಎನ್. ಮಾತನಾಡಿದರು. ವೇದಿಕೆಯಲ್ಲಿ ಡಾ. ವೆಂಕಟೇಶ ಕುಲಕರ್ಣಿ, ಡಾ. ಚೇತನ ಎಂ, ಡಾ. ಸೌರವ ಷಾಹ, ಡಾ. ರಾಜೀವ ಪೂಜಾರ ಉಪಸ್ಥಿತರಿದ್ದರು. ಶಿಕ್ಷಕಿ ಎಸ್. ವೀಣಾ ನಿರೂಪಿಸಿದರು. ವಿಜಯಕುಮಾರ ಕಮ್ಮಾರ ಸ್ವಾಗತಿಸಿ, ವಂದಿಸಿದರು.