ಪಕ್ಷಗಳಿಗೆ ಬಂಡಾಯದ ಬಿಸಿ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 23
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶನಿವಾರ ಸಾಕಷ್ಟು ಭರಾಟೆ ಕಂಡು ಬಂದಿತ್ತು. ಪ್ರಮುಖ ರಾಜಕೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದ್ದು, ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತರು ಪ್ರಾದೇಶಿಕ ಪಕ್ಷಗಳಾದ ಜೆಡಿಎಸ್, ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕೆಜೆಪಿಯತ್ತ ಮುಖ ಮಾಡಿದ್ದಾರೆ. ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದು ರಾಷ್ಟ್ರೀಯ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ಹಲವರು ಶುಕ್ರವಾರ ತಡರಾತ್ರಿ, ಶನಿವಾರ ನಸುಕಿನ ಜಾವದ ವರೆಗೂ ತಮ್ಮ ನಾಯಕರಿಗೆ ದುಂಬಾಲು ಬಿದ್ದು ಟಿಕೆಟ್ ಪಡೆಯಲು ಹವಣಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಟಿಕೆಟ್ ಕೈ ತಪ್ಪುವುದು ನಿಶ್ಚಯವಾಗುತ್ತಿದ್ದಂತೆ, ಸಿದ್ಧಪಡಿಸಿಕೊಂಡಿದ್ದ ಎಲ್ಲ ದಾಖಲೆಗಳೊಂದಿಗೆ ಪ್ರಾದೇಶಿಕ ಪಕ್ಷಗಳ ಬಿ ಫಾರಂ ಪಡೆದು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಬಂಡಾಯದ ಬಿಸಿಯನ್ನು ಎದುರಿಸುವಂತಾಗಿದೆ.
ಹಳೆ-ಹೊಸ ಮುಖಗಳ ಸಮ್ಮಿಲನ: ಈ ಬಾರಿ ಪ್ರಮುಖ ರಾಷ್ಟ್ರೀಯ ಪಕ್ಷಗಳು ಹಳೆಯ ಹಾಗೂ ಹೊಸ ಮುಖಗಳನ್ನು ಜತೆ, ಜತೆಯಾಗಿಯೇ ಕಣಕ್ಕಿಳಿಸಿವೆ. ಇದರಿಂದ ತುರುಸಿನ ಪೈಪೋಟಿ ಕಂಡು ಬರಲಿದೆ. ಈ ಹಿಂದಿನ ಅವಧಿಯಲ್ಲಿ ಸಮರ್ಪಕವಾದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ ಎನ್ನುವ ಸಾರ್ವಜನಿಕರಿಗೆ ಹಳೆಯ ಮುಖಗಳು ಮತ್ತೆ ನುಂಗಲಾರದ ತುತ್ತಾಗಿ ಪರಿಣಮಿಸಲಿವೆ. ಇವುಗಳ ಮಧ್ಯೆಯೇ ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ ಮತ್ತು ಜೆಡಿಎಸ್ ಹೊಸ ಮುಖಗಳಿಗೆ ಆದ್ಯತೆ ನೀಡಿದ್ದರಿಂದ ಸಾರ್ವಜನಿಕರಲ್ಲಿ ಹೆಚ್ಚಿನ ಉತ್ಸಾಹಕ್ಕೂ ಕಾರಣವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಗಮನ ಸೆಳೆದ ಮೆರವಣಿಗೆ: ಶನಿವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದ್ದರಿಂದ ವಿವಿಧ ಪಕ್ಷಗಳ ಕಾರ್ಯಕರ್ತರು ನಡೆಸಿದ ಮೆರವಣಿಗೆ ಗಮನ ಸೆಳೆಯಿತು. ಆಯಾ ವಾರ್ಡಿನ ಅಭ್ಯರ್ಥಿಗಳು ತಮ್ಮ ಪಕ್ಷದ ಬಾವುಟ ಹಿಡಿದುಕೊಂಡು ಜಾಂಜ್ ಮೇಳ, ಡೊಳ್ಳು, ಹಲಗೆ ಹಾಗೂ ಸೌಂಡ್ ಸಿಸ್ಟಂಗಳಿದ್ದ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲು ಶನಿವಾರ ಬೆಳಗ್ಗೆಯಿಂದಲೇ ನಗರಸಭೆಗೆ ಆಗಮಿಸಿದರು. ಇದರಿಂದಾಗಿ ರೇಲ್ವೆ ಸ್ಟೇಶನ್, ಕೋರ್ಟ್ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಪ್ರಧಾನ ಅಂಚೆ ಕಚೇರಿ ಮುಂತಾದೆಡೆ ರಸ್ತೆಗಳು ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿದ್ದವು. ಅಭ್ಯರ್ಥಿಗಳ ಹಿಂದೆ ಬರುವ ಕಾರ್ಯಕರ್ತರನ್ನು, ಸಾವಿರಾರು ಜನ ಅವರ ಅಭಿಮಾನಿಗಳನ್ನು ತಡೆಯಲೆಂದು ಪೊಲೀಸರು ನಗರಸಭೆ ಸುತ್ತಲೂ ಬ್ಯಾರಿಕೇಡ್ ನಿರ್ಮಿಸಿ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಅಭ್ಯರ್ಥಿಯ ಜತೆಗೆ ನಾಲ್ಕು ಜನರಿಗೆ ಮಾತ್ರ ಒಳಗೆ ಹೋಗಲು ಅವಕಾಶ ಕಲ್ಪಿಸಿದ್ದರಿಂದ ನಗರಸಭೆ ಆವರಣದಲ್ಲಿ ಗಲಿಬಿಲಿ ಉಂಟಾಗಲಿಲ್ಲ.